ರಾಷ್ಟ್ರಕ್ಕೆ ಸೈನಿಕರಿರುವಂತೆ ಮಠಕ್ಕೆ ಪರಿವಾರ: ರಾಘವೇಶ್ವರ ಶ್ರೀ ಬಣ್ಣನೆ…

ಗೋಕರ್ಣ: ರಾಷ್ಟ್ರ ರಕ್ಷಣೆಗೆ ಸೈನಿಕರು ಎಷ್ಟು ಸಮರ್ಪಣೆಯಿಂದ ಕರ್ತವ್ಯ ನಿರ್ವಹಿಸುತ್ತಾರೆಯೋ ಅಷ್ಟೇ ನಿಷ್ಠೆಯಿಂದ ಪರಿವಾರದವರು ಶ್ರೀಮಠಕ್ಕೆ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿ ಬಣ್ಣಿಸಿದರು.
ಸ್ವಭಾಷಾ ಚಾತುರ್ಮಾಸ್ಯದ ಎರಡನೇ ದಿನವಾದ ಶುಕ್ರವಾರ ಶ್ರೀಪರಿವಾರದಿಂದ ಗುರುಭಿಕ್ಷಾ ಸೇವೆ ಮತ್ತು ಸ್ವರ್ಣಪಾದುಕಾ ಭಿಕ್ಷಾ ಸೇವೆ ಸ್ವೀಕರಿಸಿ ಆಶೀರ್ವಚನ ನೀಡಿದ ಶ್ರೀಗಳು, “ಸೇನೆ ಇರುವುದರಿಂದ ದೇಶ ನೆಮ್ಮದಿಯಿಂದ ಇರುತ್ತದೆ. ಅಂತೆಯೇ ಪರಿವಾರ ಇರುವುದರಿಂದ ಮಠ ಸುಲಲಿತವಾಗಿ ನಡೆಯುತ್ತದೆ” ಎಂದು ವಿಶ್ಲೇಷಿಸಿದರು.
ರಾಷ್ಟ್ರದಲ್ಲಿ ಸೈನಿಕರಿಗೆ ಸಲ್ಲುವ ಗೌರವ ಮಠದ ವ್ಯವಸ್ಥೆಯಲ್ಲಿ ಪರಿವಾರಕ್ಕೂ ಸಲ್ಲಬೇಕು. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಶ್ರೀಪೀಠದ, ಶ್ರೀರಾಮನ ಸೇವೆ ಮಾಡುತ್ತಿರುವ ಇವರ ತ್ಯಾಗ, ಸಮರ್ಪಣೆಯನ್ನು ಸಮಾಜ ಗುರುತಿಸಿ ಗೌರವಿಸಬೇಕು ಎಂದು ಸೂಚಿಸಿದರು.
ಈ ತಿಂಗಳಿನಿಂದಲೇ ಆರಂಭವಾಗುವಂತೆ ಶ್ರೀಪರಿವಾರದಲ್ಲಿ ಸೇವೆ ಸಲ್ಲಿಸುವ ಎಲ್ಲರಿಗೂ ಅವರ ಕರ್ತವ್ಯ ಮತ್ತು ಜ್ಯೇಷ್ಠತೆಯನ್ನು ಪರಿಣಿಸಿ ವಾರ್ಷಿಕ 3 ರಿಂದ 6 ಲಕ್ಷ ರೂಪಾಯಿಗಳನ್ನು ಶ್ರೀಪೀಠದಿಂದ ಅನುಗ್ರಹದ ರೂಪದಲ್ಲಿ ನೀಡಲಾಗುವುದು. ಪರಿವಾರ ಹಾಗೂ ಈ ಹಿಂದೆ ಪರಿವಾರದಲ್ಲಿ ಸೇವೆ ಸಲ್ಲಿಸಿದವರ ಸಂಪೂರ್ಣ ಹೊಣೆಯನ್ನು ಶ್ರೀಮಠ ವಹಿಸಿಕೊಳ್ಳುತ್ತದೆ ಎಂದು ಘೋಷಿಸಿದರು. ಇದರ ಜತೆಗೆ ಆಚಾರ- ವಿಚಾರ, ಗುಣ-ನಡತೆ ಮತ್ತಿತರ ಅಂಶಗಳನ್ನು ಪರಿಗಣಿಸಿ ವಾರ್ಷಿಕ ಒಂದು ಲಕ್ಷ ರೂಪಾಯಿಯನ್ನು ಆಚಾರ ಭತ್ಯೆಯಾಗಿ ವಿತರಿಸಲಾಗುವುದು ಎಂದರು.
ಸಮಾಜ ಪರಿವಾರವನ್ನು ಗೌರವಿಸುವುದು ಎಷ್ಟು ಮುಖ್ಯವೋ, ಪರಿವಾರದಲ್ಲಿರುವವರು ಮಠವನ್ನು ಪ್ರತಿನಿಧಿಸುವವರು ಎಂಬ ಘನತೆ, ಗೌರವ ಕಾಪಾಡಿಕೊಳ್ಳುವುದೂ ಅಗತ್ಯ ಎಂದು ಪ್ರತಿಪಾದಿಸಿದರು.
ಚಾತುರ್ಮಾಸದ್ಯದಲ್ಲಿ ಯತಿಗಳ ಸೇವೆ ಮಾಡಿದ ಪುಟ್ಟ ಅನಾಥ ಬಾಲಕ ನಾರದ ಪದವಿಗೆ ಏರಲು ಸಾಧ್ಯವಾಯಿತು. ಅಂತೆಯೇ ಪರಿವಾರದವರು ಇಂದು ಆಯೋಜಿಸಿದ್ದ ಸೇವೆ ಅರ್ಥಪೂರ್ಣ. ಹೀಗೆ ಸತ್ಕಾರ್ಯಗಳ ಮೂಲಕ ಪರಿವಾರ ಸಮಾಜಕ್ಕೆ ಆದರ್ಶವಾಗಿ ಬದುಕಬೇಖು ಎಂದು ಸೂಚಿಸಿದರು.
ಶ್ರೀಮಠದ ಪ್ರಶಾಸನಾಧಿಕಾರಿ ಸಂತೋಷ್ ಹೆಗಡೆ, ವಿತ್ತಾಧ್ಯಕ್ಷ ಗಣೇಶ್ ಜೆ.ಎಲ್, ಹವ್ಯಕ ಮಹಾಮಂಡಲ ಅಧ್ಯಕ್ಷ ಹರಿಪ್ರಸಾದ್ ಪೆರಿಯಾಪ್ಪು, ಶಾಸನತಂತ್ರ ಅಧ್ಯಕ್ಷ ಮೋಹನ ಭಾಸ್ಕರ ಹೆಗಡೆ, ಶ್ರೀಮಠದ ಲೋಕಸಂಪರ್ಕಾಧಿಕಾರಿ ರಾಮಚಂದ್ರ ಭಟ್ ಕೆಕ್ಕಾರು, ಚಾತುರ್ಮಾಸ್ಯ ತಂಡದ ಪ್ರಧಾನ ಸಂಚಾಲಕ ಮಂಜುನಾಥ ಸುವರ್ಣಗದ್ದೆ, ಶ್ರೀಕಾಂತ ಪಂಡಿತ್, ಮೂಲಮಠ ಪುನರುತ್ಥಾನ ಸಮಿತಿ ಅಧ್ಯಕ್ಷ ಯುಎಸ್‍ಜಿ ಭಟ್, ಶ್ರೀಪರಿವಾರದ ಮಧು ಜಿ.ಕೆ, ದಿನೇಶ್ ಹೆಗಡೆ, ಸುಬ್ರಾಯ ಅಗ್ನಿಹೋತ್ರಿ, ವಿನಾಯಕ ಶಾಸ್ತ್ರಿ, ರಾಮಮೂರ್ತಿ, ವಿನಾಯಕ ಭಟ್, ಗುರು, ಮಂಜುನಾಥ ಶಾಸ್ತ್ರಿ, ಚಂದ್ರಶೇಖರ ಯಾಜಿ, ಪ್ರಶಾಂತ್ ಯಾಜಿ, ರಾಮಚಂದ್ರ, ಹೊನ್ನಾವರ ಮಂಡಲ ಅಧ್ಯಕ್ಷ ಆರ್.ಜಿ.ಹೆಗಡೆ ಹೊಸಾಕುಳಿ, ಕುಮಟಾ ಮಂಡಲ ಅಧ್ಯಕ್ಷ ಸುಬ್ರಾಯ ಭಟ್, ಸೇವಾ ಪ್ರಧಾನ ಉದಯ ಭಟ್ ಮತ್ತಿತರರು ಉಪಸ್ಥಿತರಿದ್ದರು.