ವಿವೇಕಾನಂದ ಎಂಜಿನಿಯರಿಂಗ್ ಕಾಲೇಜು – ಉತ್ತಮ ಪ್ರಾಜೆಕ್ಟ್ ಪ್ರಶಸ್ತಿ…
ಪುತ್ತೂರು: ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಅಂತಿಮ ವರ್ಷದ ಎಲೆಕ್ಟ್ರಾನಿಕ್ಸ್ ಎಂಡ್ ಕಮ್ಯುನಿಕೇಶನ್ ವಿಭಾಗದ ವಿದ್ಯಾರ್ಥಿಗಳು ತಯಾರಿಸಿದ ಐಒಟಿ ಆಧಾರಿತ ಮೊಬೈಲ್ ಅಪ್ಲಿಕೇಶನ್ ಬಳಸಿ ಸ್ವಯಂಚಾಲಿತ ನೀರಾವರಿ ವ್ಯವಸ್ಥೆ ಎನ್ನುವ ಯೋಜನೆಯು ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯು ನಡೆಸಿದ ರಾಜ್ಯಮಟ್ಟದ ಪ್ರದರ್ಶನದಲ್ಲಿ ಉತ್ತಮ ಪ್ರಾಜೆಕ್ಟ್ ಪ್ರಶಸ್ತಿಯನ್ನು ಗೆದ್ದುಕೊಂಡಿದೆ.
ಸ್ವಯಂಚಾಲಿತ ನೀರಾವರಿ ವ್ಯವಸ್ಥೆಯು ಮುಂದಿನ ಪೀಳಿಗೆಯ ನೀರಾವರಿ ವ್ಯವಸ್ಥೆಯಾಗಿದ್ದು, ಕೃಷಿ ಕ್ಷೇತ್ರದಲ್ಲಿ ಆಮೂಲಾಗ್ರ ಬದಲಾವಣೆಗೆ ಕಾರಣವಾಗಿದೆ. ತಂತ್ರಜ್ಞಾನದಲ್ಲಿ ಆಗುವ ಕ್ಷಿಪ್ರ ಬದಲಾವಣೆ ಮತ್ತು ಉದ್ಯಮ ಕ್ಷೇತ್ರದ ವ್ಯಾಪಕ ಬಳಕೆಯಿಂದಾಗಿ ಐಒಟಿ ಮತ್ತು ಇಂಟರ್ನೆಟ್ ವ್ಯವಸ್ಥೆಯು ಜನಪ್ರಿಯತೆಯನ್ನು ಗಳಿಸಿದೆ. ಈ ತಂತ್ರಜ್ಞಾನವನ್ನು ಬಳಸಿಕೊಂಡು ಕೃಷಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ. ಸೀಮಿತ ನೀರಾವರಿ ಸಂಪನ್ಮೂಲಗಳನ್ನು ಹೊಂದಿರುವ ದೊಡ್ಡ ಜಮೀನಿನ ರೈತರಿಗೆ ಮತ್ತು ದೂರದಲ್ಲಿ ಕೃಷಿ ಭೂಮಿಯನ್ನು ಹೊಂದಿದ ರೈತರಿಗೆ ನೀರಿನ ನಿರ್ವಹಣೆ ತುಂಬಾ ಕಷ್ಟದಾಯಕ. ಪ್ರಸಕ್ತ ಯೋಜನೆಯಲ್ಲಿ ಇದಕ್ಕೆ ಪರಿಹಾರವನ್ನು ಕಂಡುಕೊಳ್ಳಲಾಗಿದೆ. ಈ ಯೋಜನೆಯನ್ನು ಅಳವಡಿಸಿಕೊಂಡಲ್ಲಿ ರೈತರಿಗೆ ಪ್ರಪಂಚದ ಯಾವುದೇ ಮೂಲೆಯಿಂದ ಸ್ಮಾರ್ಟ್ ಫೋನಿನ ಮೂಲಕ ತಮ್ಮ ಜಮೀನಿನ ಬೇಕಾದ ಭಾಗಕ್ಕೆ ನೀರು ಹರಿಯುವಂತೆ ಮಾಡಬಹುದು. ಅಲ್ಲದೆ ಜಮೀನಿನಲ್ಲಿ ಅಳವಡಿಸಿದ ಸಂವೇದಕಗಳ ಮೂಲಕ ನೀರಿನ ಪ್ರಮಾಣ ಮೇಲ್ವಿಚಾರಣೆ, ಅಲ್ಲಿನ ಹವಾಮಾನ ಪರಿಸ್ಥಿತಿ, ತಾಪಮಾನ, ಮಣ್ಣಿನ ತೇವಾಂಶಗಳನ್ನು ತಿಳಿದುಕೊಂಡು ನೀರಿನ ಮಿತವ್ಯಯವನ್ನು ಸಾಧಿಸಬಹುದು. ಸಂವೇದಕಗಳು ಕಳಿಹಿಸುವ ಸಂಕೇತಗಳನ್ನು ಆಧರಿಸಿ ಅಥವಾ ಪೂರ್ವ ನಿರ್ಧರಿತವಾದ ತಂತ್ರಾಂಶಗಳನ್ನು ಆಧರಿಸಿ ಇದು ಸ್ವಯಂಚಾಲಿತವಾಗಿ ಕಾರ್ಯನಿರ್ವಹಿಸುವುದಕ್ಕೆ ಸಮರ್ಥವಾಗಿದೆ.
ಕಾಲೇಜಿನ ಪ್ರಾಂಶುಪಾಲ ಡಾ.ಮಹೇಶ್‍ಪ್ರಸನ್ನ ಕೆ ಅವರ ಮುಂದಾಳುತ್ವದಲ್ಲಿ ಎಲೆಕ್ಟ್ರಾನಿಕ್ಸ್ ಎಂಡ್ ಕಮ್ಯುನಿಕೇಶನ್ ವಿಭಾಗ ಮುಖ್ಯಸ್ಥ ಪ್ರೊ.ಶ್ರೀಕಾಂತ್ ರಾವ್ ಅವರ ಸಲಹೆಗಳೊಂದಿಗೆ ಉಪನ್ಯಾಸಕ ಡಾ.ಮಹಾಂತೇಶ್ ಚೌಧರಿ ಅವರ ಮಾರ್ಗದರ್ಶನದಲ್ಲಿ ಇದನ್ನು ನಿರ್ಮಿಸಲಾಗಿದೆ. ವಿದ್ಯಾರ್ಥಿಗಳಾದ ಅನಂತೇಶ್ವರ ಪೈ, ಅನೂಪ್ ಜೆ, ಆಶಿಶ್ ಶೆಟ್ಟಿ ಮತ್ತು ದೀಕ್ಷಿತ್.ಪಿ.ಎಸ್ ಅವರು ಇದನ್ನು ತಯಾರಿಸಿದ್ದಾರೆ ಎಂದು ಪ್ರಾಂಶುಪಾಲ ಡಾ.ಮಹೇಶ್‍ಪ್ರಸನ್ನ ಕೆ ತಿಳಿಸಿದ್ದಾರೆ.