ನೀಲಪದ್ಮ ಯಕ್ಷಪ್ರಶಸ್ತಿ ಪ್ರದಾನ – ನುಡಿ ನಮನ…
ಸಾಧಕರ ನೆನಪಿಂದ ಬದುಕು ಸ್ಮರಣೀಯ: ಕುಕ್ಕುವಳ್ಳಿ...

ಉಪ್ಪಿನಂಗಡಿ: ‘ಸಮಾಜದ ಬೇರೆ ಬೇರೆ ರಂಗಗಳಲ್ಲಿ ತಮ್ಮಿಂದಾದ ಕೊಡುಗೆ ನೀಡಿ ಗತಿಸಿ ಹೋದ ಹಿರಿಯರನ್ನು ಎಂದಿಗೂ ಮರೆಯಲಾಗದು. ಕನಿಷ್ಠಪಕ್ಷ ಅವರ ಕುಟುಂಬದವರಿಗಾದರೂ ಅದು ನೆನಪಿರಬೇಕು. ಅದರಲ್ಲೂ ಯಕ್ಷಗಾನದಂತಹ ಶ್ರೇಷ್ಠ ಕಲೆಗಾಗಿ ಶ್ರಮಿಸಿದ ಸಾಧಕರಿಗೆ ಇಡೀ ಸಮಾಜವೇ ಒಂದು ಕುಟುಂಬ. ಅಂಥವರ ನೆನಪಿಂದ ಉಳಿದವರ ಬದುಕು ಸ್ಮರಣೀಯವಾಗುತ್ತದೆ; ಅದುವೇ ಮುಂದಿನವರಿಗೆ ಮಾದರಿಯಾಗಬಲ್ಲುದು’ ಎಂದು ಕರ್ನಾಟಕ ಜಾನಪದ,ಯಕ್ಷಗಾನ ಮತ್ತು ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದ್ದಾರೆ.
ಶ್ರೀ ಕಾಳಿಕಾಂಬಾ ಯಕ್ಷಕಲಾ ಟ್ರಸ್ಟ್ ಉಪ್ಪಿನಂಗಡಿ ಇದರ ಸುವರ್ಣ ಮಹೋತ್ಸವದ ಅಂಗವಾಗಿ ಉಪ್ಪಿನಂಗಡಿ ರಾಮನಗರದ ಶ್ರೀ ಶಾರದಾ ಕಲಾ ಮಂಟಪದಲ್ಲಿ ಜರಗಿದ ‘ಶ್ರೀ ಮಹಾಭಾರತ ಸರಣಿ ಸುವರ್ಣ ಶತಕ ತಾಳಮದ್ದಳೆ’ ಕಾರ್ಯಕ್ರಮದ ವೇದಿಕೆಯಲ್ಲಿ ಸೆಪ್ಟೆಂಬರ್ 7ರಂದು ಹರಿಹರ ಪಲ್ಲತಡ್ಕ ದಿ.ನೀಲಾವತಿ ಮತ್ತು ಪದ್ಮನಾಭ ಕೊಂಬೋಟು ದಂಪತಿಯ ಸಂಸ್ಮರಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಇದೇ ಸಂದರ್ಭದಲ್ಲಿ ಹಿರಿಯ ಅರ್ಥಧಾರಿ ಗೋಪಾಲ ಶೆಟ್ಟಿ ಕಳೆಂಜ ಅವರಿಗೆ ಪ್ರಥಮ ವರ್ಷದ ‘ನೀಲಪದ್ಮ ಯಕ್ಷಪ್ರಶಸ್ತಿ’ ಪ್ರದಾನ ಮಾಡಲಾಯಿತು.
ಪಾತಾಳ – ಶೀನ ಶೆಟ್ಟಿ ನುಡಿ ನಮನ:
ಇತ್ತೀಚೆಗೆ ನಿಧನರಾದ ಯಕ್ಷಗಾನ ರಂಗದ ಹಿರಿಯ ಸ್ತ್ರೀ ವೇಷಧಾರಿ, ರಾಜ್ಯ ಪ್ರಶಸ್ತಿ ಪುರಸ್ಕೃತ ಪಾತಾಳ ವೆಂಕಟರಮಣ ಭಟ್ ಹಾಗೂ ಉಪ್ಪಿನಂಗಡಿಯ ಜನಪ್ರಿಯ ಆಯುರ್ವೇದ ಪಂಡಿತ ಮತ್ತು ಯಕ್ಷಗಾನ ಕಲಾಪೋಷಕ ವೈದ್ಯ ದಿ.ಶ್ರೀನಿವಾಸ ಶೆಟ್ಟಿ ಅವರಿಗೆ ಸಭೆಯಲ್ಲಿ ನುಡಿ ನಮನ ಸಲ್ಲಿಸಲಾಯಿತು. ಶ್ರೀರಾಮಕುಂಜೇಶ್ವರ ಪದವಿ ಕಾಲೇಜು ಪ್ರಾಂಶುಪಾಲ ಮತ್ತು ಅರ್ಥಧಾರಿ ಗಣರಾಜ ಕುಂಬಳೆ ನುಡಿ ನಮನ ಸಲ್ಲಿಸಿದರು. ರಾಮನಗರ ಶಾರದಾ ಕಲಾ ಮಂಟಪದ ಸಂಚಾಲಕ ಉಮೇಶ ಶೆಣೈ, ಸಂತ ಆನ್ಸ್ ಶಿಕ್ಷಣ ಮಹಾವಿದ್ಯಾಲಯದ ವಿಶ್ರಾಂತ ದೈಹಿಕ ಶಿಕ್ಷಕ ಡಾ.ಸುರೇಶ್ ಶೆಟ್ಟಿ, ಯಕ್ಷಗಾನ ಕಲಾವಿದ ಅಂಬಾ ಪ್ರಸಾದ್ ಪಾತಾಳ, ವೈದ್ಯ ಶಾಲೆಯ ಜಗದೀಶ ಶೀನ ಶೆಟ್ಟಿ, ದೇವದಾಸ ಎಸ್.ಪಿ. ಹರಿಹರ ಅತಿಥಿಗಳಾಗಿದ್ದರು.
ಶ್ರೀ ಕಾಳಿಕಾಂಬಾ ಯಕ್ಷಕಲಾ ಟ್ರಸ್ಟ್ ಅಧ್ಯಕ್ಷ ದಿವಾಕರ ಆಚಾರ್ಯ ಗೇರುಕಟ್ಟೆ ಸ್ವಾಗತಿಸಿದರು. ಸಂಸ್ಮರಣಾ ಸಮಿತಿ ಸಂಚಾಲಕ ಶ್ರೀಧರ ಎಸ್.ಪಿ.ಕೃಷ್ಣಾಪುರ ಪ್ರಾಸ್ತಾವಿಕ ಭಾಷಣ ಮಾಡಿದರು. ಶಿಕ್ಷಕಿ ಪುಷ್ಪಲತಾ ವಂದಿಸಿದರು. ಕೊಂಬೋಟು ಕುಟುಂಬಸ್ಥರು ಹಾಗೂ ಯಕ್ಷಕಲಾ ಟ್ರಸ್ಟ್ ಸದಸ್ಯರು ಉಪಸ್ಥಿತರಿದ್ದರು.
ತಾಳಮದ್ದಳೆ – ‘ಭೀಷ್ಮ ಸೇನಾಧಿಪತ್ಯ’:
ಶ್ರೀ ಕಾಳಿಕಾಂಬಾ ಯಕ್ಷಕಲಾ ಟ್ರಸ್ಟ್ ನ ಸ್ವರ್ಣ ಶತಕ ಶ್ರೀ ಮಹಾಭಾರತ ಸರಣಿ ಅಂಗವಾಗಿ ದ.ಕ. ಜಿಲ್ಲೆಯ ವಿವಿಧ ಯಕ್ಷಗಾನ ತಂಡಗಳಿಂದ ಸೆ.6 ಮತ್ತು 7ರಂದು ಎರಡು ದಿನಗಳ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮ ಜರಗಿತು. ಕೊನೆಯಲ್ಲಿ ಸರಣಿಯ 97ನೇ ಕಾರ್ಯಕ್ರಮವಾಗಿ ಸಂಘದ ಸದಸ್ಯರಿಂದ ‘ಭೀಷ್ಮ ಸೇನಾಧಿಪತ್ಯ’ ತಾಳಮದ್ದಳೆ ನೆರವೇರಿತು.ಭೀಷ್ಮನಪಾತ್ರದಲ್ಲಿ ಅತಿಥಿ ಕಲಾವಿದರಾಗಿ ಭಾಸ್ಕರ ರೈ ಕುಕ್ಕುವಳ್ಳಿ ಭಾಗವಹಿಸಿದರು.