ರಾಜ್ಯದಲ್ಲಿ ಲಾಕ್ ಡೌನ್ 2 ವಾರ ವಿಸ್ತರಣೆ – ಮುಖ್ಯಮಂತ್ರಿ ಯಡಿಯೂರಪ್ಪ…
ಬೆಂಗಳೂರು: ಕೊರೋನಾ ವೈರಸ್ ಹರಡುವುದನ್ನು ನಿಯಂತ್ರಿಸುವುದಕ್ಕಾಗಿ ರಾಜ್ಯದಲ್ಲಿ ಏಪ್ರಿಲ್ 30ರ ವರೆಗೆ ಲಾಕ್ ವಿಸ್ತರಿಸುವುದು ಅನಿವಾರ್ಯವಾಗಿದೆ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಇಂದು ಹೇಳಿದ್ದಾರೆ.
ಇಂದು ಪ್ರಧಾನಿ ನರೇಂದ್ರ ಮೋದಿ ಅವರು ನಡೆಸಿದ ವಿಡಿಯೋ ಕಾನ್ಫೆರೆನ್ಸ್ ನಲ್ಲಿ ಭಾಗವಹಿಸಿದ ಬಳಿಕ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸಿಎಂ, ಕೊರೋನಾ ವೈರಸ್ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಇನ್ನು ಎರಡು ವಾರಗಳ ಕಾಲ ಲಾಕ್ ಡೌನ್ ಅನಿವಾರ್ಯವಾಗಿದೆ. ಯಾವುದೇ ಕಾರಣಕ್ಕೂ ಲಾಕ್ ಡೌನ್ ಸಡಿಲ ಆಗಬಾರದು ಎಂದು ಪ್ರಧಾನಿಗಳು ಸೂಚಿಸಿರುವುದಾಗಿ ತಿಳಿಸಿದರು.
ಮುಂದಿನ 15 ದಿನ ಲಾಕ್‌ಡೌನ್ ವಿಭಿನ್ನವಾಗಿರಲಿದೆ. ಆದರೆ ಅದರ ಪಾಲನೆಯ ವಿಚಾರವಾಗಿ ಯಾವುದೇ ರಾಜಿಯಿಲ್ಲ. ಆರ್ಥಿಕ ಚಟುವಟಿಕೆಗೆ ಅನುಕೂಲವಾಗುವಂತೆ ಕೆಲವು ವಿನಾಯಿತಿ ನೀಡುವ ಬಗ್ಗೆ ಪ್ರಧಾನಿ ತಿಳಿಸಿದ್ದಾರೆ. ಸರ್ಕಾರಿ ಕಚೇರಿಗಳನ್ನು ಸದ್ಯ ಮುಚ್ಚಲಾಗಿದ್ದು. ಭಾಗಶಃ ಆರಂಭಿಸುವ ಬಗ್ಗೆ ಕೇಂದ್ರ ಸರ್ಕಾರ ಮಾರ್ಗಸೂಚಿಯಲ್ಲಿ ತಿಳಿಸಲಿದೆ. ಕೃಷಿ, ಕೈಗಾರಿಕೆ, ಕಾರ್ಮಿಕರಿಗೆ ಉದ್ಯೋಗಕ್ಕೆ ಅನುಕೂಲ ಕಲ್ಪಿಸುವ ಜತೆಗೆ ಸರ್ಕಾರಿ ಕಚೇರಿಗಳನ್ನು ಭಾಗಶಃ ಆರಂಭಿಸಲು ಅನುಮತಿ ನೀಡಲಾಗುವುದು ಎಂದರು.
ಏಪ್ರಿಲ್ 10ರಿಂದ ಮೀನುಗಾರಿಕೆ, ಮೀನು ಸಂಸ್ಕರಣಕ್ಕೆ ಲಾಕ್ ಡೌನ್ ನಿಂದ ವಿನಾಯತಿ ನೀಡಲಾಗಿದೆ ಎಂದು ಪ್ರಧಾನಿಗಳು ತಿಳಿಸಿದ್ದು, ಇದರಿಂದ ಕರಾವಳಿಯಲ್ಲಿ ಮೀನುಗಾರಿಕೆಗೆ ಸಹಕಾರಿಯಾಗಲಿದೆ ಎಂದರು.