ಅಶೋಕೆಯಲ್ಲಿ ಸಾಮವೇದ ಸಂಹಿತಾ ಯಾಗ, ಘನ ಪಾರಾಯಣ ಆರಂಭ…

ಗೋಕರ್ಣ: ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಸ್ವಭಾಷಾ ಚಾತುರ್ಮಾಸ್ಯ ಅಂಗವಾಗಿ ಹಮ್ಮಿಕೊಂಡಿರುವ ಚತುಃಸಂಹಿತಾ ಯಾಗದ ಕೊನೆಯ ಚರಣವಾದ ಸಾಮವೇದ ಸಂಹಿತಾ ಹವನ ಮತ್ತು ಘನ ಪಾರಾಯಣ ಶುಕ್ರವಾರ ಆರಂಭವಾಯಿತು.
ಈಗಾಗಲೇ ಋಗ್ವೇದ ಸಂಹಿತೆ, ಯಜುರ್ವೇದ ಸಂಹಿತೆ ಮತ್ತು ಅಥರ್ವವೇದ ಸಂಹಿತಾ ಯಾಗ ಈಗಾಗಲೇ ಸಂಪನ್ನಗೊಂಡಿದ್ದು, ಸಾಮವೇದ ಹವನ ಸೆಪ್ಟೆಂಬರ್ 2ರಂದು ಮುಕ್ತಾಯವಾಗಲಿದೆ.
ಕೃಷ್ಣಯಜುರ್ವೇದ ತೈತ್ತಿರೀಯ ಸಂಹಿತೆಯ ಚತುರ್ಥಪಾದದ ಘನ ಮತ್ತು ಅರಣ್ಯಕ ಪಾರಾಯಣವನ್ನು ಬೋಧಾಯನ ಮಂತ್ರಪ್ರಶ್ನ ಸಹಿತವಾಗಿ ಹಮ್ಮಿಕೊಳ್ಳಲಾಗಿದ್ದು, ಶಿಕ್ಷಾ-ಛಂದಸ್ಸು, ಜ್ಯೌತಿಷ, ನಿರುಕ್ತ ಪಾರಾಯಣ ಘನಪಾಠಿ ಶಂಕರನಾರಾಯಣ ಜೋಯಿಸರ ಮಾರ್ಗದರ್ಶನದಲ್ಲಿ ನಡೆಯುತ್ತಿದೆ.
ಘನಪಾಠಿಗಳಾದ ಜಡ್ಡಿನಬೈಲು ಸುಚೇತನ ಭಟ್ಟರು, ಗೋಕರ್ಣದ ಮಹಾಬಲೇಶ್ವರ ಶಂಕರಲಿಂಗ, ನಾಗರಾಜ ಗಾಯತ್ರೀ, ಮತ್ತಿಘಟ್ಟ ರಾಧಾಕೃಷ್ಣ ಭಟ್ಟರು, ಶ್ರೀಧರಪುರದ ದತ್ತಾತ್ರೇಯ ಭಟ್ಟರು, ಮುಂಬೈನ ಹರನ್ ರಾಮನಾಥ್ ಶರ್ಮಾ, ಚೆನ್ನೈನ ವಿಘ್ನೇಶ್ ಕೃಷ್ಣನ್ ಶರ್ಮಾ, ಅಶೋಕೆಯ ಮಂಜುನಾಥ ಭಟ್ಟರು ಸೆಪ್ಟೆಂಬರ್ 5ರವರೆಗೆ ಘನ ಪಾರಾಯಣ ಕೈಗೊಳ್ಳಲಿದ್ದಾರೆ.
ಚಾತುರ್ಮಾಸ್ಯದ 51ನೇ ದಿನವಾದ ಶುಕ್ರವಾರ ಕುಮಟಾದ ದಂತವೈದ್ಯ ಡಾ.ಸುರೇಶ್ ಹೆಗಡೆ ಕುಟುಂಬದವರಿಂದ ಸರ್ವಸೇವೆ ನೆರವೇರಿತು.
ಸನ್ಮಾರ್ಗದಲ್ಲಿ ನಡೆಯುವ ವಿಪ್ರರಿಗೆ ಸಂಪತ್ತು ಎನಿಸಿದ ವೇದಗಳನ್ನು ಉಳಿಸುವ ಉದ್ದೇಶದಿಂದ ಈ ಅತ್ಯಪೂರ್ವ ಎನಿಸಿದ ಚತುಃಸಂಹಿತಾ ಯಾಗವನ್ನು ಹಮ್ಮಿಕೊಳ್ಳಲಾಗಿದೆ. ವೇದಾಧ್ಯಯನ, ಪ್ರತಿದಿನ ವೇದ ಅಭ್ಯಾಸ, ನಿತ್ಯಾನುಷ್ಠಾನ ಮಾಡುವಂತೆ ಶ್ರೀಶಂಕರರು ಸೂಚಿಸಿದ್ದು, ಈ ಮಂತ್ರಸಂಪತ್ತಿನಿಂದಲೇ ಶ್ರೇಯಸ್ಸು ಹಾಗೂ ಇದು ಮೋಕ್ಷಕ್ಕೆ ದಾರಿ. ಇಂಥ ಅಮೂಲ್ಯ ವೇದಸಂಪತ್ತಿನ ಶ್ರವಣ ಮತ್ತು ಚತುಃಸಂಹಿತಾ ಯಾಗದಲ್ಲಿ ಪಾಲ್ಗೊಳ್ಳುವುದು ಕೂಡಾ ಅತಿಶಯ ಪುಣ್ಯವನ್ನು ತಂದುಕೊಡುವಂಥದ್ದು ಎಂದು ಪುರಾಣಗಳಲ್ಲಿ ಉಲ್ಲೇಖವಿದೆ. ಈ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ಈ ಯಾಗವನ್ನು ಹಮ್ಮಿಕೊಳ್ಳಲಾಗಿದೆ.
ವಿಪ್ರರಿಗೆ ವೇದವೇ ಸಂಪತ್ತು; ಆದರೆ ಆಧುನಿಕ ಜಗತ್ತಿನಲ್ಲಿ ಭೌತಿಕ ಸಂಪತ್ತನ್ನು ಅರಸಿ ಧರ್ಮಮಾರ್ಗವನ್ನು ಮನುಷ್ಯ ಮರೆತಿದ್ದಾನೆ. ಮನುಕುಲದ ಉಳಿವಿಗಾಗಿ ವೇದಸಂಪತ್ತಿನ ಸಂರಕ್ಷಣೆ ಅಗತ್ಯ. ವೇದಾಧ್ಯಯನ ಮಾಡಲು ಸಾಧ್ಯವಾಗದಿದ್ದರೆ
ವೇದ ಮಂತ್ರ ಅನುಷ್ಠಾನದಲ್ಲಿ ಶ್ರದ್ಧಾಭಕ್ತಿಯಿಂದ ಪಾಲ್ಗೊಂಡರೂ ಇಷ್ಟಪ್ರಾಪ್ತಿಯಾಗುತ್ತದೆ ಎಂದು ಶ್ರೀಮಠದ ಶಾಸ್ತ್ರಿಗಳಾದ ಸುಚೇತನ ಶಾಸ್ತ್ರಿ ಹೇಳಿದ್ದಾರೆ.
ವೇದಮೂರ್ತಿ ಶಂಕರನಾರಾಯಣ ಘನಪಾಠಿಗಳು ಶ್ರೀಗಳ ದರ್ಶನಾಶೀರ್ವಾದ ಪಡೆದರು. ಶಾಸನತಂತ್ರ ಅಧ್ಯಕ್ಷ ಮೋಹನ ಭಾಸ್ಕರ ಹೆಗಡೆ, ವಿವಿವಿ ಆಡಳಿತಾಧಿಕಾರಿ ಡಾ.ಟಿ.ಜೆ.ಪ್ರಸನ್ನಕುಮಾರ್, ಚಾತುರ್ಮಾಸ್ಯ ತಂಡದ ಮಂಜುನಾಥ ಸುವರ್ಣಗದ್ದೆ, ಶ್ರೀಕಾಂತ್ ಪಂಡಿತ್, ಗಣೇಶ್ ಹೆಗಡೆ ಮತ್ತಿತರರು ಉಪಸ್ಥಿತರಿದ್ದರು.