ಸಂಪಾಜೆ ಗ್ರಾಮಕ್ಕೆ ಸಹಾಯಕ ಕಮಿಷನರ್ ಭೇಟಿ…
ಸುಳ್ಯ: ಪುತ್ತೂರು ಸಹಾಯಕ ಕಮಿಷನರ್ ಜುಬಿನ್ ಮೊಹಪಾತ್ರ ಅವರು ಸಂಪಾಜೆ ಗ್ರಾಮಕ್ಕೆ ಭೇಟಿ ನೀಡಿ ಮೂಲಭೂತ ಸೌಕರ್ಯಗಳ ಬಗ್ಗೆ ಮನವಿ ಸ್ವೀಕರಿಸಿದರು.
ಪಂಚಾಯತ್ ಸಂಪಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಗೂನಡ್ಕ- ಪೇರಡ್ಕ ರಸ್ತೆಯಲ್ಲಿ ಸಂಪರ್ಕ ಕಲ್ಪಿಸುವ ದರ್ಕಾಸ್ ಸೇತುವೆ ಮಳೆಗಾಲದಲ್ಲಿ ಪಯಸ್ವಿನಿ ನದಿಯಲ್ಲಿ ಪ್ರವಾಹ ಹೆಚ್ಚಾದಾಗ ಆಗಾಗ ಮುಳುಗಡೆಯಗುತ್ತಿದ್ದು, ಈ ರಸ್ತೆಯಲ್ಲಿ ನೂರಾರು ಶಾಲಾ ವಿದ್ಯಾರ್ಥಿಗಳು,ಸಾರ್ವಜನಿಕರು ನಿತ್ಯ ಸಂಚಾರ ಮಾಡುವ ಕಾರಣ ಈ ಬಗ್ಗೆ ಹೊಸ ಸೇತುವೆ ನಿರ್ಮಾಣ ಹಾಗೂ ಬದಲಿ ರಸ್ತೆಯಲ್ಲಿ ಸಂಚಾರ ಮಾಡಲು ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಹಾಗೂ ಪ್ರಾಕೃತಿಕ ವಿಕೋಪದಿಂದ ಹಾಳಾದ ಗ್ರಾಮದ ರಸ್ತೆಗಳಿಗೆ ಅನುದಾನ ದೊರಕಿಸಿಕೊಡುವಂತೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸುಮತಿ ಶಕ್ತಿವೇಲು ರವರು ಪುತ್ತೂರು ಸಹಾಯಕ ಕಮಿಷನರ್ ರವರಿಗೆ ಮನವಿ ಸಲ್ಲಿಸಿದರು. ಸಹಾಯಕ ಕಮಿಷನರ್ ರವರು ಸ್ಥಳ ಪರಿಶೀಲನೆ ನಡೆಸಿ ಸರಕಾರದ ಹಾಗೂ ಮೇಲಾಧಿಕಾರಿಗಳ ಗಮನಕ್ಕೆ ತರುವುದಾಗಿ ಹಾಗೂ ಅಗತ್ಯ ಮುಂಜಾಗ್ರತೆ ವಹಿಸುವಂತೆ ಸೂಚಿಸಿದ್ದಾರೆನ್ನಲಾಗಿದೆ. ಈ ಸಂದರ್ಭದಲ್ಲಿ ಭೂಕುಸಿತ ಪ್ರದೇಶಗಳ ಬಗ್ಗೆ ಎಚ್ಚರ ವಹಿಸುವಂತೆ ಅಧಿಕಾರಿಗಳಿಗೆ ಅವರು ಸೂಚಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಎಸ್.ಕೆ.ಹನೀಫ್ ಮಾಜಿ ಅಧ್ಯಕ್ಷರಾದ ಜಿ.ಕೆ.ಹಮೀದ್ ಗೂನಡ್ಕ,ಸ್ಥಳೀಯ ಸದಸ್ಯರಾದ ಪಿ.ಕೆ.ಅಬೂಸಾಲಿ ಗೂನಡ್ಕ, ಭೂ ಗಣಿ ಇಲಾಖೆಯ ಅಧಿಕಾರಿ ಶ್ರೀಮತಿ ವಸುದಾ ಸಹಾಯಕ ಕಮಿಷನರ್ ಆಪ್ತ ಕಾರ್ಯದರ್ಶಿ ನಿತೀನ್, ಕಂದಾಯ ಅಧಿಕಾರಿ ಅವಿನ್ ರಂಗತ್ತಮಲೆ , ಗ್ರಾಮ ಆಡಳಿತ ಅದಿಕಾರಿ ಮಂಜುನಾಥ್ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.