ವಾಕ್-ಶ್ರವಣ ದಿವ್ಯಾಂಗತೆ ಸಂಬಂಧಿತ ರಾಷ್ಟ್ರೀಯ ಸಂಸ್ಥೆಗೆ ತಂತ್ರಜ್ಞಾನ ಸಲಹೆಗಾರರಾಗಿ ಡಾ. ಹರಿಕೃಷ್ಣ ರೈ ನೇಮಕ…
ಸುಳ್ಯ: ಭಾರತ ಸರಕಾರದ ಸಾಮಾಜಿಕ ನ್ಯಾಯ ಹಾಗು ಸಬಲೀಕರಣ ಸಚಿವಾಲಯದ ಅಧೀನಕ್ಕೊಳಪಟ್ಟ ಮುಂಬಯಿಯಲ್ಲಿರುವ ಆಲಿ ಯಾವರ್ ಜಂಗ್ ವಾಕ್ -ಶ್ರವಣ ದಿವ್ಯಾಂಗತಾ ರಾಷ್ಟ್ರೀಯ ಸಂಸ್ಥೆಗೆ ತಂತ್ರಜ್ಞಾನ ಸಲಹೆಗಾರರಾಗಿ ಸುಳ್ಯದ ಡಾ.ಹರಿಕೃಷ್ಣ ರೈಯವರು ನೇಮಕಗೊಂಡಿರುತ್ತಾರೆ.
ಈ ರಾಷ್ಟೀಯ ಸಂಸ್ಥೆಯ ಜನರಲ್ ಕೌನ್ಸಿಲ್ ಸದಸ್ಯರಾಗಿರುವ ಇವರು ವಾಕ್-ಶ್ರವಣ ಸಂಬಂಧಿತ ತಂತ್ರಜ್ಞಾನ ಸಲಕರಣೆಗಳ ಅಭಿವೃದ್ಧಿಗೆ ಸಂಸ್ಥೆಗೆ ಮಾರ್ಗದರ್ಶನ ನೀಡಲಿದ್ದಾರೆ. ಪ್ರಸ್ತುತ ಬೆಂಗಳೂರಿನ GE ಹೆಲ್ತ್ ಕೇರ್ ನಲ್ಲಿ ಪ್ರಾಡಕ್ಟ್ ಮ್ಯಾನೇಜರ್ ಆಗಿ ಕೆಲಸ ನಿರ್ವಹಿಸುತ್ತಿರುವ ಡಾ.ಹರಿಕೃಷ್ಣ ರೈಯವರು ಮೆಡಿಕಲ್ ಇಮೇಜಿಂಗ್ ತಂತ್ರಜ್ಞಾನ ಕ್ಷೇತ್ರದಲ್ಲಿ ಎಂಟು ಪೇಟೆಂಟ್ ಪಡೆದು ಇತ್ತೀಚಿಗೆ ಇದೇ ಕ್ಷೇತ್ರದಲ್ಲಿ ಪಿ. ಹೆಚ್ .ಡಿ ಯನ್ನೂ ಪಡೆದಿರುತ್ತಾರೆ. ಸಕ್ಷಮ ಎಂಬ ದಿವ್ಯಾಂಗರ ಸರ್ವತೋಮುಖ ಅಭಿವೃದ್ಧಿಗೆ ಸಮರ್ಪಿತ ರಾಷ್ಟ್ರೀಯ ಸಂಘಟನೆಯ ಕರ್ನಾಟಕ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿಯಾಗಿಯೂ ಸೇವೆಸಲ್ಲಿಸುತ್ತಿದ್ದಾರೆ.
ಡಾ.ಹರಿಕೃಷ್ಣ ರೈಯವರು ಸುಳ್ಯ ಗಾಂಧಿನಗರದ ನಿವೃತ್ತ ಉಪವಲಯಾರಣ್ಯಾಧಿಕಾರಿ ಕೆ. ನಾರಾಯಣ ರೈಯವರ ಪುತ್ರರಾಗಿದ್ದಾರೆ.