ಹರಿಕಥಾ ಪರಿಷತ್ ಸದಸ್ಯ ಸಮಾವೇಶ – ಸಂವಾದ…
ಹರಿಕಥೆಯಿಂದ ಮೌಲ್ಯ ಪ್ರತಿಪಾದನೆ: ಡಾ. ಜೋಶಿ…
ಮಂಗಳೂರು: ‘ಆಧುನಿಕ ಯುಗದಲ್ಲಿ ಸಂಪ್ರದಾಯ ಮತ್ತು ಪರಂಪರೆಗಳ ನಡುವೆ ಸಾಂಸ್ಕೃತಿಕ ಕಲಾರಂಗಕ್ಕಿರುವ ಸವಾಲುಗಳನ್ನು ಎದುರಿಸಲು ತರ್ಕಬದ್ಧ ವಿಮರ್ಶೆ, ವಸ್ತು ವಿಶ್ಲೇಷಣೆ ಹಾಗೂ ಸಂವಾದ ಗೋಷ್ಠಿಗಳು ಸಹಕಾರಿ’ ಎಂದು ಬಹುಶ್ರುತ ವಿದ್ವಾಂಸ ಮತ್ತು ವಿಮರ್ಶಕ ಡಾ.ಎಂ.ಪ್ರಭಾಕರ ಜೋಶಿ ಅಭಿಪ್ರಾಯಪಟ್ಟರು.
ಕದ್ರಿ ಮಲ್ಲಿಕಟ್ಟೆ ಶ್ರೀ ಕೃಷ್ಣ ಕಲಾ ಮಂದಿರದಲ್ಲಿ ಜರಗಿದ ಹರಿಕಥಾ ಪರಿಷತ್ತಿನ ಸದಸ್ಯರ ಸಮಾವೇಶ ಹಾಗೂ ಸಂವಾದ ಗೋಷ್ಠಿಯ ಮುಖ್ಯ ಅತಿಥಿಯಾಗಿ ಅವರು ದಿಕ್ಸೂಚಿ ಭಾಷಣ ಮಾಡಿದರು.
‘ಜಿಲ್ಲೆಯ ಹರಿಕಥಾ ರಂಗದಲ್ಲಿ ಹಿಂದೆ ಭದ್ರಗಿರಿ ಸೋದರರು, ಸಾಮಗರು ಹಾಗೂ ಶೇಣಿ ಅವರಿಂದ ಅನೇಕ ಬದಲಾವಣೆಗಳು ಸಾಧ್ಯವಾಯಿತು. ಪ್ರಸಕ್ತ ವಾತಾವರಣದಲ್ಲೂ ಹರಿದಾಸರುಗಳು ತಮ್ಮ ಪ್ರತಿಭೆ ಪರಿಶ್ರಮದಿಂದ ಪುರಾಣ ಕಥೆಗಳ ಜೊತೆಗೆ ಹರಿಕಥೆಯ ಮೂಲ ಸ್ವರೂಪಕ್ಕೆ ಧಕ್ಕೆಯಾಗದಂತೆ ಪುರಾಣೇತರ ಕಥಾವಸ್ತುಗಳನ್ನೂ ಮೌಲ್ಯಗಳ ಪ್ರಸಾರಕ್ಕೆ ಬಳಸಿಕೊಳ್ಳಬಹುದು’ ಎಂದರು. ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಅವರು ಗೋಷ್ಠಿಯನ್ನು ಉದ್ಘಾಟಿಸಿ ಶುಭ ಕೋರಿದರು.
ಮನೆ – ಮನೆ ಹರಿಕಥೆ:
ಅಧ್ಯಕ್ಷತೆ ವಹಿಸಿದ್ದ ಹರಿಕಥಾ ಪರಿಷತ್ ಅಧ್ಯಕ್ಷ, ನ್ಯಾಯವಾದಿ ಕೆ.ಮಹಾಬಲ ಶೆಟ್ಟಿ ಕೂಡ್ಲು ಅವರು ಪರಿಷತ್ತಿನ ಮನೆ ಮನೆ ಹರಿಕಥಾ ಯೋಜನೆಗೆ ಹಾಗೂ ಹರಿಕಥಾ ರಂಗದ ಸಮಗ್ರ ಬೆಳವಣಿಗೆಗೆ ಸದಸ್ಯರ ಸಹಕಾರ ಕೋರಿದರು.
ಆಸಕ್ತಿಯ ಉದ್ದೀಪನ:
ಹರಿಕಥಾ ರಂಗ – ನಿರೀಕ್ಷೆಗಳು ಮತ್ತು ಸವಾಲುಗಳು ಎಂಬ ಸಂವಾದ ಗೋಷ್ಠಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಮಂಗಳೂರು ವಿಶ್ವವಿದ್ಯಾನಿಲಯದ ಕನಕದಾಸ ಅಧ್ಯಯನ ಪೀಠದ ನಿರ್ದೇಶಕರು ಡಾ.ಧನಂಜಯ ಕುಂಬಳೆ, ಅರ್ಥದಾರಿ ಮತ್ತು ಸಾಹಿತಿ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ, ಪ್ರವಚನಕಾರ ಸರ್ಪಂಗಳ ಈಶ್ವರ ಭಟ್, ಹರಿದಾಸ ಶಂನಾಡಿಗ ಕುಂಬ್ಳೆ ಅವರು ಭಾಗವಹಿಸಿದ್ದರು.
ವಿದ್ಯಾರ್ಥಿಗಳು ಮತ್ತು ಯುವಜನತೆಯಲ್ಲಿ ಹರಿಕಥಾಸಕ್ತಿಯ ಉದ್ದೀಪನ, ಪ್ರೇಕ್ಷಕರನ್ನು ಸೆಳೆಯುವ ಮಾರ್ಗೋಪಾಯಗಳು, ಎಳೆಯರಿಗೆ ಹರಿಕಥಾ ಕಮ್ಮಟ ಹಾಗೂ ಸ್ಪರ್ಧೆಗಳನ್ನು ಆಯೋಜಿಸುವುದು, ಮತ್ತು ಹರಿಕಥಾ ಕಾರ್ಯಕ್ರಮದ ಆಯೋಜನೆ ಹಾಗೂ ಪ್ರದರ್ಶನ ಇವೆರಡನ್ನೂ ಮತ್ತಷ್ಟು ಪರಿಣಾಮಕಾರಿಯಾಗಿಸುವುದು ಇತ್ಯಾದಿ ಅನೇಕ ವಿಚಾರಗಳ ಕುರಿತು ಸಂವಾದ ಚರ್ಚೆ ನಡೆಯಿತು. ಪರಿಷತ್ ವತಿಯಿಂದ ಹರಿದಾಸ ಡಾ. ಎಸ್.ಪಿ.ಗುರುದಾಸ್ ಅವರು ಪ್ರಶ್ನೆಗಳನ್ನು ಮಂಡಿಸಿದರು.
ಆರಂಭದಲ್ಲಿ ಇತ್ತೀಚೆಗೆ ಅಗಲಿದ ಬಡಗುತಿಟ್ಟಿನ ಯಕ್ಷಗಾನ ಗುರು, ಭಾಗವತ ತೋನ್ಸೆ ಜಯಂತ್ ಕುಮಾರ್ ಅವರಿಗೆ ಹರಿಕಥಾ ಪರಿಷತ್ ವತಿಯಿಂದ ಶ್ರದ್ಧಾಂಜಲಿ ಅರ್ಪಿಸಲಾಯಿತು. ಪರಿಷತ್ತಿನ ಉಪಾಧ್ಯಕ್ಷ ಕೆ.ನಾರಾಯಣ ರಾವ್ ಉಡುಪಿ ಸಂಚಾಲಕರಾದ ವೈ. ಅನಂತ ಪದ್ಮನಾಭ ಭಟ್, ಹರಿದಾಸರುಗಳಾದ ಶ್ರೀಮತಿ ಮಂಜುಳಾ ಇರಾ, ಶೇಣಿ ಮುರಳಿ ಮತ್ತಿತರರು ಪ್ರತಿಕ್ರಿಯೆ ನೀಡಿದರು.
ಹರಿಕಥಾ ಪರಿಷತ್ ಮಂಗಳೂರು ಸಂಚಾಲಕ ಸುಧಾಕರ ರಾವ್ ಪೇಜಾವರ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ತೋನ್ಸೆ ಪುಷ್ಕಳ ಕುಮಾರ್ ನಿರೂಪಿಸಿ ವಂದಿಸಿದರು.
ದಾಸ ಸಂಕೀರ್ತನೆ:
ಪ್ರಾರಂಭದಲ್ಲಿ ಶ್ರೀ ಗೋಪಾಲಕೃಷ್ಣ ಭಜನಾ ಮಂಡಳಿ ಕದ್ರಿ ಹಾಗೂ ಶ್ರೀ ಮುಖ್ಯಪ್ರಾಣ ಭಜನಾ ಮಂಡಳಿ ಕಾವೂರು ಇವರಿಂದ ದಾಸಸಂಕೀರ್ತನೆ ನೆರವೇರಿತು.