‘ಲಕ್ಷದ್ವೀಪ ನಿನ್ನೆ-ಇಂದು-ನಾಳೆ’ ಆತ್ಮಾವಲೋಕನ: ವಿಚಾರಸಂಕಿರಣ – ದೇಶದ ಬಹು ಸಂಸ್ಕೃತಿಯ ವೈವಿಧ್ಯತೆ ಉಳಿಯಬೇಕು-ಎಂ.ಬಿ. ಸದಾಶಿವ…
ಸುಳ್ಯ:ಅರಂತೋಡಿನ ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ವತಿಯಿಂದ ‘ಲಕ್ಷದ್ವೀಪ ನಿನ್ನೆ, ಇಂದು ನಾಳೆ ಆತ್ಮಾವಲೋಕನ’ ಎಂಬ ವಿಚಾರ ಸಂಕಿರಣ ಸುಳ್ಯದ ಉಡುಪಿ ಗಾರ್ಡನ್ ಹೋಟೆಲ್ ನಲ್ಲಿ ಇಂದು ನಡೆಯಿತು.
ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಂ.ಬಿ.ಸದಾಶಿವ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿ ಇಂದಿನ ದಿನಗಳಲ್ಲಿ ನಮ್ಮ ದೇಶದ ಬಹು ಸಂಸ್ಕೃತಿ ಮತ್ತು ವೈವಿಧ್ಯತೆಯನ್ನು ಉಳಿಸಿಕೊಳ್ಳುವುದು ಬಲು ದೊಡ್ಡ ಸವಾಲಾಗಿದೆ. ಲಕ್ಷದ್ವೀಪದಲ್ಲಿನ ವಿದ್ಯಮಾನ ಮತ್ತು ಬೆಳವಣಿಗೆ ನಮ್ಮನ್ನು ತಲ್ಲಣಗೊಳಿಸುತ್ತಿದೆ. ಕ್ರಿಮಿನಲ್ ಚಟುವಟಿಕೆಗಳು, ಅಪರಾಧಗಳೇ ಇಲ್ಲದ ಲಕ್ಷದ್ವೀಪದಲ್ಲಿ ಗುಂಡಾ ಕಾಯಿದೆ ಜಾರಿ ಮಾಡುವುದು, ಅಲ್ಲಿನ ಜನರ ಆಹಾರ ಪದ್ದತಿಯನ್ನು ಬದಲಿಸುವುದು, ಮದ್ಯಪಾನ ಇಲ್ಲದ ನಾಡಿನಲ್ಲಿ ಮದ್ಯಪಾನ ವ್ಯಾಪಾರ ಮಾಡುವುದು ಹೀಗೆ ಅಲ್ಲಿನ ಜನರ ಮೇಲೆ ಕಾನೂನು ಹೇರುತ್ತಿದ್ದಾರೆ. ಕಾನೂನು ಜನರ ಪರವಾಗಿರಬೇಕೇ ಹೊರತು ಜನರಿಗೆ ಮಾರಕವಾಗಿರಬಾರದು ಎಂದು ಅವರು ಹೇಳಿದರು.
ಮುಖ್ಯ ಭಾಷಣ ಮಾಡಿದ ಸಿಐಟಿಯು ಅಧ್ಯಕ್ಷ ಕೆ.ಪಿ.ಜಾನಿ ಕೇಂದ್ರ ಸರಕಾರದ ಆಡಳಿತದ ನೈಜ ಆಡಳಿತ ವೈಖರಿ ಕೇಂದ್ರಾಡಳಿತ ಪ್ರದೇಶದಲ್ಲಿ ಕಾಣಬಹುದು ಎಂದರು. ಲಕ್ಷದ್ವೀಪದಲ್ಲಿ ನಡೆಯುತ್ತಿರುವ ವಿದ್ಯಮಾನಗಳು ಪೂರ್ವ ಯೋಜಿತ ಎಂದು ಅವರು ಅಭಿಪ್ರಾಯಪಟ್ಟರು.
ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷ ಹಾಗು ಕೇಂದ್ರ ನಾರು ಮಂಡಳಿಯ ಮಾಜಿ ಸದಸ್ಯ ಟಿ.ಎಂ.ಶಹೀದ್ ಅಧ್ಯಕ್ಷತೆ ವಹಿಸಿ ಮಾತನಾಡಿ ಲಕ್ಷದ್ವೀಪ ಮತ್ತು ದಕ್ಷಿಣ ಕನ್ನಡ ಜಿಲ್ಲೆಯೊಂದಿಗೆ ಅವಿನಾಭಾವ ಸಂಬಂಧ ಹೊಂದಿದೆ. ಅತ್ಯಂತ ಮುಗ್ಧ ಮತ್ತು ಸುಸಂಸ್ಕೃತ ಜನರು ವಾಸಿಸುವ ಲಕ್ಷದ್ವೀಪದ ಮೇಲೆ ಕೇಂದ್ರ ಸರಕಾರ ನೇಮಿಸಿದ ಆಡಳಿತಾಧಿಕಾರಿಯ ಆಡಳಿತದಿಂದ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಅಲ್ಲಿನ ಜನರಿಗೆ ಮಾರಕವಾಗುವಂತಹಾ ಹಲವು ಕಾನೂನನ್ನು ತಂದಿದ್ದಾರೆ. ಈ ರೀತಿ ಕಾನೂನನ್ನು ತಂದು ಜನರ ಮೇಲೆ ಹೇರುವುದಕ್ಕೆ ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ಭಾರೀ ವಿರೋಧ ವ್ಯಕ್ತವಾಗಿದೆ. ಕೇಂದ್ರ ಸರಕಾರ ಯಾವುದೋ ದುರುದ್ದೇಶದಿಂದ ಈ ರೀತಿಯ ಆಡಳಿತ ಬದಲಾವಣೆ ಮಾಡುತ್ತಿದೆ. ಈ ಹಿನ್ನಲೆಯಲ್ಲಿ ಈ ಕುರಿತು ವಿಚಾರ ವಿಮರ್ಶೆ ಎಲ್ಲೆಡೆ ನಡೆಯಬೇಕು ಎಂದರು.
ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ,ಕೆಪಿಸಿಸಿ ಮಾಧ್ಯಮ ವಕ್ತಾರ ಭರತ್ ಮುಂಡೋಡಿ, ಕೆಪಿಸಿಸಿ ಸಹಾಯ ಹಸ್ತ ಕಾರ್ಯಕ್ರಮದ ಚಿಕ್ಕಮಗಳೂರು ಉಸ್ತುವಾರಿ ಧನಂಜಯ ಅಡ್ಪಂಗಾಯ, ನಗರ ಪಂಚಾಯತ್ ಮಾಜಿ ಅಧ್ಯಕ್ಷರಾದ ಎಸ್.ಸಂಶುದ್ದೀನ್, ಎಂ.ವೆಂಕಪ್ಪ ಗೌಡ, ಜೆಡಿಎಸ್ ರಾಜ್ಯ ಕಾರ್ಯದರ್ಶಿ ಇಕ್ಬಾಲ್ ಎಲಿಮಲೆ, ಎಸ್ ಡಿಪಿಐ ಸುಳ್ಯ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಅಬ್ದುಲ್ ಕಲಾಂ, ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಿ.ಕೆ.ಹಮೀದ್ ಗೂನಡ್ಕ, ಎಪಿಎಂಸಿ ನಿರ್ದೇಶಕ ಆದಂ ಹಾಜಿ ಕಮ್ಮಾಡಿ, ಅನ್ಸಾರಿಯಾ ಅನಾಥಾಲಯದ ಅಧ್ಯಕ್ಷ ಅಬ್ದುಲ್ ಮಜೀದ್, ಉದ್ಯಮಿ ಇಬ್ರಾಹಿಂ ಖತ್ತರ್, ಎಸ್ಎಸ್ಎಫ್ ಸುಳ್ಯ ವಲಯ ಪ್ರಧಾನ ಕಾರ್ಯದರ್ಶಿ ಸ್ವಬಾಹ್ ಹಿಮಾಮಿ ಸಖಾಫಿ ಮತ್ತಿತರರು ಭಾಗವಹಿಸಿದ್ದರು. ಕೆ.ಎಂ.ಮುಸ್ತಫ ಸ್ವಾಗತಿಸಿದರು. ಆರ್.ಕೆ.ಮಹಮ್ಮದ್ ಕಾರ್ಯಕ್ರಮ ನಿರೂಪಿಸಿದರು. ಅಬ್ದುಲ್ ಖಾದರ್ ಮೊಟ್ಟೆಂಗಾರ್ ವಂದಿಸಿದರು. ಸಿದ್ದಿಕ್ ಕೊಕ್ಕೋ ಸಹಕರಿಸಿದರು.