ಶ್ರೀ ಸುಗುಣೇಂದ್ರ ತೀರ್ಥರು ಸಮಾಜದ ಬಹು ದೊಡ್ಡ ಆಸ್ತಿ: ಬಿ, ಯಸ್. ಯಡಿಯೂರಪ್ಪ
ಬೆಂಗಳೂರು:ಬಸವನಗುಡಿಯ ಶ್ರೀ ಗೋವರ್ಧನ ಕ್ಷೇತ್ರದಲ್ಲಿ ನಡೆಯುತ್ತಿರುವ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರ 46ನೇ ಚಾತುರ್ಮಾಸ್ಯ ಮಹೋತ್ಸವದಲ್ಲಿ ಮುಖ್ಯಮಂತ್ರಿ ಬಿ.ಯಸ್. ಯಡಿಯೂರಪ್ಪ ಸೆ.4 ರಂದು ಭಾಗವಹಿಸಿದರು.
ಈ ಸಂಧರ್ಭದಲ್ಲಿ ಮಾತನಾಡಿದ ಅವರು ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಅವರು ಸಮಾಜದ ದೊಡ್ಡ ಆಸ್ತಿಯಾಗಿದ್ದಾರೆ. ಶ್ರೀಗಳು ನಿರಂತರವಾಗಿ ಧಾರ್ಮಿಕ ಪ್ರಚಾರ ಮಾಡುತ್ತಿದ್ದು, ಭಾರತೀಯ ಮೌಲ್ಯಗಳನ್ನು ಬೋಧಿಸುವ ವಿದ್ಯಾಪೀಠ ಸ್ಥಾಪಿಸಿರುವ ಸ್ವಾಮೀಜಿಯವರ ದೂರದೃಷ್ಟಿ ಅಪಾರ ಎಂದರು.
ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಅವರು ಮಾತನಾಡಿ 108 ದೇಶಗಳಲ್ಲಿ ಕೃಷ್ಣ ಮಂದಿರ ನಿರ್ಮಾಣ ಮಾಡುವ ಗುರಿ ಹೊಂದಲಾಗಿದೆ. ಮುಸ್ಲಿಂ ರಾಷ್ಟ್ರದಲ್ಲಿ ಕೃಷ್ಣ ಮಂದಿರ ನಿರ್ಮಿಸುವ ಚಿಂತನೆ ಇದೆ ಎಂದರಲ್ಲದೆ ಇಳಿವಯಸ್ಸಿನಲ್ಲೂ ಪಾದರಸದಂತೆ ಓಡಾಡುವ ಯಡಿಯೂರಪ್ಪನವರು ಯುವಕರಿಗೆ ದಾರಿದೀಪವಾಗಲಿ, ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಯ ಜೊತೆಗೆ ಮಠ-ಮಂದಿರಗಳ ಸಮಸೆಗಳನ್ನೂ ಬಗೆಹರಿಸಲಿ ಎಂದರು.
ಮಾಜಿ ವಿಧಾನಪರಿಷತ್ ಸದಸ್ಯ ಗೋ.ಮಧುಸೂದನ, ಮಾಜಿ ಅಡ್ವೋಕೇಟ್ ಜನರಲ್ ಬಿ.ವಿ.ಆಚಾರ್ಯ, ಮಂಗಳೂರು ವಿವಿಯ ಮಾಜಿ ಕುಲಪತಿ ಕೆ.ಭೈರಪ್ಪ ಮೊದಲಾದವರು ಉಪಸ್ಥಿತರಿದ್ದರು.