ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಜನತೆಯ ಸಹಕಾರ ಅಗತ್ಯ-ಮಹಾವೀರ ಅಜ್ರಿ…..
ಪುತ್ತೂರು: ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಜನತೆಯ ಸಹಕಾರ ಅಗತ್ಯ. ಸಾಮಾಜಿಕ ಪರಿವರ್ತನೆಗೆ ಶ್ರಮಿಸುತ್ತಿರುವ ಜನಜಾಗೃತಿ ವೇದಿಕೆಯ ಪಾತ್ರ ಮಹತ್ತರ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕರಾವಳಿ ವಿಭಾಗದ ಪ್ರಾದೇಶಿಕ ನಿರ್ದೇಶಕ ಕೆ.ಮಹಾವೀರ ಅಜ್ರಿ ಹೇಳಿದರು.
ಅವರು ಬುಧವಾರ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಪುತ್ತೂರು ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಂಟಿ ಆಶ್ರಯದಲ್ಲಿ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ನಡೆದ ತಾಲೂಕು ಜನಜಾಗೃತಿ ವೇದಿಕೆಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಜನಜಾಗೃತಿ ವೇದಿಕೆ ಮೂಲಕ ದುಶ್ಚಟಮುಕ್ತ ಸಮಾಜದ ಚಿಂತನೆ ಜಾಗೃತಿಯನ್ನುಂಟು ಮಾಡುತ್ತಿದೆ. ನಿತ್ಯ ಜೀವನದಲ್ಲಿ ನಾವು ಮಾಡುವ ಸೇವೆ ಸಮಾಜದ ಇತರರಿಗೆ ಮಾದರಿಯಾಗಬೇಕು ಎಂದು ಅವರು ಹೇಳಿದರು.
ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ಎನ್.ಎ.ರಾಮಚಂದ್ರ ಮಾತನಾಡಿ, ಡಾ.ಡಿ.ವಿರೇಂದ್ರ ಹೆಗ್ಗಡೆ ಅವರ ಚಿಂತನೆಯಂತೆ ಪ್ರತಿಯೊಬ್ಬರೂ ಸಮಾಜಮುಖಿ ಬದುಕಿಗೆ ಅರ್ಥ ಕಂಡುಕೊಳ್ಳಬೇಕು. ಹಣದ ಶ್ರೀಮಂತಿಕೆಗಿಂತ ಹೃದಯ ಶ್ರೀಮಂತಿಕೆ ತೋರುವ ಪರಿವರ್ತನೆಯಾಗಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಜನಜಾಗೃತಿ ವೇದಿಕೆಯ ನಿರ್ಗಮನ ಅಧ್ಯಕ್ಷ ಪದ್ಮನಾಭ ಶೆಟ್ಟಿ ಮಾತನಾಡಿ, ಜೀವನಕ್ಕೆ ಅರ್ಥಕಂಡುಕೊಳ್ಳುವ ಕೆಲಸ ವೇದಿಕೆಯ ಮೂಲಕ ನಡೆದಿದೆ. ಸುಮಾರು ನಾಲ್ಕು ಸಾವಿರಕ್ಕೂ ಅಧಿಕ ಮದ್ಯವರ್ಜನ ಶಿಬಿರಗಳ ಮೂಲಕ ಮದ್ಯಮುಕ್ತ ಸಮಾಜ ನಿರ್ಮಾಣವಾಗಿದೆ ಎಂದರು.
ಜನಜಾಗೃತಿ ವೇದಿಕೆ ತಾಲೂಕು ನಿಯೋಜಿತ ಅಧ್ಯಕ್ಷ ಮಹಾಬಲ ರೈ ಮಾತನಾಡಿದರು.
ಜನಜಾಗೃತಿ ವೇದಿಕೆ ರಾಜ್ಯ ಸಲಹಾ ಸಮಿತಿ ಸದಸ್ಯ ಸಾಜ ರಾಧಾಕೃಷ್ಣ ಆಳ್ವ, ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ, ಕೇಂದ್ರ ಒಕ್ಕೂಟದ ಅಧ್ಯಕ್ಷ ರಾಮಣ್ಣ ಗೌಡ ಗುಂಡೋಳೆ, ಮಾಜಿ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು, ಮಹಾಲಿಂಗೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ನನ್ಯ ಅಚ್ಯುತ ಮೂಡೆತ್ತಾಯ, ವಲಯ ಅಧ್ಯಕ್ಷರುಗಳಾದ ಜಯಾನಂದ ಬಂಟ್ರಿಯಾಲ್, ಶೀನಪ್ಪ ಕುಲಾಲ್, ಮಹೇಶ್ ಕೆ., ಮೋಹನ ಪಕ್ಕಳ, ವಿಕ್ರಮ ರೈ, ಪ್ರಕಾಶ್ಚಂದ್ರ, ವಸಂತಿ ಜಿ.ಕೆ. ಮೇಲ್ವಿಚಾರಕಿ ಪಾವನ ಉಪಸ್ಥಿತರಿದ್ದರು.
ಜನಜಾಗೃತಿ ವೇದಿಕೆ ತಾಲೂಕು ಕಾರ್ಯದರ್ಶಿ ಜನಾರ್ಧನ ಎಸ್ ಸ್ವಾಗತಿಸಿದರು. ಯೋಜನೆಯ ಕೃಷಿ ಅಧಿಕಾರಿ ಉಮೇಶ್ ವಂದಿಸಿದರು. ಬಾಬು, ಸಂದೇಶ್ ಕಾರ್ಯಕ್ರಮ ನಿರೂಪಿಸಿದರು.