ವಿದ್ಯುತ್ ಬಿಲ್ ಸರಿಪಡಿಸಲು ಎಂ.ವೆಂಕಪ್ಪ ಗೌಡ ಆಗ್ರಹ…..
ಸುಳ್ಯ: ವಿದ್ಯುತ್ ಸರಬರಾಜು ಮಂಡಳಿಗಳು ಈಗ ನೀಡಿರುವ ವಿದ್ಯುತ್ ಬಿಲ್ ನ್ನು ಕೂಡಲೇ ಹಿಂಪಡೆದು ಸರಿಯಾದ ಬಿಲ್ ನ್ನು ಗ್ರಾಹಕರಿಗೆ ನೀಡುವಂತೆ ನ.ಪಂ. ಸದಸ್ಯ , ಕೆಪಿಸಿಸಿ ಮಾಜಿ ಕಾರ್ಯದರ್ಶಿ ಎಂ.ವೆಂಕಪ್ಪ ಗೌಡ ಒತ್ತಾಯಿಸಿದ್ದಾರೆ.
ಕೊರೋನಾ ಲಾಕ್ ಡೌನ್ ನಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಜನಸಾಮಾನ್ಯರಿಗೆ ಇದೀಗ ವಿದ್ಯುತ್ ಸರಬರಾಜು ಮಂಡಳಿಗಳು ಮತ್ತೊಂದು ಶಾಕ್ ನೀಡಿವೆ. ಲಾಕ್ ಡೌನ್ ನಿಂದಾಗಿ ಮಂಡಳಿಗಳು ಮಾರ್ಚ್ ತಿಂಗಳ ವಿದ್ಯುತ್ ಬಿಲ್ ಕೊಟ್ಟಿರಲಿಲ್ಲ. ಮೇ ತಿಂಗಳಲ್ಲಿ ಎರಡು ತಿಂಗಳುಗಳ ಅಂದರೆ, ಮಾರ್ಚ್ ಮತ್ತು ಏಪ್ರಿಲ್ ತಿಂಗಳುಗಳ ಬಿಲ್ ನ್ನು ಒಟ್ಟಿಗೆ ಕೊಡಲಾಗಿದೆ. ಎರಡು ತಿಂಗಳ ಮೀಟರ್ ರೀಡಿಂಗ್ ಇದೀಗ ಒಟ್ಟಿಗೆ ಮಾಡಿ, ಬರುವ ಯೂನಿಟ್ ಮೇಲೆ ಸ್ಲ್ಯಾಬ್, ಶುಲ್ಕ ನಿಗದಿ ಮಾಡಲಾಗಿದೆ.
ಎರಡು ತಿಂಗಳ ಮೀಟರ್ ರೀಡಿಂಗ್ ಒಟ್ಟಿಗೆ ಮಾಡಿದುದರಿಂದ ಉಪಯೋಗಿಸಿದ ವಿದ್ಯುತ್ ಯೂನಿಟ್ ಗಳ ಸಂಖ್ಯೆ ಹೆಚ್ಚಾಗಿದೆ. ಮಾತ್ರವಲ್ಲದೆ ಅವೈಜ್ಞಾನಿಕವಾಗಿ ಯೂನಿಟ್ ಮೇಲೆ ಸ್ಲ್ಯಾಬ್, ಶುಲ್ಕ ನಿಗದಿ ಮಾಡಿ – ಬಿಲ್ ನೀಡಿ ಗ್ರಾಹಕರ ಜೇಬಿಗೆ ಕತ್ತರಿ ಹಾಕಲಾಗಿದೆ.
ಮಂಡಳಿಗಳು ಕೂಡಲೇ ತಮ್ಮ ಗ್ರಾಹಕರಿಗೆ ಸರಿಪಡಿಸಿದ ಬಿಲ್ ನೀಡಬೇಕಾಗಿದೆ. ಇಲ್ಲದೆ ಹೋದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಅನಿವಾರ್ಯವಾಗಬಹುದು ಎಂದೂ ಎಂ.ವೆಂಕಪ್ಪ ಗೌಡ ತಿಳಿಸಿದ್ದಾರೆ.