ಕೇರಳದ ಮುನ್ನಾರ್ ನಲ್ಲಿ ಭಾರೀ ಭೂಕುಸಿತ…..
ಮುನ್ನಾರ್: ಕೇರಳದ ಇಡುಕ್ಕಿ ಜಿಲ್ಲೆಯ ಮುನ್ನಾರ್ ನ ರಾಜಮಲಾದ ಪೆಟ್ಟಿಮುಡಿ ಬೆಟ್ಟ ಇಂದು ನಸುಕಿನ ಜಾವ ಕುಸಿದು ಬಿದ್ದ ಪರಿಣಾಮ ಸಾವಿನ ಸಂಖ್ಯೆ 15ಕ್ಕೆ ಏರಿಕೆಯಾಗಿದೆ.
ಅವಶೇಷಗಳಡಿಯಲ್ಲಿ 80 ಮಂದಿ ಸಿಕ್ಕಿ ಹಾಕಿಕೊಂಡಿದ್ದಾರೆ ಎಂದು ಶಂಕಿಸಲಾಗಿದ್ದು ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಭೂಕುಸಿತಕ್ಕೆ ಕ್ವಾರ್ಟರ್ಸ್ ಮತ್ತು ಚರ್ಚ್ ಧರೆಗುರುಳಿದ್ದು ಹಲವರು ಸಿಕ್ಕಿಹಾಕಿಕೊಂಡಿರಬಹುದು ಎಂದು ಶಂಕಿಸಲಾಗಿದೆ.
ಇದುವರೆಗೆ 15 ಮಂದಿಯ ಶವಗಳನ್ನು ಮಣ್ಣಿನಡಿಯಿಂದ ಹೊರತೆಗೆಯಲಾಗಿದೆ. ಪ್ರತಿಕೂಲ ಹವಾಮಾನದಿಂದಾಗಿ ರಕ್ಷಣಾ ಕಾರ್ಯಕ್ಕೆ ಅಡ್ಡಿಯಾಗಿದೆ. ಏಳು ಮಂದಿಯನ್ನು ಮಣ್ಣಿನಡಿಯಿಂದ ರಕ್ಷಿಸಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸಿಕ್ಕಿಹಾಕಿಕೊಂಡವರಲ್ಲಿ ಬಹುತೇಕರು ಟೀ ಎಸ್ಟೇಟ್ ನಲ್ಲಿ ಕೆಲಸ ಮಾಡುವ ಕಾರ್ಮಿಕರಾಗಿದ್ದಾರೆ.ಭಾರೀ ಮಳೆಗೆ ಪ್ರವಾಹ ಉಂಟಾಗಿ ಪೆರಿಯವರ ಸೇತುವೆ ನೀರಿನಲ್ಲಿ ಕೊಚ್ಚಿ ಹೋಗಿದ್ದರಿಂದ ರಕ್ಷಣಾ ಪಡೆಗಳಿಗೆ ದುರ್ಘಟನೆ ನಡೆದ ಸ್ಥಳಕ್ಕೆ ಬೇಗನೆ ತಲುಪಲು ಸಾಧ್ಯವಾಗಿಲ್ಲ.
ಮೃತರ ಕುಟುಂಬಕ್ಕೆ ಪ್ರಧಾನಿ ಮೋದಿ ಅವರು 2 ಲಕ್ಷ ಮತ್ತು ಗಾಯಗೊಂಡವರಿಗೆ ತಲಾ 50 ಸಾವಿರ ರುಪಾಯಿ ಪರಿಹಾರ ಘೋಷಿಸಿದ್ದಾರೆ.