ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು – ನೂತನ ವಿಭಾಗಗಳ ಆರಂಭ….

ಪುತ್ತೂರು: ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದಿಂದ ಪ್ರವರ್ತಿತವಾಗಿರುವ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯು 20ರ ಹರೆಯಕ್ಕೆ ದಾಪುಗಾಲಿಟ್ಟಿದ್ದು ಇದಕ್ಕೆ ಕಲಶಪ್ರಾಯವಾಗುವಂತೆ ತಾಂತ್ರಿಕ ಕ್ಷೇತ್ರದ ನೂತನ ತಂತ್ರಜ್ಞಾನವಾದ ಕಂಪ್ಯೂಟರ್ ಸೈನ್ಸ್ ಎಂಡ್ ಇಂಜಿನಿಯರಿಂಗ್ (ಡೇಟಾ ಸೈನ್ಸ್) ಸ್ನಾತಕ ವಿಭಾಗ ಮತ್ತು ಮಾಸ್ಟರ್ ಆಫ್ ಕಂಪ್ಯೂಟರ್ ಅಪ್ಲಿಕೇಶನ್ (MCA) ಎನ್ನುವ ಸ್ನಾತಕೋತ್ತರ ವಿಭಾಗವನ್ನು ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಪ್ರಾರಂಭಿಸುವುದಕ್ಕೆ ನವದೆಹಲಿಯ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯ (AICTE) ಅನುಮತಿ ದೊರಕಿದೆ.
ಇದಲ್ಲದೆ ಕಂಪ್ಯೂಟರ್ ಸೈನ್ಸ್, ಆರ್ಟಿಫೀಶಿಯಲ್ ಇಂಟೆಲಿಜೆನ್ಸ್ ಎಂಡ್ ಮೆಶಿನ್ ಲರ್ನಿಂಗ್, ಎಲೆಕ್ಟ್ರಾನಿಕ್ಸ್ ಎಂಡ್ ಕಮ್ಯುನಿಕೇಶನ್, ಸಿವಿಲ್ ಎಂಜಿನಿಯರಿಂಗ್ ಮತ್ತು ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿ ಕೋರ್ಸುಗಳು ಮತ್ತು ಎಂಬಿಎ ಸ್ನಾತಕೋತ್ತರ ವಿಭಾಗಗಳಲ್ಲೂ ಅಧ್ಯಯನಕ್ಕೆ ಅವಕಾಶವಿದೆ.
ತಂತ್ರಜ್ಞಾನ ಕ್ಷೇತ್ರದಲ್ಲಿ ದಿನದಿನವೂ ಆಮೂಲಾಗ್ರ ಬದಲಾವಣೆಗಳಾಗುತ್ತಿದ್ದು ಹೊಸ ಹೊಸ ಆವಿಷ್ಕಾರಗಳು ನಡೆಯುತ್ತಿವೆ. ಹೀಗಾಗಿ ಎಂಜಿನಿಯರಿಂಗ್ ಶಿಕ್ಷಣದಲ್ಲಿ ನೂತನ ವಿಭಾಗಗಳು ಪ್ರಾರಂಭವಾಗುತ್ತಿದೆ. ಜಾಗತಿಕ ಮಟ್ಟದಲ್ಲಿ ಉತ್ತಮ ಉದ್ಯೋಗಾವಕಾಶವನ್ನು ಒದಗಿಸಬಲ್ಲ ನೂತನ ಕೋರ್ಸುಗಳು ವಿದ್ಯಾರ್ಥಿಯ ವೃತ್ತಿಜೀವನವನ್ನು ಉಜ್ವಲಗೊಳಿಸಲು ಸಹಕಾರಿಯಾಗುತ್ತವೆ.
ನೂತನವಾಗಿ ಪ್ರಾರಂಭಗೊಂಡ ಕಂಪ್ಯೂಟರ್ ಸೈನ್ಸ್ ಎಂಡ್ ಎಂಜಿನಿಯರಿಂಗ್ (ಡೇಟಾ ಸೈನ್ಸ್) ವಿಭಾಗವು ಕಂಪ್ಯೂಟರ್ ಸೈನ್ಸ್ ವಿಭಾಗದಂತೆಯೇ ಇದ್ದು ದತ್ತಾಂಶಗಳ ಸಂಗ್ರಹ ಮತ್ತು ಅದರ ಪರಿಣಾಮಕಾರೀ ನಿರ್ವಹಣೆಯ ಬಗ್ಗೆ ವಿಸ್ತೃತವಾದ ಮಾಹಿತಿಯನ್ನು ಒದಗಿಸುತ್ತದೆ. ಕಳೆದ ವರ್ಷ ಪ್ರಾರಂಭಗೊಂಡ ಆರ್ಟಿಫೀಶಿಯಲ್ ಇಂಟೆಲಿಜೆನ್ಸ್ ಎಂಡ್ ಮೆಶಿನ್ ಲರ್ನಿಂಗ್ ವಿಭಾಗವು ನಮ್ಮಲ್ಲಿರುವ ಕೌಶಲ್ಯಗಳನ್ನು ಬಳಸಿ ತಂತ್ರಜ್ಞಾನವನ್ನು ನಿರ್ಮಿಸಿಕೊಂಡು ಕೃತಕ ಬುದ್ದಿಮತ್ತೆಯೊಂದಿಗೆ ಯಾವುದೇ ವ್ಯವಸ್ಥೆಯನ್ನು ಬಳಸುವಂತೆ ಮಾಡುವ ಬಗ್ಗೆ ತಿಳಿಸುತ್ತದೆ. ಇವೆರಡೂ ಕೂಡಾ ನೂತನ ತಂತ್ರಜ್ಞಾನಗಳಾಗಿದ್ದು ಪ್ರಸಕ್ತ ಸನ್ನಿವೇಶಕ್ಕೆ ಅಗತ್ಯವಾಗಿರುತ್ತದೆ.
ಇದಲ್ಲದೆ ಸ್ನಾತಕೋತ್ತರ ವಿಭಾಗದಲ್ಲಿ ಮಾಸ್ಟರ್ ಆಫ್ ಕಂಪ್ಯೂಟರ್ ಅಪ್ಲಿಕೇಶನ್ (MCA ಕೋರ್ಸನ್ನು ಪ್ರಾರಂಭಿಸಲಾಗಿದೆ. ಇದು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ ಸಂಯೋಜನೆಗೊಳಪಟ್ಟಿದ್ದು, ಎರಡು ವರ್ಷಗಳ ಅವಧಿಯದ್ದಾಗಿರುತ್ತದೆ. ಬಿಸಿಎ ಮತ್ತು ಬಿಎಸ್ಸಿ(ಕಂಪ್ಯೂಟರ್ ಸೈನ್ಸ್) ಪದವಿಯನ್ನು ಪಡೆದ ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕೆ ಇದು ಸಹಕಾರಿಯಾಗಿದೆ. ಈ ಕೋರ್ಸುಗಳಿಗೆ ವಿಶ್ವವಿದ್ಯಾನಿಲಯವು ನಿಗದಿಪಡಿಸಿದಂತೆ ನುರಿತ ಉಪನ್ಯಾಸಕ ವೃಂದವನ್ನು ನೇಮಕ ಮಾಡಲಾಗಿದೆ ಮತ್ತು ಸುಸಜ್ಜಿತ ಪ್ರಯೋಗಾಲಯಗಳನ್ನು ನಿರ್ಮಿಸಲಾಗಿದೆ.
ಕಾಲೇಜಿನ ತರಬೇತಿ ಮತ್ತು ನೇಮಕಾತಿ ವಿಭಾಗವು ಕ್ರಿಯಾಶೀಲವಾಗಿ ಕೆಲಸಮಾಡುತ್ತಿದ್ದು 83 ಕಂಪೆನಿಗಳು ಕ್ಯಾಂಪಸ್ ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸಿವೆ. ಕೊರೋನಾ ಅನಿಶ್ಚಿತತೆಯ ನಡುವೆಯೂ 85% ವಿದ್ಯಾರ್ಥಿಗಳಿಗೆ ಕಾರ್ಪೊರೇಟ್ ಜಗತ್ತಿನ ವಿವಿಧ ಬಹುರಾಷ್ಟ್ರೀಯ/ ರಾಷ್ಟ್ರೀಯ ಕಂಪೆನಿಗಳಲ್ಲಿ ಉದ್ಯೋಗಾವಕಾಶವು ದೊರಕಿದೆ. ವಿದ್ಯಾರ್ಥಿಗಳನ್ನು ಕ್ಯಾಂಪಸ್ ನೇಮಕಾತಿಗೆ ತರಬೇತುಗೊಳಿಸುವ ನಿಟ್ಟಿನಲ್ಲಿ ಪ್ರಸಿದ್ದ ತರಬೇತು ಸಂಸ್ಥೆಗಳಾದ ಕ್ಯೂ- ಸ್ಪೈಡರ್, ಜೆ-ಸ್ಪೈಡರ್ ಮತ್ತು ಎತ್ನಸ್ ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ದ್ವಿತೀಯ ವರ್ಷದಿಂದಲೇ ತರಬೇತಿ ಪ್ರರಂಭವಾಗುತ್ತಿದ್ದು, ಯೋಗ್ಯತಾ ಸಾಮರ್ಥ್ಯ, ಸಾಫ್ಟ್ ಸ್ಕಿಲ್ ಮತ್ತು ತಾಂತ್ರಿಕ ತರಬೇತಿಯನ್ನು ನೀಡಲಾಗುತ್ತದೆ. ಅಣಕು ಸಂದರ್ಶನ ಮತ್ತು ಗುಂಪು ಚರ್ಚೆಗಳನ್ನು ನಡೆಸಲಾಗುತ್ತದೆ. ಇವೆಲ್ಲವನ್ನೂ ಸಮರ್ಥವಾಗಿ ಬಳಸಿಕೊಂಡು ವಿದ್ಯಾರ್ಥಿಗಳು ಉನ್ನತ ಹುದ್ದೆಯೊಂದಿಗೆ ತಮ್ಮ ಭವಿಷ್ಯವನ್ನು ರೂಪಿಸಿಕೊಂಡಿದ್ದಾರೆ.
ಕಾಲೇಜು ಗುಣಮಟ್ಟದ ತಾಂತ್ರಿಕ ಶಿಕ್ಷಣವನ್ನು ನೀಡುವ ಜತೆಯಲ್ಲಿ ವಿದ್ಯಾರ್ಥಿಗಳನ್ನು ಸಂಸ್ಕಾರವಂತರನ್ನಾಗಿ ಮಾಡುವ ಕಾರ್ಯದಲ್ಲಿ ನಿರತವಾಗಿದೆ. ಅವರಲ್ಲಿರುವ ನಾವೀನ್ಯತೆಯನ್ನು ಗುರುತಿಸಿ ಬೆಳೆಸಿ ಅದರಿಂದ ಸಮಾಜಮುಖಿ ಕಾರ್ಯಗಳನ್ನು ನಡೆಸುವ ಮೂಲಕ ದೇಶದ ಸತ್ಪಜೆಗಳನ್ನಾಗಿ ಮಾಡುವ ತನ್ನ ಧ್ಯೇಯಕ್ಕೆ ಬದ್ಧವಾಗಿದೆ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಕಲ್ಲಡ್ಕ ಪ್ರಭಾಕರ ಭಟ್ ತಿಳಿಸಿದ್ದಾರೆ.

Sponsors

Related Articles

Back to top button