ಕೊರೊನಾ – ರಾಜ್ಯಸಭಾ ಸದಸ್ಯ ಅಶೋಕ್ ಗಸ್ತಿ ನಿಧನ…
ಬೆಂಗಳೂರು: ಇತ್ತೀಚೆಗಷ್ಟೇ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿದ್ದ ಅಶೋಕ್ ಗಸ್ತಿ ಅವರು ಇಂದು ಮಧ್ಯಾಹ್ನ ನಿಧನರಾದರು.ಅವರು ಕೋವಿಡ್-19 ಸೋಂಕಿನಿಂದ ಬಳಲುತ್ತಿದ್ದರು.
ತೀವ್ರ ಜ್ವರದಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಅಶೋಕ್ ಗಸ್ತಿ ಅವರು ಸವಿತಾ ಸಮಾಜಕ್ಕೆ ಸೇರಿದವರು. ಸುಮಾರು 30 ವರ್ಷಗಳಿಂದ ಬಿಜೆಪಿ ಪಕ್ಷದ ಕಾರ್ಯಕರ್ತನಾಗಿ ದುಡಿಯುತ್ತಿದ್ದ ಗಸ್ತಿಯವರು ಬಳ್ಳಾರಿ ಹಾಗು ರಾಯಚೂರು ಜಿಲ್ಲೆಯಲ್ಲಿ ಪಕ್ಷದ ಸಂಘಟನೆಗಾಗಿ ಕೆಲಸ ಮಾಡಿದ್ದಾರೆ. 2001ರಲ್ಲಿ ರಾಯಚೂರು ನಗರಸಭೆಯ ಸದಸ್ಯರಾಗಿ ಆಯ್ಕೆಯಾದರು. 2012ರಲ್ಲಿ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ.
ಮೂಲತಃ ರಾಯಚೂರು ಜಿಲ್ಲೆಯ ಲಿಂಗಸೂಗೂರಿನವರಾದ ಗಸ್ತಿ ಅವರು ತೋರಿದ್ದ ಪಕ್ಷ ನಿಷ್ಠೆ ಪರಿಗಣಿಸಿ ಅವರನ್ನು ಇತ್ತೀಚಿಗೆ ರಾಜ್ಯಸಭೆಗೆ ಆಯ್ಕೆ ಮಾಡಲಾಗಿತ್ತು. ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಿದರೂ ಅವರಿಗೆ ಕೊರೋನ ಸೋಂಕಿನಿಂದಾಗಿ ಅಧಿವೇಶನಕ್ಕೆ ಹಾಜರಾಗಲಾಗಲಿಲ್ಲ. ಮೃತರಿಗೆ ಪತ್ನಿ ಹಾಗು ಇಬ್ಬರು ಹೆಣ್ಣುಮಕ್ಕಳಿದ್ದಾರೆ.