ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು – ಕಾರ್ಗಿಲ್ ವಿಜಯ ದಿವಸ ಸಮಾರಂಭ…
ಪುತ್ತೂರು: ಕೊರೆಯುವ ಚಳಿಯಲ್ಲಿ ಪರ್ವತದ ಮೇಲ್ಭಾಗದಿಂದ ಸುರಿಯುವ ಗುಂಡಿನ ದಾಳಿಯ ಮಧ್ಯೆ ಕಾರ್ಗಿಲ್ ಯುದ್ಧದಲ್ಲಿ ಕೆಚ್ಚೆದೆಯ ಹೋರಾಟವನ್ನು ಮಾಡಿ ಹುತಾತ್ಮರಾಗಿರುವ ಹಾಗೂ ಅದರಲ್ಲಿ ಪಾಲ್ಗೊಂಡಿರುವ ಸೇನಾಪಡೆಗಳ ಎಲ್ಲಾ ಅಧಿಕಾರಿಗಳೂ ನಿತ್ಯ ಸ್ಮರಣೀಯರು ಎಂದು ಭಾರತೀಯ ಸೇನಾಪಡೆಯ ವಿಶ್ರಾಂತ ಅಧಿಕಾರಿ ಲೆಫ್ಟಿನೆಂಟ್ ಕರ್ನಲ್ ಎಸ್.ಟಿ.ರಮಾಕಾಂತನ್ ಹೇಳಿದರು.
ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಕಂಪ್ಯೂಟರ್ ಸೈನ್ಸ್ ಮತ್ತು ಕಂಪ್ಯೂಟರ್ ಸೈನ್ಸ್ (ಡೇಟಾ ಸೈನ್ಸ್ ) ವಿಭಾಗದ ಆಶ್ರಯದಲ್ಲಿ ಜು.26 ರಂದು ನಡೆದ ಕಾರ್ಗಿಲ್ ವಿಜಯ ದಿವಸ ಸಮಾರಂಭದಲ್ಲಿ ಯೋಧ ನಮನವನ್ನು ಸಲ್ಲಿಸಿ ಮಾತನಾಡಿದರು.
ವಿಶ್ವದಲ್ಲಿಯೇ ಶ್ರೇಷ್ಠ ಸೇನಾ ಪಡೆಯನ್ನು ಹೊಂದಿರುವ ಭಾರತವು ತನ್ನ ಮೇಲೆ ದಾಳಿಗೆ ಬರುವ ಶತ್ರುವನ್ನು ಕ್ಷಣ ಮಾತ್ರದಲ್ಲಿ ಹುಟ್ಟಡಗಿಸುವ ಸಾಮರ್ಥ್ಯವನ್ನು ಹೊಂದಿದ್ದು ಇದು ನಮ್ಮೆಲರಿಗೂ ಹೆಮ್ಮೆಯಾಗಿದೆ. ಯುವ ಇಂಜಿನಿಯರುಗಳಿಗೆ ಸೇನೆಯಲ್ಲಿ ಅನೇಕ ಹುದ್ದೆಗಳಿವೆ. ಸಾಫ್ಟ್ವೇರ್ ಉದ್ಯೋಗಗಳಿಗಿಂತಲೂ ಉನ್ನತ ಮಟ್ಟದ ಜೀವನವನ್ನು ನಡೆಸುವುದಕ್ಕೆ ಬೇಕಾದ ಸವಲತ್ತುಗಳು ಸೇನಾ ಅಧಿಕಾರಿಗಳಿಗೆ ಲಭ್ಯವಿದೆ. ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ಸೇನೆಯನ್ನು ಸೇರುವ ಆಶಯವನ್ನು ಬೆಳೆಸಿಕೊಳ್ಳಬೇಕು ಎಂದವರು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಆಡಳಿತ ಮಂಡಳಿಯ ಕೋಶಾಧಿಕಾರಿ ಮುರಳೀಧರ ಭಟ್ ಬಂಗಾರಡ್ಕ ಮಾತನಾಡಿ ನಿರ್ಧಿಷ್ಟ ಗುರಿ ಮತ್ತು ರಾಷ್ಟ್ರಪ್ರೇಮ ಇಲ್ಲದಿದ್ದರೆ ಜೀವನದಲ್ಲಿ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ತಮ್ಮ ಸುಖಲೋಲುಪತೆಗೆ ಕೇವಲ ಹಣದ ಹಿಂದೆ ಹೋಗುವ ಚಾಳಿಯಿಂದಾಗಿ ನಮ್ಮಲ್ಲಿ ದೇಶ ಭಕ್ತಿ ಕಡಿಮೆಯಾಗುತ್ತಿದೆ. ದೇಶವನ್ನು ಕಾಯುವ ಯೋಧ ಕೇವಲ ಸಂಬಳಕ್ಕಾಗಿ ಕೆಲಸ ಮಾಡುತ್ತಿಲ್ಲ ಬದಲಾಗಿ ರಾಷ್ಟ್ರಭಕ್ತಿಯಿಂದ ತಮ್ಮ ಜೀವನವನ್ನೇ ದೇಶಕ್ಕಾಗಿ ಮುಡಿಪಾಗಿಡುತ್ತಾರೆ. ಇಂತಹ ವೀರ ಯೋಧರ ನೆನಪು ನಮ್ಮಲ್ಲಿ ಸದಾ ಹಸಿರಾಗಿರಬೇಕು ಎಂದರು.
ಲೆಫ್ಟಿನೆಂಟ್ ಕರ್ನಲ್ ಎಸ್.ಟಿ.ರಮಾಕಾಂತನ್ ಅವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.
ಕಾಲೇಜಿನ ಪ್ರಾಂಶುಪಾಲ ಡಾ.ಮಹೇಶ್‌ಪ್ರಸನ್ನ, ಕಂಪ್ಯೂಟರ್ ಸೈನ್ಸ್ ವಿಭಾಗ ಮುಖ್ಯಸ್ಥ ಡಾ.ನಿಶ್ಚಯ್ ಕುಮಾರ್ ಹೆಗ್ಡೆ ಹಾಗೂ ಡೇಟಾ ಸೈನ್ಸ್ ವಿಭಾಗ ಮುಖ್ಯಸ್ಥೆ ಪ್ರೊ.ರೂಪಾ.ಜಿ.ಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಡಾ.ಜೀವಿತಾ.ಬಿ.ಕೆ ಅತಿಥಿಗಳನ್ನು ಪರಿಚಯಿಸಿದರು. ಪ್ರೊ.ಮಾನಸ.ಪಿ ಸ್ವಾಗತಿಸಿ, ಪ್ರೊ.ಮೋಹನ್.ಕೆ ವಂದಿಸಿದರು. ಕುಶಲ್ ಗೌಡ ಕಾರ್ಯಕ್ರಮ ನಿರ್ವಹಿಸಿದರು.