ಕೀರಿಕ್ಕಾಡು ಮಾಸ್ತರ್ ವಿಷ್ಣು ಭಟ್ ಸ್ಮರಣಾಂಜಲಿ…

ಕಾಸರಗೋಡು : ಯಕ್ಷಗಾನದಲ್ಲಿ ಪ್ರಸಂಗದ ಜತೆಗೆ ಪ್ರಸಂಗಕರ್ತರ ಹೆಸರನ್ನೂ ಹೇಳಬೇಕು. ಇದು ಕೃತಿಕಾರರರಿಗೆ ಹಾಗೂ ಅವರ ಪರಿಶ್ರಮಕ್ಕೆ ನೀಡುವ ಗೌರವ. ಯಕ್ಷಗಾನ ಕ್ಷೇತ್ರದಲ್ಲಿ ಪ್ರಸಂಗ ರ್ತರಾಗಿ,ಕಲಾವಿದರಾಗಿ ಕೀರಿಕ್ಕಾಡು ಮಾಸ್ತರರ ಕೊಡುಗೆ ಅಪಾರವಾದುದು ಎಂದು ನಿವೃತ್ತ ಮುಖ್ಯ ಶಿಕ್ಷಕ ಡಿ. ರಾಮಣ್ಣ ಮಾಸ್ತರ್ ಹೇಳಿದರು.
ಅವರು ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಕಾಸರಗೋಡು ಜಿಲ್ಲಾ ಘಟಕ ಮತ್ತು ಬನಾರಿ ಕೀರಿಕ್ಕಾಡು ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘದ ಆಶ್ರಯದಲ್ಲಿ ಬನಾರಿಯ ಕೀರಿಕ್ಕಾಡು ಸ್ಮಾರಕ ಯಕ್ಷಗಾನ ಸಾಂಸ್ಕೃತಿಕ ಅಧ್ಯಯನ ಕೇಂದ್ರದಲ್ಲಿ ಭಾನುವಾರ ಕೀರಿಕ್ಕಾಡು ಮಾಸ್ತರ್ ವಿಷ್ಣು ಭಟ್ಟರ ಬದುಕು- ಬರಹದ ಕುರಿತ ಸ್ಮರಣಾಂಜಲಿ ಕಾರ್ಯಕ್ರಮದಲ್ಲಿ ಸಂಸ್ಮರಣೆ ಭಾಷಣ ಮಾಡಿದರು.
‘ಯಕ್ಷಗಾನದ ಪುನಶ್ಚೇತನಕ್ಕೆ ವಿಷ್ಣು ಭಟ್ಟರು ಮಹತ್ವದ ಕೊಡುಗೆ ನೀಡಿದ್ದಾರೆ. ಊರಿನ ಜನರ ಸಾಮಾಜಿಕ, ಸಾಂಸ್ಕೃತಿಕ ಪರಿವರ್ತನೆಗೆ ನಾಂದಿ ಹಾಡಿದರು. ಅವರು ಸ್ಥಾಪಿಸಿದ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘಕ್ಕೆ ಇತಿಹಾಸವಿದೆ ಎಂದರು.
ಕೀರಿಕ್ಕಾಡು ಮಾಸ್ತರರ ಪುತ್ರ ವೈದ್ಯ ಸಾಹಿತಿ ಡಾ. ರಮಾನಂದ ಬನಾರಿ ಅಧ್ಯಕ್ಷತೆ ವಹಿಸಿದ್ದರು.
ಕನ್ನಡ ಚುಟುಕು ಸಾಹಿತ್ಯ ಪರಿಷತ್ ಗೆ ಶುಭಹಾರೈಸಿ ಅತಿಥಿಗಳಿಗೆ ಅವರ ಪುಸ್ತಕ ಸ್ಮರಣಿಕೆ ನೀಡಿ ಅಭಿನಂದಿಸಿದರು.
ಪುತ್ತೂರಿನ ದ್ವಾರಕಾ ಸಮೂಹಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಗೋಪಾಲಕೃಷ್ಣ ಭಟ್ ಮುಖ್ಯ ಅತಿಥಿಯಾಗಿ ಶುಭಹಾರೈಸಿದರು. ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಸ್ಥಾಪಕ ಸಂಚಾಲಕರಾದ ಡಾ. ವಾಮನ್ ರಾವ್ ಬೇಕಲ್- ಸಂಧ್ಯಾರಾಣಿ ಟೀಚರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ವಿರಾಜ್ ಅಡೂರು ಪ್ರಾಸ್ತಾವಿಕವಾಗಿ ಸಂಘಟನೆಯ ಯೋಜನೆಗಳ ಬಗ್ಗೆ ಮಾತನಾಡಿದರು.
ಈ ಸಂದರ್ಭದಲ್ಲಿ ಕೀರಿಕ್ಕಾಡು ಮಾಸ್ತರ್ ವಿಷ್ಣು ಭಟ್ ಅವರ ಭಾವಚಿತ್ರಕ್ಕೆ ಕುಟುಂಬಸ್ಥರು ಪುಷ್ಪಾರ್ಚನೆ ಮಾಡಿದರು. ಪರಿಷತ್ತಿನ ಕರ್ನಾಟಕ ರಾಜ್ಯ ಸಂಚಾಲಕರಾದ ಜಯಾನಂದ ಪೆರಾಜೆ ಹಾಗೂ ಡಾ. ಶಾಂತ ಪುತ್ತೂರು ಶುಭ ಹಾರೈಸಿದರು. ಶಿಕ್ಷಕಿ ಜಲಜಾಕ್ಷಿ ರೈ ಸ್ವಾಗತಿಸಿ, ಯಮಿತಾ, ಅರ್ಚನಾ, ತೇಜಸ್ವಿ,ಸ್ವಾತಿ ಪ್ರಾರ್ಥನೆ ಹಾಡಿದರು. ಕಾರ್ಯದರ್ಶಿ ವಸಂತ ಕೆರೆಮನೆ ವಂದಿಸಿದರು. ಅಪೂರ್ವ ಕಾರಂತ ಪುತ್ತೂರು ನಿರೂಪಿಸಿದರು.
ಶಿಕ್ಷಣ ತಜ್ಞ ವಿ.ಬಿ. ಕುಳಮರ್ವ ಅವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಿತು.25 ಮಂದಿ ಕವಿಗಳು ಚುಟುಕು ವಾಚನ ಮಾಡಿದರು. ಶ್ವೇತಾ ರಮೇಶ್ ಬೆಳ್ಳಿಪ್ಪಾಡಿ, ಅಪೂರ್ವ ಕಾರಂತ, ಆದ್ಯಂತ್ ಅಡೂರು ಹಾಗೂ ಗಿರೀಶ್ ಪೆರಿಯಡ್ಕ ಭಾವಭಕ್ತಿ ಗಾಯನ ಮಾಡಿದರು. ಪರಿಷತ್ತಿನ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಡಾ. ಕೊಳ್ಚಪ್ಪೆ ಗೋವಿಂದ ಭಟ್ ಮತ್ತು ಕಾರ್ಯದರ್ಶಿಯಾಗಿ ಅಪೂರ್ವ ಕಾರಂತರನ್ನು ಆಯ್ಕೆಮಾಡಲಾಯಿತು.