ಹಳ್ಳಿಗಳ ಪುನಶ್ಚೇತನ, ಪಂಚಾಯತ್ ರಾಜ್ ಬಲವರ್ಧನೆಗೆ ಸಮೀಪಿಸುತ್ತಿದೆ ಗ್ರಾಮ ಪಂಚಾಯತ್ ಚುನಾವಣೆ…

ನಮ್ಮಲ್ಲಿ ಹಿರಿಯರ ಕಾಲದಲ್ಲಿ ಹಳ್ಳಿಗಳಲ್ಲಿ ಏನಾದರೂ ಸಾಮಾಜಿಕ ಸಮಸ್ಯೆ, ಕೌಟುಂಬಿಕ ಸಮಸ್ಯೆ, ಇನ್ನಿತರ ತಕರಾರು ಸಮಸ್ಯೆಗಳಿದ್ದಲ್ಲಿ ಅದಕ್ಕೆ ಪರಿಹಾರ ಆ ಊರಿನ ಹಿರಿಯರ ಸಮ್ಮಖದಲ್ಲಿ ಗ್ರಾಮದ ಮುಖ್ಯಸ್ಥನ ನೇತೃತ್ವದಲ್ಲಿ ಊರಿನ ಪಂಚಾಯತಿ ಕಟ್ಟೆಯಲ್ಲಿ ತೀರ್ಮಾನ ಕೈಗೊಂಡು ಪರಿಹಾರ ಕಂಡುಕೊಳ್ಳುವ ರೂಢಿಯಲ್ಲಿತ್ತು. ಇದೇ ಮುಂದೆ ರಾಜಕೀಯವಾಗಿ ಪರಿವರ್ತನೆಗೊಂಡು ಗ್ರಾಮ ಪಂಚಾಯತಿಗಳಾಗಿ ರೂಪುಗೊಂಡಿರುವುದು ತಮಗೆಲ್ಲಾ ತಿಳಿದಿರುವ ವಿಚಾರವಾಗಿದೆ.
ಪ್ರಾರಂಭದಲ್ಲಿ ಗ್ರಾಮ(ಮಂಡಲ) ಪಂಚಾಯತಿ ಚುನಾವಣೆಗಳು ಸ್ವಲ್ಪ ರಾಜಕೀಯ ರಹಿತವಾಗಿ ರೂಪುಗೊಂಡರೂ ಕಾಲಕ್ರಮೇಣ ರಾಜಕೀಯ ಪಕ್ಷಗಳ ನೇತೃತ್ವದಲ್ಲಿ ಪಕ್ಷಗಳ ಚಿಹ್ನೆಗಳ ಅಡಿಯಲ್ಲಿ ಚುನಾವಣೆಗಳು ನಡೆದದ್ದು ಇವೆ. ತದ ನಂತರದಿಂದ ಇವತ್ತಿನವರೆಗೆ ರಾಜಕೀಯ ರಹಿತ ಎಂದು ಹೇಳಿಕೊಳ್ಳುತ್ತಾ ಪಕ್ಷಗಳ ನೆರಳಿನಲ್ಲಿ ಚುನಾವಣೆಗಳು ನಡೆದು, ಸ್ಥಳೀಯ ಗ್ರಾಮ ಪ್ರತಿನಿಧಿಗಳು ಚುನಾಯಿತರಾಗುತ್ತಿರುವುದು ನಾವೆಲ್ಲ ಕಂಡ ತಿಳಿಸತ್ಯ ವಿಷಯವಾಗಿದೆ.
ರಾಜ್ಯದಲ್ಲಿಯೇ ಗ್ರಾ.ಪಂ. ಸದಸ್ಯರಿಗೆ ಗೌರವ ತಂದು ಕೊಟ್ಟವರು ಕರಾವಳಿಯ ರಾಜಕಾರಣಿಗಳು: ತಳಮಟ್ಟದ ಜನರಿಗೆ ಕಣ್ಣೆದುರು ಸಿಗುವ ಜನಪ್ರತಿನಿಧಿಗಳೆಂದರೆ ಗ್ರಾಮ ಪಂಚಾಯತ್ ಸದಸ್ಯರು. ಶಕ್ತಿ ಮೀರಿ ಸಾಮಾಜಿಕ ಸೇವೆ ಸಲ್ಲಿಸಿ ಆತ್ಮತೃಪ್ತಿ ಪಡೆಯವರೇ ಈ ಗ್ರಾಮ ಪ್ರತಿನಿಧಿಗಳು. ಇಷ್ಟಾದರೂ ಹಲವಾರು ವರ್ಷಗಳಿಂದ ಈ ಜನ ಪ್ರತಿನಿಧಿಗಳು ಪಡೆಯುತ್ತಿರುವ ಗೌರವಧನ ತೀರಾ ಕಡಿಮೆ ಇದ್ದು, ಗೌರವಧನ ಜನಸಾಮಾನ್ಯರಲ್ಲಿ ಹೇಳಿಕೊಳ್ಳಲು ನಾಚಿಕೆಯಾಗುವ ಪರಿಸ್ಥಿತಿಯಿತ್ತು. ಗ್ರಾಮ ಜನಪ್ರತಿನಿಧಿಗಳ ಕೂಗನ್ನು ಸ್ಥಳೀಯ ಸಂಸ್ಥೆಗಳಿಂದ ಚುನಾಯಿತಗೊಂಡ ಪ್ರತಿನಿಧಿಗಳು ಕೇಳಿಸಿಕೊಂಡರೂ ಪರಿಹಾರ ನೀಡುವಲ್ಲಿ ವಿಫಲರಾಗಿದ್ದರು.
ಇಂತಹ ಸಂದರ್ಭದಲ್ಲಿ ಕೆಳಸ್ತರದ ಪ್ರತಿನಿಧಿಗಳ ಪಾಲಿಗೆ ಬಂದು ನೆರವಾದವರೇ ಕೋಟಾ ಶ್ರೀನಿವಾಸ ಪೂಜಾರಿ. ಸಮಸ್ಯೆಗೆ ಪರಿಹಾರ ತಂದು ಸದಸ್ಯರ ಗೌರವಕ್ಕೆ ಗೌರವಧನ ಸರಕಾರದ ವತಿಯಿಂದಲೇ ಪಾವತಿಗೆ ಅವಕಾಶ ನೀಡಿ ಗ್ರಾಮ ಪ್ರತಿನಿಧಿಗಳಿಗೆ ಗೌರವ ತಂದು ಕೊಡುವಲ್ಲಿ ಆಗಿನ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವರು ಶೋಭಾ ಕರಂದ್ಲಾಜೆ. ಕೇಂದ್ರ ಹಣಕಾಸು ಯೋಜನೆ ಮೂಲಕ ಗ್ರಾಮೀಣಾಭಿವೃದ್ದಿಗೆ ಸ್ಪೂರ್ತಿ ನೀಡಿದವರು ಪ್ರಧಾನಿ ನರೇಂದ್ರ ಮೋದಿಜೀ.
ಸಾಮಾಜಿಕ ಸೇವೆಯೊಂದಿಗೆ ಗ್ರಾಮದ ಅಭಿವೃದ್ದಿಗೆ ಪಣತೊಟ್ಟ ಗ್ರಾ.ಪಂ.ಗಳಿಗೆ ಆಯ್ಕೆ ಗೊಂಡ ಜನಪ್ರತಿನಿಧಿಗಳಿಗೆ ಪಂಚಾಯತ್‌ಗಳಿಂದ ಲಭ್ಯವಾಗುವ ಅಲ್ಪಸ್ವಲ್ಪ ಅನುದಾನದಿಂದ ಗ್ರಾಮದ ಅಭಿವೃದ್ದಿ ಮರೀಚಿಕೆಯಾಗುತ್ತಿತ್ತು.
ಗ್ರಾಮ ಪಂಚಾಯತಿ ಪ್ರತಿನಿಧಿಗಳು ತಮಗೆ ಸಿಗುವ ಅನುದಾನದ ಬಗ್ಗೆ ಬೇಸರಗೊಂಡು ಲಭ್ಯ ಅನುದಾನದಲ್ಲೇ ತನ್ನ ಇತಿಮಿತಿಯಲ್ಲಿ ಉಪಯೋಗ ಮಾಡುತ್ತಿದ್ದರು. ಲಭ್ಯವಿದ್ದ ಅನುದಾನದಲ್ಲಿ ಎಲ್ಲವನ್ನು ಸರಕಾರವೇ ನಿಯಮಾವಳಿ ರೂಪಿಸಿ ಪ್ರತಿನಿಧಿಗಳನ್ನು ಕಟ್ಟಿ ಹಾಕುತ್ತಿತ್ತು.
ಗ್ರಾಮಗಳ ಉದ್ದಾರವೇ ದೇಶದ ಉದ್ದಾರ, ಗ್ರಾಮ ರಾಜ್ಯವೇ ರಾಮ ರಾಜ್ಯ ಎಂಬ ಪರಿಕಲ್ಪನೆಯೊಂದಿಗೆ ಗ್ರಾಮೀಣಾಭಿವೃದ್ದಿಗೆ ಬೇಕಾದಷ್ಟು ಅನುದಾನ ನೀಡಿ ಆನೆ ಬಲ ತುಂಬಿದವರೇ ನವಭಾರತದ ಹರಿಕಾರ, ಜಗನಾಯಕ ಪ್ರಧಾನಿ ನರೇಂದ್ರ ಮೋದೀಜಿಯವರು.
ಇದರಿಂದ ಪ್ರತಿ ಗ್ರಾಮ ಪಂಚಾಯತಿಗಳಿಗೆ ವಾರ್ಷಿಕವಾಗಿ ಬರುವ 4 -5 ಲಕ್ಷ ಅನುದಾನವು 2015 -16 ರಿಂದ 20 ಲಕ್ಷಕ್ಕೆ ಏರಿಕೆಗೊಂಡಿತು. ನಂತರ ಪ್ರತಿ ವರ್ಷ ಕೇಂದ್ರ ಸರಕಾರವು ವಿವಿಧ ವಾರ್ಷಿಕ ಹಣಕಾಸು ಯೋಜನೆಗಳ ಮೂಲಕ ನೇರವಾಗಿ ಗ್ರಾಮ ಪಂಚಾಯತ್‌ಗಳಿಗೆ ಅನುದಾನ ಹೆಚ್ಚು ಹೆಚ್ಚು ಬಿಡುಗಡೆ ಮಾಡಲಾರಂಭಿಸಿ ಪ್ರಸ್ತುತ ಪ್ರತಿ ಗ್ರಾಮ ಪಂಚಾಯತ್ ಗಳಿಗೆ ಪಂಚಾಯತ್ ಗಳ ಜನಸಂಖ್ಯೆಗೆ ಅನುಗುಣವಾಗಿ 30 -40 ಹಾಗೂ 50 – 75 ಲಕ್ಷ ಅನುದಾನ ಬರತೊಡಗಿದೆ.
ಉದ್ಯೋಗ ಖಾತರಿ ಯೋಜನೆಯಲ್ಲಿಯೂ ಸಹ ಅತ್ಯಧಿಕವಾದ ಅನುದಾನ ಪಂಚಾಯತಿಗಳಿಗೆ ಹರಿದು ಬರುತ್ತಿದ್ದು, ಕೂಲಿಯಾಳುಗಳ ದಿನ ಮಜೂರಿಯನ್ನು 2017-18ರಲ್ಲಿ ಗರಿಷ್ಟ ಏರಿಕೆ ಮಾಡಿರುವುದು ಸಹ ಮೋದಿ ನೇತೃತ್ವದ ಕೇಂದ್ರ ಸರಕಾರ. ಈ ಯೋಜನೆಯಿಂದ ಪ್ರಸ್ತುತ ಗ್ರಾಮೀಣ ಭಾಗದಲ್ಲಿ ಹಳ್ಳಿಗಳ ಒಳಗಿನ ಜನ ಸಂಚಾರ ರಸ್ತೆಗಳು ಸಹ ಕಾಂಕ್ರಿಟೀಕರಣಗೊಳ್ಳುತ್ತಿರುವುದು ಗ್ರಾಮೀಣ ಭಾಗದ ಜನರಿಗೆ ಸಂತಸ ತಂದಿದೆ.
ಕರಾವಳಿಯ ದಕ್ಷಿಣ ಕನ್ನಡದಾದ್ಯಂತ ಗ್ರಾಮೀಣಾಭಿವೃದ್ದಿಗೆ ತನ್ನ ಇತಿ-ಮಿತಿಯಲ್ಲಿ ಗರಿಷ್ಟ ಪ್ರಯತ್ನ ಪಟ್ಟು ಕೆಲಸ ಮಾಡುತ್ತಿರುವ ರಾಜ್ಯದ ನಂ.1 ಸಂಸದರಾದ ನಳೀನ್ ಕುಮಾರ್ ಕಟೀಲ್ ಹಾಗೂ ಅವರಿಗೆ ಶಕ್ತಿ ತುಂಬುತ್ತಿರುವ ಜಿಲ್ಲೆಯ ಶಾಸಕರು ಅಭಿವೃದ್ದಿ ಚಿಂತನೆಯಲ್ಲಿ ತೊಡಗಿಕೊಂಡವರಾಗಿದ್ದಾರೆ.
ಗ್ರಾಮೀಣ ಅಭಿವೃದ್ದಿ ಯೋಜನೆಗಳಿಗೆ ಶಾಸಕರ ಬೇಡಿಕೆಗಳಿಗೆ ಸ್ಪಂದಿಸಿ ಬೇಕಾಗುವ ಅನುದಾನ ನೀಡುತ್ತಿರುವ ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕಾರ್ಯ ಸಾಧನೆಯಿಂದ ಪಂಚಾಯತ್ ರಾಜ್ ಬಲವರ್ಧನೆಗೆ ಭದ್ರ ಬುನಾದಿಯಾಗಿದೆ.
ಈ ರೀತಿಯಲ್ಲಿ ಗ್ರಾಮದ ಗೌರವ ಮತ್ತು ಗ್ರಾಮೀಣಾಭಿವೃದ್ದಿಗೆ ಒತ್ತು ನೀಡುತ್ತಿರುವುದನ್ನು ಮನಗಂಡು ಸಾರ್ವಜನಿಕ ಮತದಾರರು ವಿಷಯ ಅರಿತುಕೊಂಡು ಮತದಾನ ಮಾಡಬೇಕಾದ ಅನಿವಾರ್ಯತೆ ಇದೆ.
ಹಳ್ಳಿಗಳ ಅಭಿವೃದ್ದಿಗೆ ಸ್ವಚ್ಛಂದ, ಭ್ರಷ್ಟಾಚಾರ ರಹಿತ ಪ್ರತಿನಿಧಿಗಳ ಆಯ್ಕೆ ಆಗಬೇಕಾಗಿದೆ. ಅಭಿವೃದ್ದಿ ಯೋಜನೆ, ನಾಗರೀಕ ರಕ್ಷಣೆ ಗ್ರಾಮ ಸುಭೀಕ್ಷೆ ಚಿಂತನೆ ಸಹ ಪಂಚಾಯತ್ ಮಟ್ಟದಲ್ಲಿ ಪ್ರಾಮುಖ್ಯತೆ ನೀಡಬೇಕಾಗಿದೆ.
ಒಟ್ಟಿನಲ್ಲಿ ಮತದಾರ ಯೋಜನೆ, ಯೋಚನೆಯಂತೆ ಗ್ರಾಮ ಪಂಚಾಯತ್ ಗಳಲ್ಲಿ ಮುಂದಿನ ಯೋಜನಬದ್ಧ ಕಾರ್ಯ ಯೋಜನೆ ಆಗಬೇಕಾಗಿದೆ. ಈ ರೀತಿಯಲ್ಲಿ ಸಶಕ್ತ ಭಾರತ, ಸಮರ್ಥ ಕರ್ನಾಟಕ ಪರಿಕಲ್ಪನೆಯೊಂದಿಗೆ ಗ್ರಾಮ ಸ್ವರಾಜ್ಯ ಕಲ್ಪನೆ ಆಗಬೇಕಾಗಿದ್ದು, ಗ್ರಾಮ ರಾಜ್ಯವು ರಾಮ ರಾಜ್ಯದೆಡೆಗೆ ಸಾಗಬೇಕಾಗಿದೆ.
ಲೇಖನ: ಪ್ರಭಾಕರ ಪ್ರಭು,ತಾಲೂಕು ಪಂಚಾಯತ್ ಸದಸ್ಯರು
ಸಂಗಬೆಟ್ಟು ಕ್ಷೇತ್ರ, ಬಂಟ್ವಾಳ ತಾಲೂಕು