ತುಂಬೆ ಡ್ಯಾಮ್ – ಕ್ರಮ ಕೈಗೊಂಡು ವರದಿ ನೀಡುವಂತೆ ಉಸ್ತುವಾರಿ ಸಚಿವರಿಂದ ಜಿಲ್ಲಾಧಿಕಾರಿಗಳಿಗೆ ಸೂಚನೆ….
ಬಂಟ್ವಾಳ: ವರತೆ ಪ್ರದೇಶ ಸೇರಿಸಿ ರೈತರಿಗೆ ನ್ಯಾಯೋಚಿತ ಸೂಕ್ತ ಪರಿಹಾರ ನೀಡಬೇಕು, ಮುಳುಗಡೆಯಾದ ಜಮೀನಿಗೆ ಈಗಾಗಲೇ ನ್ಯಾಯೋಚಿತ ಸೂಕ್ತ ಪರಿಹಾರ ಹಾಗೂ ನೆಲ ಬಾಡಿಗೆ ದೊರೆಯದ ರೈತರಿಗೆ ಪರಿಹಾರವನ್ನು ಒದಗಿಸುವಂತೆ ಹಾಗೂ ಸರ್ವೆಯ ಪೂರ್ಣ ಮಾಹಿತಿಯನ್ನು ರೈತರಿಗೆ ಒದಗಿಸಬೇಕು ಎಂಬುದಾಗಿ ಲಿಖಿತವಾಗಿ ಸಲ್ಲಿಸಿದ ಮನವಿಗೆ ಸ್ಪಂದಿಸಿದ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಜಿಲ್ಲಾಧಿಕಾರಿಗಳಿಗೆ ಲಿಖಿತ ಪತ್ರ ಬರೆದು ಈ ಬಗ್ಗೆ ಕ್ರಮ ಕೈಗೊಂಡು ವರದಿ ನೀಡುವಂತೆ ಸೂಚಿಸಿರುತ್ತಾರೆ.
ಈ ಮನವಿಗೆ ಸ್ಪಂದಿಸಿದ ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಉಳಿಪಾಡಿಗುತ್ತು ಅವರು ಕಂದಾಯ ಸಚಿವರಾದ ಆರ್ ಅಶೋಕ್ ಇವರಿಗೆ ಲಿಖಿತ ಪತ್ರ ನೀಡಿ ರೈತರಿಗೆ ಸೂಕ್ತ ಪರಿಹಾರ ಒದಗಿಸುವಂತೆ ಕ್ರಮ ಕೈಗೊಳ್ಳುವಂತೆ ಕೋರಿರುತ್ತಾರೆ. ತಮ್ಮ ಮನವಿಗೆ ಸ್ಪಂದಿಸಿದ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಬಂಟ್ವಾಳ ಶಾಸಕ ರಾಜೇಶ್ ಉಳಿಪಾಡಿಗುತ್ತು ಇವರಿಗೆ ತುಂಬೆ ಡ್ಯಾಂ ಸಂತ್ರಸ್ತ ರೈತರ ಹೋರಾಟ ಸಮಿತಿ ಅಧ್ಯಕ್ಷ ಹಾಗೂ ಬಂಟ್ವಾಳ ತಾಲೂಕು ರೈತ ಸಂಘದ ಅಧ್ಯಕ್ಷ ಎಂ ಸುಬ್ರಹ್ಮಣ್ಯ ಭಟ್ ಅವರು ಅಭಿನಂದನೆಗಳನ್ನು ಸಲ್ಲಿಸಿರುತ್ತಾರೆ.