ಕುಲಪತಿ ಹುದ್ದೆ ಕೊಡಿಸುವುದಾಗಿ ಹಣದ ವಂಚನೆ – ರಾಮಸೇನೆಯ ಸಂಸ್ಥಾಪಕ ಪ್ರಸಾದ್ ಅತ್ತಾವರ ಬಂಧನ…
ಮಂಗಳೂರು: ಮಂಗಳೂರು ವಿಶ್ವ ವಿದ್ಯಾಲಯದ ಪ್ರಾಧ್ಯಾಪಕರೊಬ್ಬರಿಗೆ ಕುಲಪತಿ ಹುದ್ದೆ ಕೊಡಿಸುವುದಾಗಿ ಹಣ ಪಡೆದು ವಂಚಿಸಿದ ಪ್ರಕರಣದಲ್ಲಿ ರಾಮಸೇನೆಯ ಸಂಸ್ಥಾಪಕ ಪ್ರಸಾದ್ ಅತ್ತಾವರರನ್ನು ಬಂಧಿಸಲಾಗಿದೆ.
ಪ್ರಸಾದ್ ಅತ್ತಾವರ ತನಗೆ ದೇಶದ ಗಣ್ಯ ವ್ಯಕ್ತಿಗಳ ಪರಿಚಯವಿದ್ದು ಬೇಕಾದ ಕೆಲಸ ಮಾಡಿಸಬಲ್ಲೆ ಎಂದು ಹಲವರೊಂದಿಗೆ ತೆಗೆದ ಫೋಟೊ ತೋರಿಸಿ ನಂಬಿಸಿ, ರಾಯಚೂರು ಅಥವಾ ಮಂಗಳೂರು ವಿಶ್ವವಿದ್ಯಾಲಯ ಕುಲಪತಿಯನ್ನಾಗಿ ಮಾಡುವ ಭರವಸೆ ನೀಡಿ 30 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ. ನಂತರ ಪ್ರಾದ್ಯಾಪಕರಿಂದ 15 ಲಕ್ಷ ರೂ ಮತ್ತು ಇತರ ಖರ್ಚಿಗೆಂದು ರೂ. 2.5 ಲಕ್ಷ ಹಣ ಪಡೆದು, ಉಳಿದ ಹಣಕ್ಕೆ 3 ಖಾಲಿ ಚೆಕ್ ಪಡೆದು ವರ್ಷವಾದರೂ ಭರವಸೆ ಈಡೇರಿಸಲಿಲ್ಲವೆನ್ನಲಾಗಿದೆ. ಈ ಕಾರಣ ವಿಶ್ವವಿದ್ಯಾಲಯ ರಸಾಯನಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕರಾಗಿರುವ ವಿವೇಕ್ ಆಚಾರ್ಯ ಕಂಕನಾಡಿ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದೀಗ ಆ ದೂರಿನ ಅನ್ವಯ ಪ್ರಸಾದ್ ಅತ್ತಾವರನನ್ನು ಬಂಧಿಸಲಾಗಿದೆ.
ಪ್ರಸಾದ್ ಅತ್ತಾವರ ಈ ಹಿಂದೆ ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಆತನ ವಿರುದ್ಧ ಮಂಗಳೂರು ಉತ್ತರ ಮತ್ತು ಮಂಗಳೂರು ಪೂರ್ವ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. 2009 ರಲ್ಲಿ ಕುಖ್ಯಾತ ಮಂಗಳೂರು ಪಬ್ ದಾಳಿಯ ಅನೇಕ ದುಷ್ಕರ್ಮಿಗಳಲ್ಲಿ ಪ್ರಸಾದ್ ಅತ್ತಾವರ ಕೂಡ ಇದ್ದರು, ಆದರೆ ವರ್ಷಗಳ ನಂತರ ಖುಲಾಸೆಗೊಂಡರು.