ವಿವೇಕಾನಂದ ಎಂಜಿನಿಯರಿಂಗ್ ಕಾಲೇಜು – ಎಂಸಿಎ ಸ್ನಾತಕೋತ್ತರ ವಿಭಾಗ ಆರಂಭ…

ಪುತ್ತೂರು: ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯಲ್ಲಿ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ ಸಂಯೋಜನೆಗೊಳಪಟ್ಟ ಎರಡು ವರ್ಷಗಳ ಎಂಸಿಎ ಸ್ನಾತಕೋತ್ತರ ವಿಭಾಗವನ್ನು ಪ್ರಾರಂಭಿಸಲಾಗಿದೆ.
ಪದವಿಯನ್ನು ಪೂರೈಸಿದ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಎಂಸಿಎ ವಿಭಾಗವನ್ನು ಪ್ರಾರಂಭಿಸಲಾಗಿದೆ. ಬಿಸಿಎ, ಬಿಎಸ್ಸಿ ಪದವಿಯನ್ನು ಪಡೆದವರು ಈ ಕೋರ್ಸಿಗೆ ಸೇರಲು ಅರ್ಹರಾಗಿರುತ್ತಾರೆ. ಸಂಪೂರ್ಣ ಹವಾನಿಯಂತ್ರಿತ ತರಗತಿ ಕೊಠಡಿಗಳು, ಸುಸಜ್ಜಿತ ಪ್ರಯೋಗಾಲಯಗಳು ಈಗಾಗಲೇ ಸಜ್ಜುಗೊಂಡಿವೆ.
12 ವರ್ಷಗಳ ಶೈಕ್ಷಣಿಕ ಅನುಭವವಿರುವ ಪಿಎಚ್‍ಡಿ ಪದವೀಧರೆ ಡಾ.ವಂದನಾ.ಬಿ.ಎಸ್ ಎಂಸಿಎ ವಿಭಾಗದ ನಿರ್ದೇಶಕರಾಗಿರುತ್ತಾರೆ. ಅವರ ಸಮರ್ಥ ಸಾರಥ್ಯದಲ್ಲಿ ಅನುಭವೀ ಉಪನ್ಯಾಸಕ ವೃಂದವು ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ದಿಗೆ ಕಂಕಣಬದ್ಧವಾಗಿದೆ.
ಇಂಜಿನಿಯರಿಂಗ್ ಕಾಲೇಜಿಗೆ ಪ್ರತಿ ಶೈಕ್ಷಣಿಕ ವರ್ಷದಲ್ಲಿ 100ಕ್ಕೂ ಮಿಕ್ಕಿ ಕಂಪೆನಿಗಳು ಕ್ಯಾಂಪಸ್ ನೇಮಕಾತಿಗಾಗಿ ಆಗಮಿಸುತ್ತವೆ. ಎಲ್ಲಾ ಅರ್ಹ ವಿದ್ಯಾರ್ಥಿಗಳು ವಿವಿಧ ಕಂಪೆನಿಗಳಲ್ಲಿ ನೇಮಕಾತಿ ಆದೇಶವನ್ನು ಪಡೆದುಕೊಳ್ಳುತ್ತಿದ್ದಾರೆ. ಈ ಕಂಪೆನಿಗಳು ಎಂಸಿಎ ಪದವೀಧರರನ್ನು ಕೂಡಾ ನೇಮಕಾತಿ ಮಾಡಿಕೊಳ್ಳುತ್ತಿದ್ದು, ಅದಕ್ಕಾಗಿ ಸೂಕ್ತ ಒಡಂಬಡಿಕೆಯನ್ನು ಮಾಡಿಕೊಳ್ಳಲಾಗಿದೆ.
ವಿದ್ಯಾರ್ಥಿಗಳ ಸುಪ್ತ ಪ್ರತಿಭೆಗಳ ಅನಾವರಣಕ್ಕಾಗಿ ಅನೇಕ ಪಠ್ಯೇತರ ಚಟುವಟಿಕೆಗಳು, ಕ್ಯಾಂಪಸ್ ನೇಮಕಾತಿಗಾಗಿ ವಿವಿಧ ತರಬೇತಿ ಕಾರ್ಯಕ್ರಮಗಳು, ಕಾರ್ಪೊರೇಟ್ ಸಂಸ್ಥೆಗಳೊಂದಿಗೆ ಒಡಂಬಡಿಕೆಗಳು, ಕೈಗಾರಿಕಾ ಸಂಸ್ಥೆಗಳ ಭೇಟಿ, ನೂತನ ಸಾಫ್ಟ್ ವೇರ್ ತರಬೇತಿಗಳನ್ನು ನಡೆಸಲಾಗುತ್ತದೆ.
ಈ ಕೋರ್ಸಿಗೆ ದಾಖಲಾತಿ ಈಗಾಗಲೇ ಪ್ರರಂಭವಾಗಿದ್ದು ಮ್ಯಾನೇಜ್‍ಮೆಂಟು ಸೀಟುಗಳು ಭರ್ತಿಯಾಗಿವೆ. ಸಾಮಾನ್ಯ ಪ್ರವೇಶ ಪರೀಕ್ಷೆ ಪ್ರಕ್ರಿಯೆಯ ಮೂಲಕ ಆಸಕ್ತ ವಿದ್ಯಾರ್ಥಿಗಳು ಇಲ್ಲಿ ಸೀಟುಗಳನ್ನು ಪಡೆದುಕೊಳ್ಳಬಹುದು ಎಂದು ಪ್ರಾಂಶುಪಾಲ ಡಾ.ಮಹೇಶ್‍ಪ್ರಸನ್ನ ತಿಳಿಸಿದ್ದಾರೆ.

Sponsors

Related Articles

Back to top button