ಬಾಲವಿಕಾಸ ಆಂಗ್ಲಮಾಧ್ಯಮ ಶಾಲೆ ಮಾಣಿ – ಪ್ರತಿಭಾ ಪುರಸ್ಕಾರ ಮತ್ತು ನೂತನ ಶಾಲಾ ಕೈಪಿಡಿ ಬಿಡುಗಡೆ…
ಬಂಟ್ವಾಳ: “ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾದ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಬಾಲವಿಕಾಸ ಆಂಗ್ಲಮಾಧ್ಯಮ ಶಾಲೆಯಲ್ಲಿ ನೀಡಲಾಗುತ್ತಿದೆ ಇದು ಬಂಟ್ವಾಳ ತಾಲೂಕಿಗೆ ಹೆಮ್ಮೆಯ ವಿಚಾರ” ಎಂದು ನಿವೃತ್ತ ಮುಖ್ಯಶಿಕ್ಷಕ ಸುರೇಶ್ ಶೆಟ್ಟಿ ಹೇಳಿದ್ದಾರೆ.
ಮಾಣಿ ಬಾಲವಿಕಾಸ ಆಂಗ್ಲಮಾಧ್ಯಮ ಶಾಲೆಯಲ್ಲಿ ಮಾ.12 ರಂದು ಶಾಲೆಯ ಮಾಹಿತಿ ಕೈಪಿಡಿಯನ್ನು ಬಿಡುಗಡೆಗೊಳಿಸಿ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪುಸ್ತಕ ಓದುವಿಕೆ ಮಕ್ಕಳ ನಿರಂತರ ಹವ್ಯಾಸವಾಗಬೇಕು. ಪುಸ್ತಕಗಳು ನೀಡುವ ಮಾಹಿತಿ, ಜ್ಞಾನ,ಭವಿಷ್ಯಕ್ಕೆ ದಾರಿ ದೀಪವಾಗುತ್ತದೆ ಎಂದೂ ಅವರು ಹೇಳಿದ್ದಾರೆ.
ಅಧ್ಯಕ್ಷತೆ ವಹಿಸಿದ್ದ ಶಾಲಾ ಸಂಚಾಲಕ ಪ್ರಹ್ಲಾದ್ ಜೆ.ಶೆಟ್ಟಿ ಮಾತನಾಡಿ, ಬಾಲವಿಕಾಸ ಆಂಗ್ಲಮಾಧ್ಯಮ ಶಾಲೆ ಕಳೆದ 33 ವರ್ಷಗಳಿಂದ ಎಲ್ಲಾ ಪೋಷಕರು ಹಾಗೂ ದಾನಿಗಳ ನೆರವಿನಿಂದ ಯಶಸ್ವಿಯಾಗಿ ಮುನ್ನಡೆಯುತ್ತಾ ಬಂದಿದೆ. ಅನಿವಾರ್ಯವಾಗಿ ಹೆದ್ದಾರಿಗೆ ಶಾಲಾ ಕಟ್ಟಡ ಹೋಗುವುದರಿಂದ ಹೊಸದಾದ ಸುಸಜ್ಜಿತ ಶಾಲಾ ಕಟ್ಟಡವನ್ನು ಪಾಳ್ಯದ ವಿದ್ಯಾನಗರದಲ್ಲಿ ನಿರ್ಮಿಸಲಾಗುತ್ತಿದೆ ಎಂದರು.
ಶಾಲೆಯ ಆಡಳಿತಾಧಿಕಾರಿ ಸಿ.ಶ್ರೀಧರ್ ಮಾತನಾಡಿ, ಕೊರೋನಾ ಸಂಕಷ್ಟವನ್ನು ಶಾಲೆಯ ಆಡಳಿತ ಮಂಡಳಿಯ ಸಹಕಾರದೊಂದಿಗೆ ಇಲ್ಲಿನ ಶಿಕ್ಷಕವರ್ಗ ಸಮರ್ಥವಾಗಿ ಎದುರಿಸಿ ಶೈಕ್ಷಣಿಕ ಸಾಧನೆಯಲ್ಲಿ ಮುಂಚೂಣಿಯಲ್ಲಿದೆ ಎಂದರು.
ಶೈಕ್ಷಣಿಕ ಅಧಿಕಾರಿ ರವೀಂದ್ರ ಡಿ. ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ಕೌಶಲ್ಯಯುತ ಶಿಕ್ಷಣವು ಭವಿಷ್ಯವನ್ನು ರೂಪಿಸಲು ಬುನಾದಿಯಾಗುತ್ತದೆ. ಆ ನಿಟ್ಟಿನಲ್ಲಿ ಕೌಶಲ್ಯವೃದ್ಧಿಗೆ ಪೂರಕವಾದ ಶೈಕ್ಷಣಿಕ ವಾತಾವರಣವನ್ನು ನಮ್ಮ ಸಂಸ್ಥೆ ವಿದ್ಯಾರ್ಥಿಗಳಿಗೆ ಕಲ್ಪಿಸಿಕೊಟ್ಟಿದೆ ಎಂದರು .
2020-21ನೇ ಸಾಲಿನ ಎಸ್. ಎಸ್.ಎಲ್. ಸಿ. ಪರೀಕ್ಷೆಯಲ್ಲಿ ಪ್ರಥಮಸ್ಥಾನಿಯಾದ ಮೇಘಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ವಿಶಿಷ್ಟ ಶ್ರೇಣಿ ಗಳಿಸಿದ ವಿದ್ಯಾರ್ಥಿಗಳನ್ನು, ರಾಜ್ಯ ಪುರಸ್ಕಾರ ವಿಜೇತರಾದ ಸ್ಕೌಟ್, ಗೈಡ್, ಕಬ್
ಹಾಗೂ ಬುಲ್ ಬುಲ್ ವಿದ್ಯಾರ್ಥಿಗಳನ್ನು ಮತ್ತು ಕಲಿಕೆಯಲ್ಲಿ ಸಾಧನೆಗೈದ ವಿವಿಧ ತರಗತಿಯ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ಶಾಲಾ ಮುಖ್ಯಶಿಕ್ಷಕಿ ವಿಜಯಲಕ್ಷ್ಮೀ ವಿ. ಶೆಟ್ಟಿ ಸ್ವಾಗತಿಸಿದರು. ಶಿಕ್ಷಕಿ ಲೀಲಾ ವಂದಿಸಿದರು. ಶಿಕ್ಷಕಿಯರಾದ ಅನಿತಾ ಜಿ ಹಾಗೂ ಮಮತಾ ಕಾರ್ಯಕ್ರಮ ನಿರ್ವಹಿಸಿದರು.
ಬಾಲವಿಕಾಸ ಟ್ರಸ್ಟ್ ಅಧ್ಯಕ್ಷ ಬಿ.ಎಸ್.ನಾಯ್ಕ್ , ಕಾರ್ಯದರ್ಶಿ ಮಹೇಶ್ ಜೆ. ಶೆಟ್ಟಿ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಮೋಹನ್ ಪಿ.ಎಸ್, ಟ್ರಸ್ಟಿಗಳಾದ ಯತಿರಾಜ್ ಶೆಟ್ಟಿ, ಜಯಲಕ್ಷ್ಮಿ ಪೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.