ತಾಲೂಕು ಮಟ್ಟದ ಮಹಿಳಾ ಮತ್ತು ಮಕ್ಕಳ ವಿವಿಧ ಸಮಿತಿ ಸಭೆ….
ಪುತ್ತೂರು : ಶತಮಾನ ಕಂಡ ಹಾಗೂ ತಾಲ್ಲೂಕಿನಲ್ಲಿಯೇ ಅತೀ ಹೆಚ್ಚಿನ ಸಂಖ್ಯೆಯ ಮಕ್ಕಳನ್ನು ಹೊಂದಿರುವ ಪುತ್ತೂರಿನ ಕೊಂಬೆಟ್ಟು ಸರ್ಕಾರಿ ಶಾಲೆಯಲ್ಲಿ ಹೆಣ್ಮಕ್ಕಳಿಗೆ ಸರಿಯಾದ ಶೌಚಾಲಯ ವ್ಯವಸ್ಥೆಯಿಲ್ಲ. ಇರುವ ಶೌಚಾಲಯಗಳ ನಿರ್ವಹಣೆಯೂ ಸರಿಯಾಗಿಲ್ಲ. ಇದನ್ನು ಸರಿಪಡಿಸಬೇಕು ಎಂದು ಪುತ್ತೂರು ತಾಪಂ ಸಭಾಭವನದಲ್ಲಿ ಬುಧವಾರ ನಡೆದ ಮಹಿಳಾ ಮತ್ತು ಮಕ್ಕಳಿಗೆ ಸಂಬಂಧಿಸಿದ ವಿವಿಧ ಸಮಿತಿಗಳ ಸಭೆಯಲ್ಲಿ ವ್ಯಕ್ತವಾಯಿತು.
ಪುತ್ತೂರು ತಹಶೀಲ್ದಾರ್ ಅನಂತ ಶಂಕರ್ ಅವರ ಅಧ್ಯಕ್ಷತೆಯಲ್ಲಿ ನಡೆದ ವರದಕ್ಷಿಣೆ ನಿಷೇಧ ಕಾಯ್ದೆ ಸಮಿತಿ, ಮಾದಕ ವಸ್ತು ಸೇವನೆ ನಿಷೇಧ ಸಮಿತಿ, ಸ್ತ್ರೀ ಶಕ್ತಿ ಯೋಜನೆಯ ಸಮನ್ವಯ ಸಮಿತಿ, ಮಕ್ಕಳ ಮಾರಾಟ,ಸಾಗಾಣಿಕೆ ವಿರುದ್ಧ ಪ್ರಚಾರ ಆಂದೋಲನಾ ಸಮಿತಿ, ಬಾಲ್ಯ ವಿವಾಹ ನಿಷೇಧ ಸಮಿತಿ,ಭಾಗ್ಯಲಕ್ಷ್ಮಿ ಯೋಜನೆಯ ಕಾರ್ಯಪಡೆ ಸಮಿತಿ,ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ರಕ್ಷಣಾ ಸಮಿತಿ,ತಾಲೂಕು ಮಟ್ಟದ ಮಕ್ಕಳ ರಕ್ಷಣಾ ಸಮಿತಿ, ವಿಕಲಚೇತನರ ತಾಲೂಕು ಮಟ್ಟದ ಸಮಿತಿ, ಮಹಿಳಾ ದೌರ್ಜನ್ಯ ತಡೆ ಸಮಿತಿ,ಮಾತೃವಂದನಾ ಸಮಿತಿ,ಬೇಟಿ ಬಜಾವೋ ಬೇಟಿ ಪಡಾವೋ ಸಮಿತಿ,ಗೆಳತಿ ವಿಶೇಷ ಚಿಕಿತ್ಸಾ ಘಟಕ ಸಮಿತಿಗಳ ಸಭೆಯಲ್ಲಿ ಈ ಆಗ್ರಹ ವ್ಯಕ್ತವಾಯಿತು.
ಜಿಲ್ಲಾ ಮಕ್ಕಳ ರಕ್ಷಣಾ ಘಟಕಾಧಿಕಾರಿ ವಜೀರ್ ಮಾತನಾಡಿ, ಕೆಲವೊಂದು ಖಾಸಗಿ ಶಾಲೆಗಳಲ್ಲಿ ಮಕ್ಕಳ ಮೇಲೆ ದೈಹಿಕ ದೌರ್ಜನ್ಯ ನಡೆಯುತ್ತಲೇ ಇದೆ. ಆದರೆ ಯಾವುದೂ ಬೆಳಕಿಗೆ ಬರುತ್ತಿಲ್ಲ,ಖಾಸಗಿ ಶಾಲೆಗಳಲ್ಲಿ ಬೈಲ್ಡ್ ಬೋರ್ಡ್ ಅಳವಡಿಸುತ್ತಿಲ್ಲ. ಪೈಂಟಿನಲ್ಲಿ ಬರೆದ ಬೋರ್ಡುಗಳು ಎಲ್ಲಿಯೂ ಇಲ್ಲ, ಸಲಹಾ ಪೆಟ್ಟಿಗೆಗಳನ್ನೂ ಅಳವಡಿಸುತ್ತಿಲ್ಲ . ಕೆಲವೊಂದು ಶಾಲೆಯಲ್ಲಿ ಮಕ್ಕಳ ಮಿತಿಗೆ ಅನುಗುಣವಾಗಿ ಸರಿಯಾದ ವ್ಯವಸ್ಥೆಗಳಿಲ್ಲ ಎಂದು ಅವರು ತಿಳಿಸಿದರು. ಬಾಲ ನ್ಯಾಯ ಕಾಯಿದೆ 5 ಪಾಲನಾ ಸಮಿತಿಗಳ ಪರಿಶೀಲನೆ ನಡೆಸಲಾಗಿದೆ ಎಂದು ತಿಳಿಸಿದರು.
ವರದಕ್ಷಿಣೆ ಕಿರುಕುಳದ ಮೌಖಿಕ ದೂರುಗಳಿವೆಯೇ ಹೊರತು ಯಾರೂ ಲಿಖಿತ ದೂರು ನೀಡಿಲ್ಲ.ಮಕ್ಕಳ ಮಾರಾಟದ ದೂರುಗಳು ಯಾವುದೂ ಇಲ್ಲ ಎಂಬ ವಿಚಾರವನ್ನು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ತಿಳಿಸಿದರು. ಮಹಿಳಾ ಸಾಂತ್ವಾನ ಕೇಂದ್ರಕ್ಕೆ ಕೌಟುಂಬಿಕ ದೌರ್ಜನ್ಯಕ್ಕೆ ಸಂಬಂಧಿಸಿದ 25 ಪ್ರಕರಣಗಳು ಬಂದಿದ್ದು, ಆ ಪೈಕಿ 20 ಪ್ರಕರಣಗಳನ್ನು ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯಡಿ ಇತ್ಯಾರ್ಥ ಪಡಿಸಲಾಗಿದ್ದು, 5 ಪ್ರಕರಣಗಳು ಇತ್ಯರ್ಥಕ್ಕೆ ಬಾಕಿ ಇದೆ ಎಂದು ದೀಪಾ ಅವರು ಮಾಹಿತಿ ನೀಡಿದರು.
ಪ್ರಧಾನ ಮಂತ್ರಿ ಮಾತೃವಂದನಾ ಯೋಜನಾ ಸಪ್ತಾಹದ ಅಂಗವಾಗಿ 3ಮಂದಿ ಜಿಲ್ಲಾ ಮಟ್ಟದ ಕಾರ್ಯಕ್ರಮ ಸಾಧಕರಿಗೆ ಪ್ರಶಸ್ತಿ ವಿತರಿಸಲಾಯಿತು. ಪುತ್ತೂರು ಕಸ್ಬಾದ ಅಂಗನವಾಡಿ ಮೇಲ್ವಿಚಾರಕಿ ಜಲಜಾಕ್ಷಿ, ನರಿಮೊಗ್ರು ಗ್ರಾಮದ ಮುಕ್ವೆ ಅಂಗನವಾಡಿ ಕಾರ್ಯಕರ್ತೆ ಸಬಿತಾ ಮತ್ತು ಶಿಶು ಅಭಿವೃದ್ಧಿ ಇಲಾಖೆಯ ಕಂಪ್ಯೂಟರ್ ಆಪರೇಟರ್ ಅಶ್ವಿನಿ ಅವರಿಗೆ ತಹಶೀಲ್ದಾರ್ ಅನಂತಶಂಕರ್ ಅವರು ಪ್ರಶಸ್ತಿ ವಿತರಿಸಿದರು.
ತಾ.ಪಂ.ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ನಗರಸಭೆಯ ಪೌರಾಯುಕ್ತೆ ರೂಪಾ ಶೆಟ್ಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ತಾಲೂಕು ಯೋಜನಾಧಿಕಾರಿ ಸರಸ್ವತಿ ಉಪಸ್ಥಿತರಿದ್ದರು.
ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆಯ ಹರಿಯ ಮೇಲ್ವಿಚಾರಕಿ ಭಾರತಿ ಜೆ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿ ವಂದಿಸಿದರು.