ಪ್ರತ್ಯರ್ಪಣ ಗುಣದಿಂದಲೇ ಜಗತ್ತಿನ ಚಲನೆ – ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು…
ಉಡುಪಿ : ಯಕ್ಷಗಾನ ಕಲಾರಂಗ (ರಿ.), ಉಡುಪಿ ಇದರ ಅಂಗ ಸಂಸ್ಥೆಯಾದ ವಿದ್ಯಾಪೋಷಕ್ ಉಡುಪಿ ಜಿಲ್ಲೆಯ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಕಳೆದ 19 ವರ್ಷಗಳಿಂದ ಆರ್ಥಿಕ ನೆರವು ನೀಡುತ್ತಿದ್ದು, ವಿಂಶತಿ ವರ್ಷದಲ್ಲಿ 1182 ವಿದ್ಯಾರ್ಥಿಗಳಿಗೆ 1,15,36,000/- ರೂಪಾಯಿ ವಿದ್ಯಾರ್ಥಿವೇತನವನ್ನು ಸೆಪ್ಟೆಂಬರ್ 29, 2024 ಭಾನುವಾರ ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ವಿತರಿಸಲಾಯಿತು.
ಪ್ರತ್ಯರ್ಪಣ ಗುಣದಿಂದಲೇ ಜಗತ್ತಿನ ಚಲನೆ ನಡೆಯುತ್ತದೆ. ಪಡೆದ ಸಹಾಯವನ್ನು ದಾನದ ರೂಪದಲ್ಲಿ ಮುಂದಿನ ಪೀಳಿಗೆಗೆ ತಲುಪಿಸಿದರೆ ಬದುಕು ಸಾರ್ಥಕವಾಗುತ್ತದೆ. ಕರ್ತವ್ಯಗಳನ್ನು ಶ್ರದ್ಧೆಯಿಂದ ಮಾಡಿದಾಗ ಅವಕಾಶಗಳು ಒದಗಿಬರುತ್ತವೆ. ಗೀತೆಯ ಸಂದೇಶದಂತೆ ಭಗವದರ್ಪಣ ಬುದ್ಧಿಯಿಂದ ಮಾಡಿದ ಕೆಲಸ ಸಾರ್ಥಕವಾಗುತ್ತದೆ. ಲೌಕಿಕ ಶಿಕ್ಷಣದ ಜೊತೆಗೆ ಆಧ್ಯಾತ್ಮಿಕ ವಿದ್ಯೆಯನ್ನು ಕಲಿತು ಜೀವನದಲ್ಲಿ ಯಶಸ್ಸು ಸಾಧಿಸಿ ಎಂದು ಹಾರೈಸಿದರು. ಪುತ್ತಿಗೆ ಕಿರಿಯ ಶ್ರೀಪಾದರಾದ ಶ್ರೀ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು ತಮ್ಮ ಆಶೀರ್ವಚನದಲ್ಲಿ ವಿದ್ಯೆ ವಿನಯದಿಂದ ಶೋಭಿಸುತ್ತದೆ. ವಿದ್ಯಾರ್ಥಿಗಳು ವಿನಯ ಗುಣವನ್ನು ರೂಢಿಸಿಕೊಳ್ಳಬೇಕು ಎಂದರು.
ಇದೇ ಸಂದರ್ಭದಲ್ಲಿ ಸಾಂಕೇತಿಕವಾಗಿ 20 ವಿದ್ಯಾರ್ಥಿಗಳಿಗೆ ಚೆಕ್ ಮತ್ತು 10 ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪನ್ನು ವಿತರಿಸಲಾಯಿತು. ಧಾರವಾಡ ವಿದ್ಯಾಪೋಷಕ್‍ನ ಸ್ಥಾಪಕ ವಿಶ್ವಸ್ಥರಾದ ಪ್ರಮೋದ್ ಕುಲಕರ್ಣಿಯವರಿಗೆ ಸ್ವಾಮೀಜಿಯವರು ಸ್ಮರಣಿಕೆ, ಅಭಿನಂದನಾ ಪತ್ರ ನೀಡಿ ಅನುಗ್ರಹಿಸಿದರು. ಅಭ್ಯಾಗತರಾಗಿ ಕೋಟ ಗೀತಾನಂದ ಫೌಂಡೇಶನ್‍ನ ಆನಂದ ಸಿ. ಕುಂದರ್, ಬೆಂಗಳೂರು ಟೆಕ್ಸೈಲ್ ಪ್ರೈ. ಲಿ.ನ ಎಂ. ಡಿ. ಹರೀಶ್ ರಾಯಸ್, ಮುಂಬೈ ಒಎನ್‍ಜಿಸಿಯ ನಿವೃತ್ತ ಸಿಜಿಎಂ ಬನ್ನಾಡಿ ನಾರಾಯಣ ಆಚಾರ್, ಉಡುಪಿ ಸಾಯಿರಾಧ ಸಮೂಹ ಸಂಸ್ಥೆಗಳ ಮನೋಹರ ಎಸ್. ಶೆಟ್ಟಿ, ಉಡುಪಿ ಗಾಂಧಿ ಆಸ್ಪತ್ರೆಯ ಆಡಳಿತ ನಿರ್ದೇಶಕರಾದ ಡಾ. ಹರಿಶ್ಚಂದ್ರ, ಮಂಗಳೂರು ಪ್ರೇರಣಾ ಇನ್ಫೋಸಿಸ್‍ನ ರವಿರಾಜ ಬೆಳ್ಮ, ಉದ್ಯಮಿ ಆನಂದ ಪಿ. ಸುವರ್ಣ, ಉದ್ಯಮಿ ಕೆ. ನಾಗರಾಜ ರಾವ್, ಬ್ರಹ್ಮಾವರ ಪ್ರಣವ್ ಆಸ್ಪತ್ರೆಯ ಡಾ. ರಂಜಿತ್ ಕುಮಾರ್ ಭಾಗವಹಿಸಿದ್ದರು. ಸಂಸ್ಥೆಯ ಉಪಾಧ್ಯಕ್ಷರುಗಳಾದ ಎಸ್. ವಿ. ಭಟ್, ಪಿ. ಕಿಶನ್ ಹೆಗ್ಡೆ, ವಿ. ಜಿ. ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ಶ್ರೀಮತಿ ವಿದ್ಯಾಪ್ರಸಾದ್ ಪ್ರತಿಜ್ಞಾವಿಧಿ ಬೋಧಿಸಿದರು. ಜತೆ ಕಾರ್ಯದರ್ಶಿ ಎಚ್. ಎನ್. ಶೃಂಗೇಶ್ವರ ವಂದಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿದರು.