ಕರ್ನಾಟಕ ಪ್ರೌಢ ಶಾಲೆ ಮಾಣಿ-ಚುಟುಕು, ಕವನ, ಸಾಹಿತ್ಯ ರಚನಾ ಕಮ್ಮಟ ಕವಿಗೋಷ್ಠಿ…

ಪುತ್ತೂರು: ವಿದ್ಯಾರ್ಥಿಗಳು ತಮ್ಮ ಬಿಡುವಿನ ಸಮಯವನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಇಲ್ಲಿ ವಾಚಿಸಿದ ಪ್ರತಿಯೊಬ್ಬರ ಚುಟುಕು ,ಕವನಗಳು ತುಂಬಾ ಚೆನ್ನಾಗಿ ಮೂಡಿ ಬಂದಿವೆ. ಮಕ್ಕಳಿಗೆ ಕಥೆ,ಕವನ ಬರೆಯಲು ಇಂತಹ ಸಾಹಿತ್ಯ ಕಮ್ಮಟ ಗಳು ಹೆಚ್ಚು ಪ್ರಯೋಜನಕಾರಿ.ವಿದ್ಯಾರ್ಥಿಗಳು ನಿರಂತರ ಅಧ್ಯಯನಶೀಲರಾಗಬೇಕೆಂದು ಸರಕಾರಿ ಪ್ರೌಢ ಶಾಲೆ ಕಬಕದ ಕನ್ನಡ ಭಾಷಾ ಶಿಕ್ಷಕಿ,ದ. ಕ. ಜಿಲ್ಲಾ ಬರಹಗಾರ ಸಂಘದ ಉಪಾಧ್ಯಕ್ಷೆ ಶಾಂತಾ ಪುತ್ತೂರು ಹೇಳಿದ್ದಾರೆ.
ಅವರು ಕರ್ನಾಟಕ ರಾಜ್ಯ ಬರಹಗಾರರ ಸಂಘ (ರಿ) ಹೂವಿನಹಡಗಲಿ – ದ.ಕ.ಜಿಲ್ಲಾ ಘಟಕದ ವತಿಯಿಂದ ಕರ್ನಾಟಕ ಪ್ರೌಢ ಶಾಲೆ ಮಾಣಿಯಲ್ಲಿ ಸಾಹಿತ್ಯಾಸಕ್ತ ವಿದ್ಯಾರ್ಥಿಗಳಿಗೆ ಜು.27 ರಂದು ನಡೆದ ಸಾಹಿತ್ಯ ರಚನಾ ಕಮ್ಮಟ – ಕವಿಗೋಷ್ಠಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲಾ ಶಿಕ್ಷಕಿ ಫಿಲೋಮಿನಾ ಐಡಾ ಲೋಬೋ ಮಾತನಾಡಿ ಸಾಹಿತ್ಯ ಒಂದು ವರ, ನೀವು ಪುಣ್ಯವಂತರು ನಿಮ್ಮ ಕೀರ್ತಿ ಬೆಳಗಲಿ ಎಂದು ಶುಭ ಹಾರೈಸಿದರು.
ಕವಿ, ಹಿರಿಯ ಪತ್ರಕರ್ತ, ದ.ಕ.ಜಿಲ್ಲಾ ಬರಹಗಾರ ಸಂಘದ ಅಧ್ಯಕ್ಷರಾದ ಶ್ರೀ ಜಯಾನಂದ ಪೆರಾಜೆ ಮಕ್ಕಳಿಗೆ ಸಾಹಿತ್ಯ ರಚನೆ ತರಬೇತಿ ನೀಡಿ, ಮಕ್ಕಳೇ ಸ್ವತಃ ಕವನ ರಚಿಸಿ ವಾಚನ ಮಾಡಲು ಪ್ರೇರಣೆ ನೀಡಿದರು.
ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳಾದ ಹನ್ಸಿಕಾ ಎಸ್.ಪೂಜಾರಿ,
ಪೂರ್ವಿಕಾ ಭಾರದ್ವಾಜ್, ಭುವಿಕ ಎಸ್. ಡಿ., ಸೂರ್ಯ ಎಸ್.ಆರ್.ಪಂಡಿತ್ ,ಅಕ್ಷರ ಜೆ.ಶೆಟ್ಟಿ, ಕರ್ನಾಟಕ ಪ್ರೌಢ ಶಾಲೆಯ ಜಮೀಹ, ಮರ್ಯಮ್ ಸ್ವಾಬಿರಾ, ಫಾತಿಮತ್ ಅಮಾನ, ಶ್ರಾವ್ಯ ಮತ್ತು ಹಿರಿಯ ವಿಭಾಗದಲ್ಲಿ ಆಕಾಶವಾಣಿ ಕಲಾವಿದರಾದ ದಾ. ನಾ. ಉಮಣ್ಣ ಕೊಕ್ಕಪುಣಿ, ಫಿಲೋಮಿನಾ ಐಡಾ ಲೋಬೋ, ಶ್ಯಾಮಲಾ ಕೆ, ಜಯರಾಮ ಕಾಂಚನ ಕವನ ವಾಚನ ಮಾಡಿದರು.
ಕಮ್ಮಟದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಶಂಸಾ ಪತ್ರ ಹಾಗೂ ಕವನ ವಾಚಿಸಿದ ಹಿರಿಯ – ಕಿರಿಯ ಕವಿಗಳಿಗೆ ಪುಸ್ತಕ ಬಹುಮಾನ ನೀಡಿ ಗೌರವಿಸಲಾಯಿತು.
ವೇದಿಕೆಯಲ್ಲಿ ಮುಖ್ಯೋಪಾಧ್ಯಾಯರಾದ ಎಸ್. ಚೆನ್ನಪ್ಪ ಗೌಡ, ಶ್ರೀರಾಮ ಪ್ರೌಢ ಶಾಲಾ ಶಿಕ್ಷಕಿ ಪ್ರಜ್ಞಾ ಹಾಗೂ ಇತರರು ಉಪಸ್ಥಿತರಿದ್ದರು.
ಕರ್ನಾಟಕ ರಾಜ್ಯ ಬರಹಗಾರರ ಸಂಘ – ಬಂಟ್ವಾಳ ತಾಲೂಕು ಘಟಕದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಸಾಹಿತಿ ಶಿಕ್ಷಕ ಜಯರಾಮ ಕಾಂಚನ ಸ್ವಾಗತಿಸಿ ಹಿರಿಯ ಕನ್ನಡ ಭಾಷಾ ಶಿಕ್ಷಕಿ ಶ್ಯಾಮಲಾ. ಕೆ ವಂದಿಸಿ, ವಿದ್ಯಾರ್ಥಿನಿಯರಾದ ಜಮೀಹ ಮತ್ತು ಮರ್ಯಂ ಸ್ವಾಬಿರಾ ಕಾರ್ಯಕ್ರಮ ನಿರೂಪಿಸಿ ಶಾಲಾ ನಾಯಕ ಎಸ್.ಅಬ್ದುಲ್ ರಹೀಂ, ಮ.ಹಫೀಝ್, ವಿಶಾಲ್ ,ಬಾಶಿತ್ ಹಾಗೂ ಇತರರು ಸಹಕರಿಸಿದರು.

Sponsors

Related Articles

Back to top button