ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು – ಸ್ವಯಂಚಾಲಿತ ಸ್ಯಾನಿಟೈಸರ್ ಉಪಕರಣ ಅಭಿವೃದ್ಧಿ…
ಪುತ್ತೂರು: ಪುತ್ತೂರಿನ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಇಲೆಕ್ಟ್ರಾನಿಕ್ಸ್ ಎಂಡ್ ಕಮ್ಯುನಿಕೇಶನ್ ವಿಭಾಗದ ತಾಂತ್ರಿಕ ಸಿಬ್ಬಂದಿಗಳ ತಂಡವು ಕಡಿಮೆ ವೆಚ್ಚದ ಸ್ವಯಂಚಾಲಿತ ಸ್ಯಾನಿಟೈಸರ್ ಉಪಕರಣ ‘ವಿವೇಕ ಹಸ್ತ ಪ್ರಾಕ್ಷಾಲಕ’ ವನ್ನು ಅಭಿವೃದ್ಧಿಪಡಿಸಿದೆ.
ಕೊರೋನಾ ವೈರಸ್ ಹಾವಳಿಯಿಂದ ಪ್ರತಿಯೊಬ್ಬರೂ ಆಗಾಗ ಸ್ಯಾನಿಟೈಸರ್ ಬಳಸಿ ಕೈ ಉಜ್ಜಿಕೊಳ್ಳುವುದು ಅನಿವಾರ್ಯವಾಗಿದೆ. ಕೈಯಲ್ಲಿ ಮುಟ್ಟಿ ಅಥವಾ ಕಾಲಲ್ಲಿ ಒತ್ತಿ ಸ್ಯಾನಿಟೈಸರ್ ಹಾಕಿಕೊಳ್ಳುವ ವಿಧಾನಗಳು ಈಗಾಗಲೇ ಚಾಲ್ತಿಯಲ್ಲಿದ್ದು ಇದರಿಂದ ವೈರಸ್ ಹರಡುವ ಅಪಾಯವಿರುತ್ತದೆ. ಹೀಗಾಗಿ ಯಂತ್ರವನ್ನು ಸ್ಪರ್ಷಿಸದೇ ಕೈ ಮುಂದೆ ಚಾಚಿದಾಗ ಸ್ವಯಂಚಾಲಿತವಾಗಿ ಸ್ಯಾನಿಟೈಸರ್ ಕೈಗೆ ಬೀಳುವಂತ ವ್ಯವಸ್ಥೆಯನ್ನು ಇದರಲ್ಲಿ ಮಾಡಲಾಗಿದೆ.
ಕಾಲೇಜಿನ ಸಮಾಜಮುಖೀ ಧ್ಯೇಯಗಳಿಗೆ ಅನುಗುಣವಾಗಿ ಕಾಲೇಜು ಆಡಳಿತ ಮಂಡಳಿಯ ಪ್ರೋತ್ಸಾಹದೊಂದಿಗೆ ಇದನ್ನು ಅಭಿವೃದ್ಧಿಪಡಿಸಲಾಗಿದೆ. ವಿಭಾಗಮುಖ್ಯಸ್ಥ ಪ್ರೊ.ಶ್ರೀಕಾಂತ್ ರಾವ್ ಅವರ ಸಹಕಾರದೊಂದಿಗೆ ಹಿರಿಯ ಪ್ರಯೋಗಾಲಯ ಬೋಧಕ ದಿನೇಶ್ ಎ ಎಸ್ ಅವರ ಮುಂದಾಳುತ್ವದಲ್ಲಿ ತಾಂತ್ರಿಕ ಸಿಬ್ಬಂದಿಗಳಾದ ಸತೀಶ್.ಕೆ, ಮನೋಜ್.ಕೆ.ಪಿ, ರಾಜೇಶ್.ಎ.ಬಿ, ಅಕ್ಷತಾ, ಹರ್ಷಿತಾ ಮತ್ತು ಹರಿಪ್ರಸಾದ್.ಡಿ ಇದನ್ನು ನಿರ್ಮಿಸಿದ್ದಾರೆ ಎಂದು ಪ್ರಾಂಶುಪಾಲ ಡಾ.ಎಂ.ಎಸ್.ಗೋವಿಂದೇಗೌಡ ತಿಳಿಸಿದ್ದಾರೆ.