ಮುಂಡ್ಕೂರು ಗ್ರಾ. ಪಂ. ಅಭಿವೃದ್ಧಿ ಅಧಿಕಾರಿ ಅಮಾನತು ಆದೇಶವನ್ನು ಹಿಂಪಡೆಯುವಂತೆ ಮುಖ್ಯ ಮಂತ್ರಿಯವರಿಗೆ ಮಂಜುನಾಥ ಭಂಡಾರಿ ಪತ್ರ…
ಉಡುಪಿ: ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮುಂಡ್ಕೂರು ಗ್ರಾಮ ಪಂಚಾಯತಿಯ ಪಂಚಾಯತ ಅಭಿವೃದ್ಧಿ ಅಧಿಕಾರಿ ಶ್ರೀ ರವಿರಾಜ.ಎಚ್. ರವರ ಅಮಾನತ್ತು ಆದೇಶವನ್ನು ಹಿಂಪಡೆಯುವ ಕುರಿತು ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಅವರು ಮುಖ್ಯ ಮಂತ್ರಿಯವರಿಗೆ ಪತ್ರ ಬರೆದ್ದಿದಾರೆ.
ಮುಖ್ಯ ಮಂತ್ರಿಯವರಿಗೆ ಬರೆದ ಪತ್ರದಲ್ಲಿ ಮಂಜುನಾಥ ಭಂಡಾರಿ ಅವರು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ(ರಿ) ಉಡುಪಿ ಜಲ್ಲಾ ಘಟಕವು ನನಗೆ ಪತ್ರದ ಮೂಲಕ ಮನವಿ ನೀಡಿ, ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮುಂಡ್ಕೂರು ಗ್ರಾಮ ಪಂಚಾಯತಿಯ ಪಂಚಾಯತ ಅಭಿವೃದ್ಧಿ ಅಧಿಕಾರಿಯಾದ ಶ್ರೀ ರವಿರಾಜ .ಎಚ್. ಅವರನ್ನು ದಿನಾಂಕ 21/4/2022 ರಂದು ಉಡುಪಿ ಜಿಲ್ಲಾ ಪಂಚಾಯತ್ ನ ಮುಖ್ಯಕಾರ್ಯನಿರ್ವಹಣಾಧಿಕಾರಿಗಳು ಸೇವೆಯಿಂದ ಅಮಾನತ್ತುಗೊಳಿಸಿರುವುದಾಗಿ ತಿಳಿಸಿದ್ದಾರೆ. ಶ್ರೀ ರವಿರಾಜ. ಎಚ್.ರವರು ಪ್ರಾಮಾಣಿಕ ಹಾಗು ಕ್ರೀಯಾಶೀಲ ಅಧಿಕಾರಿಯಾಗಿದ್ದರೂ ರಾಜಕೀಯ ಕಾರಣದಿಂದಾಗಿ ಕರ್ತವ್ಯಲೋಪದ ಆರೋಪದಡಿ ಅಮಾನತ್ತು ಮಾಡಿರುವುದಾಗಿ ಪಂಚಾಯತ ಅಭಿವೃದ್ಧಿ ಅಧಿಕಾರಿಗಳ ಸಂಘದವರು ದೂರಿರುತ್ತಾರೆ. ಅಮಾನತ್ತು ಆದೇಶವನ್ನು ಕೂಡಲೇ ಹಿಂಪಡೆಯದಿದ್ದಲ್ಲಿ ಗ್ರಾಮ ಪಂಚಾಯತಿಯ ಎಲ್ಲಾ ಹಂತದ ಸಿಬ್ಬಂದಿಯೊಂದಿಗೆ , ದಿನಾಂಕ 25/4/2022 ರಿಂದ ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಳ್ಳುವ ಬಗ್ಗೆ ಈಗಾಗಲೇ ಪತ್ರದ ಮೂಲಕ ತಿಳಿಸಿರುತ್ತಾರೆ.
ಉಡುಪಿ ಜಿಲ್ಲೆಯಲ್ಲಿ ಒಟ್ಟು 165 ಗ್ರಾಮ ಪಂಚಾಯತಗಳಿದ್ದು ಒಂದು ವೇಳೆ ಸರಿಯಾದ ಸಂದರ್ಭದಲ್ಲಿ ಸೂಕ್ತ ಕ್ರಮ ಕೈಗೊಳ್ಳದೇ ಇದ್ದರೆ ,ಮುಷ್ಕರದಿಂದಾಗಿ ಏಕಕಾಲದಲ್ಲಿ ಎಲ್ಲಾ ಗ್ರಾಮ ಪಂಚಾಯತಗಳ ಕಾರ್ಯ ಚಟುವಟಿಕೆಗಳು ಸ್ಥಬ್ದವಾದಲ್ಲಿ ಗ್ರಾಮೀಣ ಜನರಿಗೆ ತೀವ್ರ ತೊಂದರೆಯಾಗಲಿದೆ. ಆದ್ದರಿಂದ ಶ್ರೀ ರವಿರಾಜ .ಎಚ್. ಯವರ ಅಮಾನತ್ತು ಆದೇಶವನ್ನು ಹಿಂಪಡೆಯಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಬೇಕಾಗಿ ಮಂಜುನಾಥ ಭಂಡಾರಿ ಅವರು ಮುಖ್ಯ ಮಂತ್ರಿಯವರಲ್ಲಿ ಕೋರಿದ್ದಾರೆ.