ಬೃಹತ್ ಗಾಂಜಾ ಸಾಗಾಟ ಜಾಲ – ಇಬ್ಬರ ಬಂಧನ…
ಮಂಗಳೂರು: ಮಂಗಳೂರು ನಗರ ಹಾಗೂ ಕೇರಳಕ್ಕೆ ಸಾಗಾಟ ಮಾಡುತ್ತಿದ್ದ ಬೃಹತ್ ಪ್ರಮಾಣದ ಗಾಂಜಾ ಸಹಿತ ಒಟ್ಟು 43 ಲಕ್ಷ ರೂ. ವೌಲ್ಯದ ಸೊತ್ತುಗಳನ್ನು ನಗರ ಸಿಸಿಬಿ ಪೊಲೀಸರು ವಶಕ್ಕೆ ಪಡೆದು ಇಬ್ಬರನ್ನು ಬಂಧಿಸಿದ್ದಾರೆ.
ಮಂಜೇಶ್ವರದ ವರ್ಕಾಡಿ ಗ್ರಾಮದ ಪಾವೂರಿನ ನಿವಾಸಿ ಕಲಂದರ್ ಮೊಹಮ್ಮದ್ ಶಾ (35) ಹಾಗೂ ಕಾಸರಗೋಡು ಕುಂಜತ್ತೂರು ಗ್ರಾಮದ ಉದ್ಯಾವರದ ನಿವಾಸಿ ಮೊಯಿದ್ದೀನ್ ಅನ್ಸಾರ್ (29) ಬಂಧಿತರು.
ಬಂಧಿತರಿಂದ 132 ಕೆ.ಜಿ. ಗಾಂಜಾ, ಸಾಗಾಟಕ್ಕೆ ಬಳಸಿದ್ದ ಒಂದು ಪಿಕ್‌ಅಪ್ ವಾಹನ, ಬೆಂಗಾವಲಿಗೆ ಬಳಸಲಾಗಿದ್ದ ಒಂದು ಕಾರು, 2 ಮೊಬೈಲ್ ಸೇರಿ ಒಟ್ಟು 43 ಲಕ್ಷ ರೂ. ಮೌಲ್ಯದ ಸೊತ್ತು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕಾರ್ಯಾಚರಣೆಗೆ ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ಮಾರ್ಗದರ್ಶನದಲ್ಲಿ ನಗರ ಉಪ ವಿಭಾಗದ ಎಸಿಪಿ ಜಗದೀಶ್ ನೇತೃತ್ವದಲ್ಲಿ ಪೊಲೀಸ್ ನಿರೀಕ್ಷಕರಾದ ರಾಮಕೃಷ್ಣ, ಸಿಸಿಬಿ ಪೊಲೀಸ್ ಉಪ ನಿರೀಕ್ಷಕರಾದ ಕಬ್ಬಳ್ ರಾಜ್, ಪ್ರದೀಪ್ ಟಿ.ಆರ್., ಸಹಾಯಕ ಪೊಲೀಸ್ ಉಪ ನಿರೀಕ್ಷಕರಾದ ಮೋಹನ್ ಎಲ್., ಮೋಹನ್ ಕೆ.ವಿ., ತೇಜ ಕುಮಾರ್ ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು.
ಮಂಗಳೂರು ನಗರದಲ್ಲಿ ಗಾಂಜಾ ಸಾಗಾಟ ಅಥವಾ ಇನ್ನು ಯಾವುದೇ ಕಾನೂನು ಬಾಹಿರ ಚಟುವಟಿಕೆಗಳು ಕಂಡು ಬಂದರೆ ಕಾನೂನು ಮತ್ತು ಸುವ್ಯವಸ್ಥೆ ಉಪಪೊಲೀಸ್ ಆಯುಕ್ತರು ಅರುಣಾಂಗ್ಶು ಗಿರಿ, ಮೊಬೈಲ್ ನಂಬರ್ 9480802304, ಅಪರಾಧ ಮತ್ತು ಸಂಚಾರ ಉಪ ಪೊಲೀಸ್ ಆಯುಕ್ತರು ವಿನಯ್ ಎ ಗಾಂವ್‌ಕರ್, ಮೊಬೈಲ್ ನಂಬರ್ 9480802305 ಹಾಗೂ ನಿಸ್ತಂತು ಕೊಠಡಿ ನಂಬರ್ 08242220800 ಗೆ ಮಾಹಿತಿಯನ್ನು ನೀಡಲು ಕೋರಲಾಗಿದೆ.