ನವ ಮಂಗಳೂರು ಬಂದರು ಮಂಡಳಿ ಖಾಸಗೀಕರಣ????…..
ಮಂಗಳೂರು:ಎನ್‌ಎಂಪಿಟಿಯಲ್ಲಿ ಸದ್ಯ ಅತ್ಯಂತ ಲಾಭದಾಯಕವಾಗಿರುವ ಎರಡು ಪ್ರಮುಖ ಸರಕು ಸಾಗಾಣೆ ವಿಭಾಗಗಳಾದ ಬರ್ತ್ ನಂ.14 ಮತ್ತು 16 ನ್ನು ಖಾಸಗಿ ಸಂಸ್ಥೆಗಳಿಗೆ ನೀಡಲಾಗಿದೆ. ಇದು ಕ್ರಮೇಣ ಬಂದರು ಪೂರ್ಣಪ್ರಮಾಣದಲ್ಲಿ ಖಾಸಗೀಕರಣವಾಗುವ ಸೂಚನೆಯಾಗಿದೆ.
ಎನ್‌ಎಂಪಿಟಿಯಲ್ಲಿ ದೊಡ್ಡ ಮಟ್ಟದ ಚಟುವಟಿಕೆ ಇರುವುದು 14ನೇ ಬರ್ತ್ ನಿರ್ವಹಣೆಯಲ್ಲಿ. ಇದರ ಹರಾಜು ಜೂನ್‌ನಲ್ಲಿ ನಡೆದಿದ್ದು, ಅದಾನಿ ಪಾಲಾಗುತ್ತದೆ ಎನ್ನುವ ನಿರೀಕ್ಷೆಯಿತ್ತು. ಕೊನೆಯಲ್ಲಿ ಅದು ಜೆಎಸ್‌ಡಬ್ಲ್ಯು ಇನ್‌ಫ್ರಾಸ್ಟ್ರಕ್ಚರ್ ಕಂಪೆನಿಗೆ ದಕ್ಕಿದೆ. 14ನೇ ಬರ್ತ್ ಎನ್‌ಎಪಿಟಿಯ ಅತ್ಯಂತ ಆಳವಾದ ಹಾಗೂ ಬಹುಪಯೋಗಿ ಬರ್ತ್ ಕೂಡ.
ಎನ್‌ಎಂಪಿಟಿಯಲ್ಲಿ ಕಲ್ಲಿದ್ದಲು ಹಾಗೂ ಕಂಟೈನರ್ ಸರಕು ಸದ್ಯದ ದೊಡ್ಡ ಮಟ್ಟದ ಅದಾಯ ತರುವ ಮೂಲಗಳಾಗಿವೆ. ಇದೀಗ ಖಾಸಗಿಯವರನ್ನು ಆಕರ್ಷಿಸಲು ಅವುಗಳನ್ನೇ ಬಿಡ್ ಮಾಡಲಾಗಿದೆ. ಕಲ್ಲಿದ್ದಲು ನಿರ್ವಹಣೆಯ 16ನೇ ಬರ್ತ್ ವರ್ಷದ ಮೊದಲು ಬಿಡ್ ಮಾಡಲಾಗಿದ್ದು, ಚೆಟ್ಟಿನಾಡ್ ಸಮೂಹ ಪಾಲಾಗಿದೆ. ಯುಪಿಸಿಎಲ್‌ಗಾಗಿ 15ನೇ ಬರ್ತ್ ನ್ನು ಈಗಾಗಲೇ ಅದಾನಿ ಸಮೂಹ ತನ್ನದಾಗಿಸಿಕೊಂಡಿದೆ.
ಎನ್‌ಎಂಪಿಟಿಯಲ್ಲಿ 1ರಿಂದ 7 ಬರ್ತ್‌ಗಳಲ್ಲಿ ಸಣ್ಣ ಪ್ರಮಾಣದ ಹಡಗುಗಳಿಗೆ, 9-12ನೇ ಬರ್ತ್‌ಗಳು ಎಂಆರ್‌ಪಿಎಲ್‌ನ ಟ್ಯಾಂಕರ್‌ಗಳಿಗೆ ಮೀಸಲು. ಉಳಿದಂತೆ 8ನೇ ಟರ್ಮಿನಲ್ ಕುದುರೆಮುಖ ಕಬ್ಬಿಣ ಹಾಗೂ ಅದಿರು ಕಂಪನಿಯ ಸ್ವಾಧೀನದಲ್ಲಿದೆ. ಎರಡು ಪ್ರಮುಖ ಬರ್ತ್‌ಗಳನ್ನು ಖಾಸಗಿಗೆ ವಹಿಸಿಕೊಟ್ಟ ಬಳಿಕ ಇತರ ಬಂದರು ಬಳಕೆದಾರರು ದೊಡ್ಡ ಹಡಗುಗಳನ್ನು ತರಿಸುವುದು ಕಷ್ಟದಾಯಕವಾಗಲಿದೆ. ಎರಡು ಪ್ರಮುಖ ಬರ್ತ್‌ಗಳು ಖಾಸಗಿಯವರ ಪಾಲಾಗಿರುವ ಕಾರಣ ಹಡಗಿನ ಲೋಡಿಂಗ್, ಅನ್‌ಲೋಡಿಂಗ್ ನಿರ್ವಹಿಸುವವರು ಸಮಸ್ಯೆ ಎದುರಿಸಲಿದ್ದಾರೆ ಎನ್ನಲಾಗಿದೆ.