ಅನಂತಪುರಿ ಗಡಿನಾಡ ಕನ್ನಡ ಸಂಸ್ಕೃತಿ ಉತ್ಸವ…
ತಿರುವನಂತಪುರದಲ್ಲಿ ಬಹುಭಾಷಾ ಕವಿ ಸಂಗಮ....

ತಿರುವನಂತಪುರ: ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಕರ್ನಾಟಕ ಸರಕಾರ ಮತ್ತು ಭಾರತ್ ಭವನ ತಿರುವನಂತಪುರ ಕೇರಳ ಸರಕಾರ ಇವುಗಳ ಸಂಯುಕ್ತಾಶ್ರಯದಲ್ಲಿ ತಿರುವನಂತಪುರದ ಸಿ.ವಿ.ರಾಮನ್ ಪಿಳ್ಳೆ ರಸ್ತೆಯಲ್ಲಿರುವ ಭಾರತ್ ಭವನದಲ್ಲಿ ಒಂದು ದಿನದ ‘ಅನಂತಪುರಿ ಗಡಿನಾಡ ಕನ್ನಡ ಸಂಸ್ಕೃತಿ ಉತ್ಸವ’ ಇತ್ತೀಚೆಗೆ ಜರಗಿತು.
ಕೇರಳ ಸರಕಾರದ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಜಿ. ಆರ್. ಅನಿಲ್ ಉತ್ಸವವನ್ನು ಉದ್ಘಾಟಿಸಿದರು. ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಅಧ್ಯಕ್ಷತೆ ವಹಿಸಿದ್ದರು. ಕೇರಳ ಸರಕಾರದ ಶಿಕ್ಷಣ ಸಚಿವ ಶಿವನ್ ಕುಟ್ಟಿ, ಕಾಸರಗೋಡಿನ ಶಾಸಕ ಎನ್.ಎ.ನೆಲ್ಲಿಕುನ್ನು, ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್, ಕಾಸರಗೋಡು ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಸಂಸ್ಥಾಪಕ ಪ್ರದೀಪ ಕುಮಾರ್ ಕಲ್ಕೂರ ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕನ್ನಡ ಸಂಸ್ಕೃತಿ ಉತ್ಸವದ ಅಂಗವಾಗಿ ಅಖಿಲ ಭಾರತ ವ್ಯಾಪ್ತಿಯ ಬಹುಭಾಷಾ ಕವಿಸಂಗಮವನ್ನು ಏರ್ಪಡಿಸಲಾಗಿತ್ತು. ಕಾಸರಗೋಡಿನ ಹಿರಿಯ ಕವಿ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು.
ಕವಿಗಳಾಗಿ ಭಾಗವಹಿಸಿದ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ( ತುಳು), ಗಿರೀಶ್ ಪುಲಿಯೂರು (ಮಲಯಾಳಂ), ಎಡ್ವರ್ಡ್ ಲೋಬೋ ತೊಕ್ಕೊಟ್ಟು (ಕನ್ನಡ), ಎನ್.ಡಿ. ರಾಜಕುಮಾರ್ ತಿರುವನಂತಪುರಂ (ತಮಿಳು), ಡಾ.ಶೋಭನ್ ಕುಮಾರ್ ಕೊಂಪಳ್ಳಿ (ತೆಲುಗು ), ಡಾ.ಹೆಚ್.ಪೂರ್ಣಿಮ ತಿರುವನಂತಪುರಂ (ಸಂಸ್ಕೃತ), ಡಾ. ಕವಿತಾ ಮಂಗಳೂರು (ಹಿಂದಿ), ಸರಿತಾ ಮೋಹನ್ ಭಾಮ ತಿರುವನಂತಪುರಂ (ಇಂಗ್ಲಿಷ್), ವಿಲ್ಸನ್ ಕಟೀಲು (ಕೊಂಕಣಿ), ರಶೀದ್ ನಂದಾವರ (ಬ್ಯಾರಿ), ಮುಹಮ್ಮದ್ ಅಝೀಮ್ ಮಣಿಮುಂಡ (ಉರ್ದು), ಸಂಧ್ಯಾ ಗೀತ ಬಾಯಾರು (ಕರಾಡ), ಡಾ.ಮೀನಾಕ್ಷಿ ರಾಮಚಂದ್ರ ಮತ್ತು ಪುರುಷೋತ್ತಮ ಭಟ್ ಕೆ. (ಹವ್ಯಕ) ಹೀಗೆ ವಿವಿಧ ಭಾಷೆಗಳಲ್ಲಿ ಸ್ವರಚಿತ ಕವಿತೆಗಳನ್ನು ಓದಿದರು.
ಪತ್ರಕರ್ತ ಗಂಗಾಧರ ತೆಕ್ಕೆಮೂಲೆ ಸ್ವಾಗತಿಸಿ, ಶ್ರೀಕಾಂತ್ ನೆಟ್ಟಣಿಗೆ ವಂದಿಸಿದರು. ನ್ಯಾಯವಾದಿ ಎಂ.ಎಸ್. ಥೋಮಸ್ ಡಿ’ಸೋಜ ನಿರೂಪಿಸಿದರು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಎ.ಆರ್. ಸುಬ್ಬಯ್ಯ ಕಟ್ಟೆ ಕಾರ್ಯಕ್ರಮ ಸಯೋಜಿಸಿದ್ದರು.