ವಿವೇಕಾನಂದ ಎಂಜಿನಿಯರಿಂಗ್ ಕಾಲೇಜು – ಓಣಂ ಆಚರಣೆ…

ಪುತ್ತೂರು: ಕೇರಳದ ಅತ್ಯಂತ ಹಳೆಯ ಹಾಗೂ ಸಾಂಪ್ರದಾಯಿಕ ಹಬ್ಬವಾದ ಓಣಂ ಈಗ ಶ್ರದ್ದೆ ಭಕ್ತಿಯಿಂದ ವಿಶ್ವದೆಲ್ಲೆಡೆ ಆಚರಿಸಲ್ಪಡುತ್ತಿದ್ದು ಇದೊಂದು ಸರ್ವಜನರ ಪ್ರೀತಿಯ ಹಬ್ಬ ಎಂದು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಪ್ರಾಂಶುಪಾಲ ಡಾ.ಮಹೇಶ್ ಪ್ರಸನ್ನ.ಕೆ ಹೇಳಿದರು.
ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯಯಲ್ಲಿ ನಡೆದ ತಿತ್ತಿತ್ತೋಮ್-2023 ಓಣಂ ಆಚರಣೆಯಲ್ಲಿ ಮಾತನಾಡಿದರು.
ಮಹಾಬಲಿಯು ಪ್ರತಿವರ್ಷವೂ ಓಣಂ ಸಂದರ್ಭದಲ್ಲಿ ಭೂಮಿಗೆ ಮರಳಿ ಬಂದು ಜನರ ಕಷ್ಟಗಳನ್ನು ನಿವಾರಿಸುತ್ತಾನೆ ಎನ್ನುವ ನಂಬಿಕೆ ಇದೆ. ಇದರಿಂದಾಗಿ ಈ ಹಬ್ಬವು ಅತ್ಯಂತ ಮಹತ್ವದ್ದಾಗಿದೆ. ವಿಷ್ಣುವಿನ ವಾಮನ ಅವತಾರದ ಐತಿಹ್ಯವನ್ನೂ ಇದು ತಿಳಿಸುತ್ತದೆ ಎಂದರು. ಓಣಂ ಎಲ್ಲರಿಗೂ ಶುಭವನ್ನು ತರಲಿ ಎಂದು ಹಾರೈಸಿದರು.
ವಿದ್ಯಾರ್ಥಿಗಳು ನಿರ್ಮಿಸಿದ ಬೃಹತ್ ಪೂಕಳಂನ ಮುಂಭಾಗದಲ್ಲಿ ದೀಪ ಬೆಳಗಿಸಿದ ಕಾಲೇಜಿನ ತರಬೇತಿ ಮತ್ತು ನೇಮಕಾತಿ ವಿಭಾಗದ ಮುಖ್ಯಸ್ಥೆ ಪ್ರೊ.ವಂದನಾ ಶಂಕರ್ ಶುಭ ಹಾರೈಸಿದರು.
ಕಾಲೇಜು ಆಡಳಿತ ಮಂಡಳಿಯ ಸಂಚಾಲಕ ಸುಬ್ರಮಣ್ಯ ಭಟ್ ಟಿ.ಎಸ್ ಅವರು ಅನೇಕತೆಯಲ್ಲಿ ಏಕತೆಯನ್ನು ಸಾರುವ ಇಂತಹ ಹಬ್ಬಗಳು ಎಲ್ಲೆಡೆಯೂ ಆಚರಿಸುವಂತಾಗಬೇಕು. ಪ್ರಕೃತಿಯ ಆರಾಧನೆಯನ್ನು ನಡೆಸುವ ಹಬ್ಬಗಳು ಹೆಚ್ಚು ಹೆಚ್ಚು ಆಚರಣೆಯಾಗಬೇಕು ತನ್ಮೂಲಕ ಪರಿಸರ ಸಂರಕ್ಷಣೆಯ ಬಗ್ಗೆ ಎಲ್ಲರಲ್ಲಿಯೂ ಜಾಗೃತಿ ಮೂಡಬೇಕು ಎಂದು ಶುಭ ಹಾರೈಸಿದರು.
ಓಣಂ ಹಬ್ಬದ ಹಿನ್ನೆಲೆಯನ್ನು ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಪ್ರಸ್ತುತಪಡಿಸಿದರು. ಕೇರಳದ ಸಾಂಪ್ರದಾಯಿಕ ನೃತ್ಯ ತಿರುವತ್ತಿರ ಕಳಿಯನ್ನು ವಿದ್ಯಾರ್ಥಿನಿಯರು ಅಭಿನಯಿಸಿದರ ನಂತದ ಚೆಂಡೆ ಮೇಳ ಕಾರ್ಯಕ್ರಮ ನಡೆಯಿತು. ನೆರೆದಿದ್ದ ಎಲ್ಲಾ ವಿಭಾಗ ಮುಖ್ಯಸ್ಥರಿಗೆ, ಉಪನ್ಯಾಸಕರಿಗೆ, ಸಿಬ್ಬಂದಿಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ ಸಿಹಿ ತಿಂಡಿ ವಿತರಿಸಿ ಸಂಭ್ರಮಿಸಲಾಯಿತು.
ಕಂಪ್ಯೂಟರ್ ಸೈನ್ಸ್ ವಿಭಾಗದ ವಿದ್ಯಾರ್ಥಿನಿ ಸಾಂದ್ರಾ ಕಾರ್ಯಕ್ರಮ ನಿರ್ವಹಿಸಿದರು.
