ಗೆಜ್ಜೆಗಿರಿ ನಂದನ ಬಿತ್ತಿಲ್ ಪುನರುತ್ಥಾನ ಐತಿಹಾಸಿಕ ಕಾರ್ಯ: ಜಯ.ಸಿ.ಸುವರ್ಣ ಅನಿಸಿಕೆ…
ಪುತ್ತೂರು: ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ಕ್ಷೇತ್ರವಾದ ಗೆಜ್ಜೆಗಿರಿ ನಂದನ ಬಿತ್ತಿಲ್ ನಲ್ಲಿ ನಡೆಯುತ್ತಿರುವ ಪುನರುತ್ಥಾನ ಒಂದು ಐತಿಹಾಸಿಕ ಕಾರ್ಯವಾಗಿದ್ದು, ಈ ಪುಣ್ಯ ಕಾರ್ಯದಲ್ಲಿ ಭಾಗವಹಿಸುವುದು ಭಕ್ತರ ಪಾಲಿಗೆ ಸುಯೋಗದ ಸಂಗತಿ ಎಂದು ರಾಷ್ಟ್ರೀಯ ಬಿಲ್ಲವ ಮಹಾಮಂಡಲದ ನಿಕಟಪೂರ್ವ ಅಧ್ಯಕ್ಷರಾದ ಜಯ ಸಿ. ಸುವರ್ಣ ಹೇಳಿದರು.
ಪುತ್ತೂರು ತಾಲೂಕಿನ ಬಡಗನ್ನೂರು ಗ್ರಾಮದಲ್ಲಿರುವ ಗೆಜ್ಜೆಗಿರಿ ನಂದನ ಬಿತ್ತಿಲ್ ಕ್ಷೇತ್ರಕ್ಕೆ ಶುಕ್ರವಾರ ಜಯ.ಸಿ.ಸುವರ್ಣ ಅವರು ಪತ್ನಿ ಸಮೇತವಾಗಿ ಭೇಟಿ ನೀಡಿ ಕ್ಷೇತ್ರದ ಬಾಲಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು. ಕ್ಷೇತ್ರದಲ್ಲಿ ನಡೆಯುತ್ತಿರುವ ಪುನರುತ್ಥಾನ ಕಾಮಗಾರಿಗಳನ್ನು ಅವರು ವೀಕ್ಷಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕೋಟಿ ಚೆನ್ನಯರ ಅವತಾರ ಸಂಭವಿಸಿದ ಬಳಿಕ ತುಳುನಾಡಿನಾದ್ಯಂತ ಅವರ ಗರಡಿಗಳು ನಿರ್ಮಾಣವಾಗಿವೆ. ಆದರೆ ಅವರ ಮೂಲ ಮಣ್ಣಿನಲ್ಲಿ ಇದೇ ಮೊದಲ ಬಾರಿಗೆ ಮೂಲಸ್ಥಾನ ಗರಡಿ ನಿರ್ಮಾಣವಾಗುತ್ತಿದೆ. 450 ವರ್ಷಗಳ ಬಳಿಕ ನಡೆಯುತ್ತಿರುವ ಮೊದಲ ಚಾರಿತ್ರಿಕ ವಿದ್ಯಮಾನವಿದು.ಇದು ಆ ಕಾರಣಿಕ ಶಕ್ತಿಗಳ ಸಂಕಲ್ಪವೂ ಆಗಿದೆ ಎಂದ ಅವರು ಕ್ಷೇತ್ರದ ಪುನರುತ್ಥಾನದಲ್ಲಿ ಸರ್ವ ಭಕ್ತ ಸಮುದಾಯ ಭಾಗವಹಿಸಬೇಕು. ಈ ಪುಣ್ಯ ಕಾರ್ಯ ಈ ಕಾಲಘಟ್ಟದಲ್ಲಿ ನಡೆಯುತ್ತಿರುವ ಕಾರಣ ಈಗಿನ ಕಾಲದ ಎಲ್ಲ ಭಕ್ತರಿಗೂ ಇದೊಂದು ಸುಸಂದರ್ಭ ಎಂದು ಹೇಳಿದರು.
ಕ್ಷೇತ್ರದ ಯಜಮಾನ ಶ್ರೀಧರ ಪೂಜಾರಿ, ಮಹಾ ಮಂಡಲದ ಮೋಹನದಾಸ್ ಪಾವೂರು, ಕ್ಷೇತ್ರದ ಕಾರ್ಯದರ್ಶಿ ಸುಧಾಕರ ಸುವರ್ಣ, ಗೆಜ್ಜೆಗಿರಿ ಪುತ್ತೂರು ತಾಲ್ಲೂಕು ಸಮಿತಿ ಅಧ್ಯಕ್ಷ ಪ್ರವೀಣ್ ಕುಮಾರ್ ಕೆಡೆಂಜಿಗುತ್ತು, ಧೂಮಾವತಿ ಕರಸೇವಾ ಸಮಿತಿಯ ಅಧ್ಯಕ್ಷ ಉದಯ ಕುಮಾರ್ ಕೋಲಾಡಿ, ಉಪಾಧ್ಯಕ್ಷ ನಾರಾಯಣ ಪೂಜಾರಿ ಮಡ್ಯಂಗಳ, ಕಾರ್ಯದರ್ಶಿ ದಯಾನಂದ್ ಕರ್ಕೆರಾ ಮತ್ತಿತರರು ಉಪಸ್ಥಿತರಿದ್ದರು.