ಮಾಡಾವು ವಿದ್ಯುತ್ ಸಬ್‍ಸ್ಟೇಷನ್ ತ್ವರಿತ ಕಾಮಗಾರಿಗೆ ರೈತ ಸಂಘ ಆಗ್ರಹ…..
ಪುತ್ತೂರು: ತಾಲೂಕಿನ ಕೆಯ್ಯೂರು ಗ್ರಾಮದ ಮಾಡಾವು ಎಂಬಲ್ಲಿ ನಡೆಯುತ್ತಿರುವ 110ಕೆವಿ ವಿದ್ಯುತ್ ಸಬ್‍ಸ್ಟೇಷನ್ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಮುಂದುವರಿಸಿ ರೈತರಿಗೆ ಎದುರಾಗಿರುವ ವಿದ್ಯುತ್ ಸಮಸ್ಯೆಯನ್ನು ಶೀಘ್ರವಾಗಿ ಪರಿಹರಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಸಿರುಸೇನೆಯ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.
ರಾಜ್ಯ ರೈತ ಸಂಘ ಹಸಿರು ಸೇನೆಯ ಜಿಲ್ಲಾ ಸಮಿತಿಯ ಅಧ್ಯಕ್ಷ ಸುರೇಶ್ ಭಟ್ ಕೊಜಂಬೆ, ಜಿಲ್ಲಾ ಕಾರ್ಯಾಧ್ಯಕ್ಷ ರೂಪೇಶ್ ರೈ ಅಲಿಮಾರ್, ಜಿಲ್ಲಾ ಕಾರ್ಯದರ್ಶಿ ಇಬ್ರಾಹಿಂ ಖಲೀಲ್ ಪುಣ್ಚತ್ತಡ್ಕ, ತಾಲೂಕು ಸಮಿತಿಯ ಅಧ್ಯಕ್ಷ ಬಾಲ ಸುಬ್ರಹ್ಮಣ್ಯ ಹೊಳ್ಳ, ತಾಲೂಕು ಕಾರ್ಯದರ್ಶಿ ರತ್ನಕುಮಾರ್ ಈಶ್ವರಮಂಗಿಲ, ಪದಾಧಿಕಾರಿಗಳಾದ ಜಗದೀಶ್ ಪೈರುಪುಣಿ, ಈಶ್ವರ ಭಟ್ ಕರೋಪಾಡಿ,ನಿತಿನ್‍ಪ್ರಸಾದ್ ಹೆಗ್ಡೆ, ಪ್ರದೀಪ್ ರೈ ಮೇನಾಲ, ಸುಂದರ ಗೌಡ ಮತ್ತಿತರರು ಗುರುವಾರ ಸಂಜೆ ನಿಯೋಗದಲ್ಲಿ ಮಾಡಾವು 110ಕೆವಿ ಸಬ್‍ಸ್ಟೇಷನ್ ಹಾಗೂ ಮಾಡ್ನೂರು ಗ್ರಾಮದ ಕಾವಿನಲ್ಲಿರುವ 31ಕೆವಿ ವಿದ್ಯುತ್ ಸಬ್‍ಸ್ಟೇಷನ್‍ಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಧಿಕಾರಿಗಳ ಜತೆ ಕಾಮಗಾರಿ ಪ್ರಗತಿಯ ಕುರಿತು ಚರ್ಚಿಸಿದರು.
ಮೆಸ್ಕಾಂ ಇಲಾಖೆಯ ಸಹಾಯಕ ಕಾರ್ಯನಿರ್ವಹಕ ಇಂಜಿನಿಯರ್ ರಾಮಚಂದ್ರಪ್ಪ, ಸಹಾಯಕ ಇಂಜಿನಿಯರ್ ಶಿಲ್ಪಾ ಶೆಟ್ಟಿ ಹಾಗೂ ಮಾಡಾವು ವಿದ್ಯುತ್ ಸಬ್‍ಸ್ಟೇಷನ್ ಗುತ್ತಿಗೆದಾರ ಸಂಸ್ಥೆಯಾದ ರೂಪಾ ಇಲೆಕ್ಟ್ರಿಕಲ್ಸ್ ಸಂಸ್ಥೆಯ ಅಡಿಯಲ್ಲಿ ಸಬ್ ಕಾಮಗಾರಿ ಗುತ್ತಿಗೆದಾರರಾಗಿ ಕಾರ್ಯನಿರ್ವಹಿಸುತ್ತಿರುವ ಪ್ರತಾಪ್ ಅವರ ಜತೆ ಚರ್ಚಿಸಿದ ರೈತ ಸಂಘದ ಪದಾಧಿಕಾರಿಗಳು ಕಾಮಗಾರಿಯನ್ನು ಅತೀ ಶೀಘ್ರವಾಗಿ ಪೂರ್ಣಗೊಳಿಸುವಂತೆ ಆಗ್ರಹಿಸಿದರು. ಈ ಸಂದರ್ಭದಲ್ಲಿ ಅಧಿಕಾರಿಗಳು ಹಾಗೂ ಕಾಮಗಾರಿ ಗುತ್ತಿಗೆದಾರರು ತಿಂಗಳೊಳಗೆ ಮಾಡಾವು ವಿದ್ಯುತ್ ಸಬ್‍ಸ್ಟೇಷನ್ ಕಾಮಗಾರಿಯನ್ನು ಪೂರ್ಣಗೊಳಿಸಿ ಲೋಕಾರ್ಪಣೆ ಮಾಡುವುದಾಗಿ ಹಾಗೂ ರೈತರಿಗೆ ಎದುರಾಗುತ್ತಿರುವ ವಿದ್ಯುತ್ ಸಮಸ್ಯೆಯನ್ನು ಆದಷ್ಟು ಶೀಘ್ರವಾಗಿ ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ರೈತ ಸಂಘದ ಪ್ರಮುಖರು ತಿಳಿಸಿದ್ದಾರೆ.