ವಿವೇಕಾನಂದ ಎಂಜಿನಿಯರಿಂಗ್ ಕಾಲೇಜು – ಉದ್ಯಮಶೀಲತೆ ಅರಿವು ಕಾರ್ಯಾಗಾರ…

ಪುತ್ತೂರು: ಇಂಜಿನಿಯರಿಂಗ್ ಶಿಕ್ಷಣವನ್ನು ಮುಗಿಸಿ ಕೆಲಸಕ್ಕಾಗಿ ಹುಡುಕಾಡುವ ಬದಲಿಗೆ ಇತರರಿಗೆ ಉದ್ಯೋಗವನ್ನು ನೀಡುವ ಉದ್ಯಮವನ್ನು ನಿರ್ಮಾಣ ಮಾಡಿ ಸ್ವತಂತ್ರ ಬದುಕನ್ನು ರೂಪಿಸಿಕೊಳ್ಳಿ ಎಂದು ಖಾದಿ ಮತ್ತು ಗ್ರಾಮೋದ್ಯೋಗ ತರಬೇತಿ ಕೇಂದ್ರ ಬೆಂಗಳೂರು ಇದರ ನಿರ್ದೇಶಕ ಡಾ.ಮೋಹನ್ ರಾವ್ ಹೇಳಿದರು.
ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಉದ್ಯಮಶೀಲತೆ ಅಭಿವೃದ್ಧಿ ಪ್ರಕೋಷ್ಟದ ಆಶ್ರಯದಲ್ಲಿ ಕಾಲೇಜಿನ ಶ್ರೀರಾಮ ಸಭಾಭವನದಲ್ಲಿ ನಡೆದ ಮಾಹಿತಿ ಕಾರ್ಯಾಗಾರದಲ್ಲಿ ಮಾತನಾಡಿದರು. ಖಾದಿ ಮತ್ತು ಗ್ರಾಮೋದ್ಯೋಗ ತರಬೇತಿ ಕೇಂದ್ರವು ಕೇಂದ್ರ ಸರ್ಕಾರದ ಶಾಸನಬದ್ಧ ಸಂಸ್ಥೆಯಾಗಿದ್ದು, ವಿವಿಧ ಕೌಶಲ ಅಭಿವೃದ್ಧಿ ವಿಷಯಗಳ ಬಗ್ಗೆ ಮಾಹಿತಿ ಕಾರ್ಯಾಗಾರಗಳನ್ನು ಆಯೋಜಿಸುತ್ತದೆ ಎಂದರು. ಪ್ರಧಾನಮಂತ್ರಿಗಳ ಉದ್ಯೋಗ ಸೃಷ್ಟಿ ಯೋಜನೆಯನ್ವಯ ಸ್ವಂತ ಉದ್ದಿಮೆ ಸ್ಥಾಪಿಸುವವರಿಗೆ ಬೇಕಾದ ಸಲಹೆ, ಮಾರ್ಗದರ್ಶನ ಮತ್ತು ಸರ್ಕಾರದ ಆರ್ಥಿಕ ನೆರವಿನ ಬಗ್ಗೆ ತಿಳುವಳಿಕೆ ನೀಡಲಾಗುತ್ತದೆ ಎಂದರು. ಸರ್ಕಾರದ ವಿವಿಧ ಯೋಜನೆಗಳನ್ನು ಬಳಸಿಕೊಂಡು ಸ್ವಂತ ಉದ್ದಿಮೆಯನ್ನು ಸ್ಥಾಪಿಸುವ ಬಗ್ಗೆ ವಿದ್ಯಾರ್ಥಿಗಳು ಮನಸ್ಸು ಮಾಡಬೇಕು ಎಂದು ಹೇಳಿದರು.
ಖಾದಿ ಮತ್ತು ಗ್ರಾಮೋದ್ಯೋಗ ತರಬೇತಿ ಕೇಂದ್ರದ ಸಹಾಯಕ ನಿರ್ದೇಶಕರಾದ ಪಿ ಎಸ್ ಬಾಲಕೃಷ್ಣನ್ ವಿದ್ಯಾರ್ಥಿಗಳೊಂದಿಗೆ ಮಾಹಿತಿ ಹಂಚಿಕೊಳ್ಳುತ್ತಾ ಸಂವಾದ ನಡೆಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಮಹೇಶ್‍ಪ್ರಸನ್ನ.ಕೆ ಯಾವುದೇ ಕೆಲಸವನ್ನು ಮಾಡಬೇಕಾದರೂ ಅದರ ಬಗ್ಗೆ ಸೂಕ್ತ ಮಾಹಿತಿಯನ್ನು ಪಡೆದುಕೊಂಡಿರಬೇಕು ಮತ್ತು ಅನುಭವವನ್ನು ಗಳಿಸಿರಬೇಕು ಆಗ ಅದರಲ್ಲಿ ಯಶಸ್ಸನ್ನು ಸಾಧಿಸಬಹುದು. ಉದ್ಯಮಗಳನ್ನು ಸ್ಥಾಪಿಸುವ ಮೊದಲು ಅದರ ಬಗ್ಗೆ ತರಬೇತಿಯನ್ನು ಪಡೆದುಕೊಳ್ಳುವುದು ಸೂಕ್ತ ಎಂದು ಅಭಿಪ್ರಾಯಪಟ್ಟರು.
ಇನ್ನೋರ್ವ ಸಹಾಯಕ ನಿರ್ದೇಶಕ ಎಮ್ ಲಿಂಗದೊರೈ, ವಿಶ್ರಾಂತ ಸಹಾಯಕ ನಿರ್ದೇಶಕ ಡಾ.ಟಿ.ಎಸ್ ಮೋಸೆಸ್, ಉದ್ಯಮಶೀಲತೆ ಅಭಿವೃದ್ಧಿ ಪ್ರಕೋಷ್ಟದ ಸಹ ಸಂಯೋಜಕರಾದ ಪ್ರೊ.ನವೀನ್ ಸಿ ವಿ, ಪ್ರೊ.ರಾಘವೇಂದ್ರ ಪ್ರಸಾದ್ ಎಸ್.ಎ, ಇತರ ವಿಬಾಗಗಳ ಮುಖ್ಯಸ್ಥರು, ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗ ಮುಖ್ಯಸ್ಥ ಮತ್ತು ಉದ್ಯಮಶೀಲತೆ ಅಭಿವೃದ್ಧಿ ಪ್ರಕೋಷ್ಟದ ಸಂಯೋಜಕ ಡಾ.ಮನುಜೇಶ್.ಬಿ.ಜೆ ಸ್ವಾಗತಿಸಿ ವಂದಿಸಿದರು. ಸಹ ಸಂಯೋಜಕಿ ಪ್ರೊ.ತಪಸ್ವಿನಿ ಕಾರ್ಯಕ್ರಮ ನಿರ್ವಹಿಸಿದರು.

 

Sponsors

Related Articles

Back to top button