ಅಬ್ಬಕ್ಕ ಪ್ರತಿಷ್ಠಾನದಿಂದ ‘ಆಷಾಢದ ಆಶಯ’ ಸಂವಾದ ಕಾರ್ಯಕ್ರಮ…
ಆಟಿ ಆಟಿಯೇ; ಆಷಾಢವಲ್ಲ: ಭಾಸ್ಕರ ರೈ ಕುಕ್ಕುವಳ್ಳಿ…
ಮಂಗಳೂರು: ‘ಸೂರ್ಯ ಹಾಗೂ ಚಂದ್ರರ ಚಲನೆಯನ್ನು ಅನುಸರಿಸಿ ಅವರವರ ಪದ್ಧತಿಯಂತೆ ಕಾಲದ ಪರಿಗಣನೆ ನಡೆಯುತ್ತದೆ. ತುಳುವರ ಆಟಿ ಆಚರಣೆಗಳು ಚಾಂದ್ರಮಾನ ಪದ್ಧತಿಯ ಆಷಾಢ ತಿಂಗಳಿಗೆ ಅನ್ವಯಿಸುವುದಿಲ್ಲ. ಆದ್ದರಿಂದ ಆಟಿ ಆಟಿಯೇ; ಅದನ್ನು ಆಷಾಢವೆಂದು ತಿಳಿಯುವುದು ಸರಿಯಲ್ಲ’ ಎಂದು ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನದ ಅಧ್ಯಕ್ಷ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದ್ದಾರೆ.
ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನದ ಆಶ್ರಯದಲ್ಲಿ ಕಲ್ಲಾಪು ಬಳಿಯ ‘ಕದಿಕೆ’ ತುಳುಚಾವಡಿಯಲ್ಲಿ ಜರಗಿದ ‘ಆಷಾಢದ ಆಶಯ’ ಸಂವಾದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ಪ್ರತೀ ಸಂಕ್ರಾಂತಿಯ ಮರುದಿನದಿಂದ ಸೌರಮಾನಿಗಳ ಹೊಸ ತಿಂಗಳು ಆರಂಭವಾದರೆ ಹುಣ್ಣಿಮೆ – ಅಮಾವಾಸ್ಯೆಗಳ ತಿಥಿಯನ್ನನುಸರಿಸಿ ಚಾಂದ್ರಮಾನಿಗಳು ತಿಂಗಳ ಲೆಕ್ಕಾಚಾರ ಮಾಡುತ್ತಾರೆ. ಹಾಗಾಗಿ ಈ ಬಾರಿ ಅಧಿಕ ಮಾಸದ ಕಾರಣದಿಂದ ಆಷಾಢ ಮುಗಿದಿದ್ದರೂ ಇನ್ನೂ ಹತ್ತು-ಹದಿನೈದು ದಿನ ಆಟಿ ತಿಂಗಳು ಇರಲಿದೆ’ ಎಂದವರು ವಿಶ್ಲೇಷಿಸಿದರು. ಪ್ರತಿಷ್ಠಾನದ ಪ್ರಧಾನ ಸಂಚಾಲಕ ರವೀಂದ್ರ ಶೆಟ್ಟಿ ಉಳಿದೊಟ್ಟು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಪದಾಧಿಕಾರಿಗಳಾದ ಪಿ.ಡಿ.ಶೆಟ್ಟಿ, ಲಕ್ಷ್ಮೀನಾರಾಯಣ ರೈ ಹರೇಕಳ, ಲಾಲಿತ್ಯ, ವಿಷ್ಣುಸ್ಮರಣ್ ರೈ, ವಿಜಯಲಕ್ಷ್ಮಿ ಬಿ.ಶೆಟ್ಟಿ, ನಮಿತಾ ಶಾಮ್, ಸುಮಾ ಪ್ರಸಾದ್, ಗೀತಾ ಜ್ಯುಡಿತ್ ಮಸ್ಕರೇನ್ಹಸ್, ಪ್ರತಿಮಾ ಹೆಬ್ಬಾರ್ ಚರ್ಚೆಯಲ್ಲಿ ಪಾಲ್ಗೊಂಡರು. ಕಾರ್ಯಕ್ರಮದಲ್ಲಿ ಆಟಿ ತಿಂಗಳ ವಿಶೇಷ ತಿಂಡಿ ತಿನಿಸುಗಳ ವ್ಯವಸ್ಥೆಯನ್ನು ಮಾಡಲಾಗಿತ್ತು
ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನದ ಸಂಘಟನಾ ಕಾರ್ಯದರ್ಶಿ ತೋನ್ಸೆ ಪುಷ್ಕಳ ಕುಮಾರ್ ಸ್ವಾಗತಿಸಿದರು; ಪ್ರಧಾನ ಕಾರ್ಯದರ್ಶಿ ತ್ಯಾಗಂ ಹರೇಕಳ ನಿರೂಪಿಸಿದರು. ಕಾರ್ಯದರ್ಶಿ ವಿಜಯಲಕ್ಷ್ಮಿ ಕಟೀಲು ವಂದಿಸಿದರು.