ಹೊಸ ತಲೆಮಾರು ಓದಿನಿಂದ ದೂರ ಸರಿಯುವುದು ಪತ್ರಿಕಾ ಕ್ಷೇತ್ರಕ್ಕೆ ಸವಾಲು- ಡಾ.ಕೇನಾಜೆ…
ಸುಳ್ಯ: ಆಧುನಿಕ ಯುಗದಲ್ಲಿ ಹೊಸ ತಲೆಮಾರು ಓದಿನಿಂದ ದೂರ ಸರಿಯುತಿರುವುದು ಪತ್ರಿಕಾ ಕ್ಷೇತ್ರದ ದೊಡ್ಡ ಸವಾಲು ಎಂದು ಪುತ್ತೂರು ಡಾ.ಶಿವರಾಮ ಕಾರಂತ ಬಾಲವನದ ಆಡಳಿತಾಧಿಕಾರಿ, ಲೇಖಕ ಡಾ.ಸುಂದರ ಕೇನಾಜೆ ಹೇಳಿದ್ದಾರೆ.
ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಗುರುವಾರ ನಡೆದ ಪತ್ರಿಕಾ ದಿನಾಚರಣೆಯಲ್ಲಿ ಅವರು ಉಪನ್ಯಾಸ ನೀಡಿದರು. ಜಾಗೃತಿ, ಅರಿವು ಮೂಡಿಸುವ ಬದಲು ಹಲವು ಸಂದರ್ಭದಲ್ಲಿ ಮಾಧ್ಯಮಗಳು ಭಯಗೊಳಿಸುತ್ತವೆ. ಭಯಗೊಳಿಸುವ ವಾತಾವರಣದಿಂದ ಜನರು ಮಾಧ್ಯಮಗಳಿಂದ ದೂರ ಹೋಗುವ ಸಾಧ್ಯತೆ ಹೆಚ್ಚು. ಆದುದರಿಂದ ಅರಿವು, ತಿಳುವಳಿಕೆ ಮತ್ತು ಜಾಗೃತಿ ಮೂಡಿಸುವ ಮೂಲಕ ಮಾಧ್ಯಮಗಳು ಜನರನ್ನು ಹತ್ತಿರವಾಗಿಸಬೇಕು.
ಶಿಕ್ಷಣ, ಆರೋಗ್ಯ, ಕಲೆ, ಸಾಹಿತ್ಯವನ್ನು ನಾವು ಎಂದೂ ಉದ್ಯಮ ಎಂದು ಪರಿಗಣಿಸಿಲ್ಲ. ಆದರೆ ಅದೇ ಸಾಲಿಗೆ ಸೇರುವ ಪತ್ರಿಕಾ ಕ್ಷೇತ್ರ ಉದ್ಯಮವಾಗಿದೆ. ಇದು ಈ ಕ್ಷೇತ್ರದಲ್ಲಿ ಹಲವು ಬದಲಾವಣೆಗಳಿಗೆ ಕಾರಣವಾಗುತ್ತಿದೆ. ಇಂದಿನ ಸವಾಲಿನ ಸಂದರ್ಭದಲ್ಲಿ
ಪತ್ರಿಕೆಗಳು ಉದ್ಯಮ ಆಗದೇ ಇದ್ದರೆ ಜನರನ್ನು ಇನ್ನಷ್ಟು ಹತ್ತಿರ ಮಾಡಬಹುದು. ಅದು ಸಾಧ್ಯವಾಗದೇ ಇದ್ದರೆ ಮುದ್ರಣ ಮಾಧ್ಯಮ ದೊಡ್ಡ ಸವಾಲನ್ನು ಎದುರಿಸಬೇಕಾದೀತು ಎಂದು ಅವರು ಹೇಳಿದರು.
ಪತ್ರಿಕಾ ಮೌಲ್ಯವನ್ನು ಕಾಪಾಡುವುದು ಮುಖ್ಯ – ಎನ್.ಭವಾನಿಶಂಕರ್…
ಕಾರ್ಯಕ್ರಮವನ್ನು ಉದ್ಘಾಟಿಸಿದ ಸುಳ್ಯ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಎನ್.ಭವಾನಿಶಂಕರ ಟೀಕೆ ಮಾಡುವುದು ಮಾತ್ರವಲ್ಲ , ಅಭಿವೃದ್ಧಿಗೂ ಪತ್ರಕರ್ತರು ಹೆಚ್ಚು ಗಮನ ಕೊಡುವುದು ಅಶಾದಾಯಕ ಬೆಳವಣಿಗೆ ಎಂದು ಹೇಳಿದರು.ಪತ್ರಿಕಾ ಮಾಧ್ಯಮಗಳು ಮೌಲ್ಯವನ್ನು ಕಾಪಾಡಿಕೊಳ್ಳಬೇಕು ಮತ್ತು ರಚನಾತ್ಮಕವಾಗಿರಬೇಕು. ನಿಷ್ಪಕ್ಷಪಾತ ಮತ್ತು ನಿರ್ಭೀತ ಮಾಧ್ಯಮಗಳು ಜನರ ವಿಶ್ವಾಸ ಗಳಿಸಲು ಸಾಧ್ಯ ಎಂದು ಅವರು ಹೇಳಿದರು.
ಪತ್ರಿಕೆಗಳೆಂದರೆ ವಿಶ್ವಾಸಾರ್ಹತೆ- ಎಂ.ಆರ್.ಹರೀಶ್…
ಸನ್ಮಾನ ನೆರವೇರಿಸಿ ಮಾತನಾಡಿದ ಸುಳ್ಯ ಪೊಲೀಸ್ ಉಪನಿರೀಕ್ಷಕ ಎಂ.ಆರ್.ಹರೀಶ್ ‘ಪತ್ರಿಕಾ ಸುದ್ದಿಗಳಿಗೆ ಇರುವ ವಿಶ್ವಾಸಾರ್ಹತೆ ಬೇರೆಲ್ಲೂ ಸಿಗಲು ಸಾಧ್ಯವಿಲ್ಲ. ಅದು ಪ್ರತಿ ದಿನ ಮಾಹಿತಿಯ ದೊಡ್ಡ ಖಣಜವನ್ನೇ ಕಟ್ಟಿ ಕೊಡುತ್ತದೆ ಎಂದು ಹೇಳಿದರು. ಬ್ಯಾಂಕಿಂಗ್, ಸಾಹಿತ್ಯ ಮತ್ತು ಪತ್ರಿಕೋದ್ಯಮ ಕ್ಷೇತ್ರಕ್ಕೆ ಕರಾವಳಿ ಭಾಗದ ಕೊಡುಗೆ ಬಹಳ ದೊಡ್ಡದು. ಕೊರೋನಾ ಕಾಲದಲ್ಲಿ ಪತ್ರಕರ್ತರು ದೊಡ್ಡ ಸೇವೆಯನ್ನೇ ನೀಡಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟರು.
ವರದಿ ಕೃಪೆ: ಗಂಗಾಧರ ಕಲ್ಲಪಳ್ಳಿ