ಅವಕಾಶ ದುರ್ಬಳಕೆ ಮಾಡಿದ್ರೆ ಕಾಸರಗೋಡಿನ ರೋಗಿಗಳ ವಿರುದ್ಧ ಕ್ರಮ – ಕೋಟ ಶ್ರೀನಿವಾಸ ಪೂಜಾರಿ…
ಮಂಗಳೂರು: ಮಂಗಳೂರಿಗೆ ತುರ್ತು ಚಿಕಿತ್ಸೆಗೆ ಕಾಸರಗೋಡಿನಿಂದ ಆಗಮಿಸುವ ರೋಗಿಗಳಿಗೆ ಸುಪ್ರಿಂ ಕೋರ್ಟ್‌ನ ಆದೇಶದಂತೆ ಜಿಲ್ಲಾಡಳಿತ ಷರತ್ತಿನ ಮೇಲೆ ಮಂಗಳೂರಿನಲ್ಲಿ ಚಿಕಿತ್ಸೆಗೆ ಅವಕಾಶ ನೀಡಿದೆ. ಈ ಅವಕಾಶವನ್ನು ದುರುಪಯೋಗ ಪಡಿಸುವ ಪ್ರಯತ್ನ ನಡೆದರೆ ಕಠಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
ಕಾಸರಗೋಡು-ಮಂಗಳೂರು ನಡುವಿನ ಅಂತಾರಾಜ್ಯ ಗಡಿ ಪ್ರದೇಶವಾದ ತಲಪಾಡಿಯಲ್ಲಿ ಪೊಲೀಸ್ ಬಂದೋಬಸ್ತ್ ಮತ್ತು ಕಾಸರಗೋಡಿನಿಂದ ಆಗಮಿಸುವ ರೋಗಿಗಳನ್ನು ತಪಾಸಣೆ ಮಾಡುವ ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಬಳಿಕ ಮಾತನಾಡಿದ ಅವರು, ತಲಪಾಡಿಯಲ್ಲಿ ಕೇರಳದಿಂದ ಆಗಮಿಸುವ ರೋಗಿಗಳನ್ನು ಆರೋಗ್ಯ ಇಲಾಖೆಯ ತಂಡ ಪರೀಕ್ಷೆ ಮಾಡಿ ಆಸ್ಪತ್ರೆಗೆ ಕಳುಹಿಸುತ್ತಿದೆ. ಕೆಲವು ರೋಗಿಗಳ ಕಡೆಯವರು ಆಸ್ಪತ್ರೆಯಲ್ಲಿ ಅನುಚಿತವಾಗಿ ವರ್ತಿಸಿರುವ ಕುರಿತು ದೂರುಗಳು ಬಂದಿವೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸಿ, ಕಠಿನ ಕ್ರಮ ಕೈಗೊಳ್ಳಲಿದ್ದಾರೆ ಎಂದರು.
ಇದೇ ವೇಳೆ ಆರೋಗ್ಯ, ಪೊಲೀಸ್ ಇಲಾಖೆ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ ಅವರು, ಜಿಲ್ಲೆಯಲ್ಲಿ ಗಡಿಪ್ರದೇಶಗಳನ್ನು ಕಟ್ಟು ನಿಟ್ಟಾಗಿ ನಿರ್ವಹಿಸಿದ್ದರಿಂದ ಕೋವಿಡ್ 19 ಸೋಂಕನ್ನು ತಡೆಯಲು ಸಾಧ್ಯವಾಗಿದೆ ಎಂದರು.