ಮಾಜಿ ಸಚಿವ ಡಿಕೆಶಿಗೆ ನ್ಯಾಯ, ಆರೋಗ್ಯಕ್ಕಾಗಿ 12 ತೆಂಗಿನ ಕಾಯಿ ಗಣಪತಿ ಹವನ, ಪೂಜೆ…..
ಪುತ್ತೂರು: ಇಡಿ ಬಂಧನದಲ್ಲಿರುವ ರಾಜ್ಯದ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರಿಗೆ ನ್ಯಾಯ ಸಿಗಬೇಕು ಮತ್ತು ಅವರಿಗೆ ಉತ್ತಮ ಆರೋಗ್ಯ ಸಿಗಬೇಕು ಎಂದು ಆಗ್ರಹಿಸಿ ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಳದ ಬಾಲ ಗಣಪತಿ ಗುಡಿಯ ಬಳಿ ವಿಶೇಷ 12 ತೆಂಗಿನ ಕಾಯಿ ಗಣಪತಿ ಹವನ ಮತ್ತು ಪೂಜೆ ನಡೆಸಲಾಯಿತು.
ಪುತ್ತೂರು ಬ್ಲಾಕ್ ಕಾಂಗ್ರೆಸ್‍ನ ಮಾಜಿ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಅವರ ನೇತೃತ್ವದಲ್ಲಿ ನಡೆದ ಈ ಸೇವೆಯಲ್ಲಿ ಜಿಲ್ಲಾ ಪಂಚಾಯತ್ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಅನಿತಾ ಹೇಮನಾಥ ಶೆಟ್ಟಿ, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಎನ್.ಕೆ. ಜಗನ್ನಿವಾಸ್ ರಾವ್, ನ್ಯಾಯವಾದಿ ಚಿದಾನಂದ ಬೈಲಾಡಿ, ಕಾಂಗ್ರೆಸ್ ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷ ಯು. ಲೋಕೇಶ್ ಹೆಗ್ಡೆ, ಕಾರ್ಯದರ್ಶಿ ಸುಭಾಷ್ ಬೆಳ್ಳಿಪ್ಪಾಡಿ, ರವಿಪ್ರಸಾದ್ ಶೆಟ್ಟಿ, ತಾ.ಪಂ. ಸದಸ್ಯ ಪರಮೇಶ್ವರ ಭಂಡಾರಿ ಮತ್ತಿತರರು ಉಪಸ್ಥಿತರಿದ್ದರು.
ಅರ್ಚಕ ವಸಂತ ಕುಮಾರ್ ಕೆದಿಲಾಯ ಪ್ರಾರ್ಥನೆ ನಡೆಸಿದರು. ಹರೀಶ್ ಭಟ್ ಅವರು ಗಣಪತಿ ಹವನ ನೆರವೇರಿಸಿದರು.
ಈ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಕಾವು ಹೇಮನಾಥ ಶೆಟ್ಟಿ ಅವರು ದೇಶ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರವು ಕಾಂಗ್ರೆಸ್ ಮೇಲೆ ದ್ವೇಷ ಸಾಧನೆ ಮಾಡುತ್ತಿದೆ. ರಾಜ್ಯದ ಸರ್ಮಥ ನಾಯಕ ಡಿ.ಕೆ. ಶಿವಕುಮಾರ್ ಅವರನ್ನು ಗುರಿಮಾಡಿ ಕೇಂದ್ರದ ಅಧೀನದಲ್ಲಿರುವ ಇಡಿ ಸಂಸ್ಥೆಯ ಮೂಲಕ ಬಂಧಿಸಲಾಗಿದೆ. ಈ ಮೂಲಕ ಅವರ ಮಾನಸಿಕ ಸ್ಥಿತಿಯನ್ನು ಕುಗ್ಗಿಸುವ, ಕಾಂಗ್ರೆಸ್‍ಗೆ ಹಿನ್ನಡೆ ಆಗುವಂತಹ ಕೆಲಸ ಮಾಡಲಾಗುತ್ತಿದೆ. ಅವರಿಗೆ ನ್ಯಾಯ ಮತ್ತು ಆರೋಗ್ಯಕ್ಕಾಗಿ ದೇವಸ್ಥಾನದಲ್ಲಿ ಪ್ರಾರ್ಥನೆ ಮತ್ತು ಗಣಪತಿ ಹವನ ನಡೆಸಲಾಗಿದೆ ಎಂದು ತಿಳಿಸಿದರು.