ಶಿರಾಡಿ ಘಾಟ್ ರಸ್ತೆಯನ್ನು 6 ತಿಂಗಳ ಕಾಲ ಮುಚ್ಚುವ ಪ್ರಸ್ತಾವ – ಮರುಪರಿಶೀಲಿಸುವಂತೆ ವಿಧಾನ ಪರಿಷತ್ ನ ಸದಸ್ಯರಾದ ಮಂಜುನಾಥ ಭಂಡಾರಿ ಒತ್ತಾಯ…
ಮಂಗಳೂರು: ಶಿರಾಡಿ ಘಾಟ್ ರಸ್ತೆಯನ್ನು 6 ತಿಂಗಳ ಕಾಲ ಮುಚ್ಚುವ ಪ್ರಸ್ತಾವವನ್ನು ಮರುಪರಿಶೀಲಿಸುವಂತೆ ವಿಧಾನ ಪರಿಷತ್ ನ ನೂತನ ಸದಸ್ಯರಾದ ಮಂಜುನಾಥ ಭಂಡಾರಿ ಅವರು ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಡೋಣಿಗಲ್‌ನಿಂದ ಮಾರನಹಳ್ಳಿವರೆಗಿನ 10 ಕಿ.ಮೀ ಉದ್ದದ ಚತುಷ್ಪಥ ರಸ್ತೆ ಕಾಮಗಾರಿಗೆ ಶಿರಾಡಿ ಘಾಟ್ ರಸ್ತೆಯನ್ನು 6 ತಿಂಗಳ ಕಾಲ ಮುಚ್ಚುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಹಾಸನ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿರುವುದನ್ನು ಉಲ್ಲೇಖಿಸಿ, ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಂಜುನಾಥ ಭಂಡಾರಿ ಅವರು ಶಿರಾಡಿ ಘಾಟ್ ರಸ್ತೆಯು ಕರಾವಳಿ ಕರ್ನಾಟಕದ ಜೀವನಾಡಿಯಾಗಿದ್ದು, ಈ ಪ್ರದೇಶದ ವ್ಯಾಪಾರ ಸಂಸ್ಥೆಗಳು ಮತ್ತು ಪ್ರಮುಖ ಕೈಗಾರಿಕೆಗಳಾದ MRPL, MCF ಹಾಗೂ ನವ ಮಂಗಳೂರು ಬಂದರು ತಮ್ಮ ಕಾರ್ಯನಿರ್ವಹಣೆಗಾಗಿ ಶಿರಾಡಿ ಘಾಟ್ ರಸ್ತೆಯನ್ನು ಅವಲಂಬಿಸಿವೆ. ಶಿರಾಡಿ ಘಾಟ್ ರಸ್ತೆಯನ್ನು 6 ತಿಂಗಳ ಕಾಲ ಮುಚ್ಚುವುದರಿಂದ ಎಲ್ಲಾ ವರ್ಗದ ಜನರಿಗೆ ಭಾರಿ ಅನಾನುಕೂಲತೆ ಉಂಟಾಗುತ್ತದೆ ಮತ್ತು ಈ ಭಾಗದ ವ್ಯಾಪಾರ ಮತ್ತು ಕೈಗಾರಿಕಾ ಚಟುವಟಿಕೆಗಳಿಗೆ ಪ್ರಮುಖವಾಗಿ ಅಡಚಣೆಯಾಗುತ್ತದೆ ಎಂದು ಅವರು ಹೇಳಿದರು.
ಕಳೆದ 2 ಬಾರಿ ಶಿರಾಡಿ ಘಾಟ್ ರಸ್ತೆಯನ್ನು 6 ತಿಂಗಳ ಕಾಲ ಬಂದ್ ಮಾಡಿದಾಗ ತೀವ್ರ ತೊಂದರೆಯಾಗಿತ್ತು. ಆದ್ದರಿಂದ ಕಡಿಮೆ ಅವಧಿಯಲ್ಲಿ ರಸ್ತೆ ಕಾಮಗಾರಿ ಪೂರ್ಣಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ. ಇದನ್ನು ಸಾಧಿಸಲು ಆಧುನಿಕ ಯಂತ್ರೋಪಕರಣಗಳು, ತಂತ್ರಜ್ಞಾನಗಳು ಮತ್ತು ಸಾಮಗ್ರಿಗಳನ್ನು ಬಳಸಿಕೊಂಡು ರಸ್ತೆ ನಿರ್ಮಿಸಲು, ಏಕಕಾಲದಲ್ಲಿ ಅನೇಕ ಹಂತಗಳಲ್ಲಿ ಕೆಲಸವನ್ನು ಪ್ರಾರಂಭಿಸಲು ಮತ್ತು ಸಾಮಗ್ರಿಗಳು ಮತ್ತು ಕಾರ್ಮಿಕರಿಗೆ ಸಾಕಷ್ಟು ವ್ಯವಸ್ಥೆಗಳನ್ನು ಮಾಡಲು ತಜ್ಞರ ಸಹಾಯದಿಂದ ಕಾರ್ಯತಂತ್ರಗಳನ್ನು ಕ್ರಮಬದ್ಧವಾಗಿ ಯೋಜಿಸಲು ಅವರು ಸಲಹೆ ನೀಡಿದರು.
ಹಾಸನ ಜಿಲ್ಲೆಯಲ್ಲಿ 2006ರಲ್ಲಿ ಶ್ರವಣಬೆಳಗೊಳ ಮಹಾಮಸ್ತಕಾಭಿಷೇಕ ಸಂದರ್ಭದಲ್ಲಿ 100 ಕಿ.ಮೀ ರಸ್ತೆ ಕಾಮಗಾರಿ ಕೇವಲ 90 ದಿನದಲ್ಲಿ ನಡೆದಿದೆ ಎಂದು ಉದಾಹರಣೆ ನೀಡಿದರು. ಅತಿವೇಗದ ರಸ್ತೆ ನಿರ್ಮಾಣದಲ್ಲಿ ಭಾರತ ವಿಶ್ವ ದಾಖಲೆ ಹೊಂದಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿಕೆ ನೀಡಿರುವ ಮಾಧ್ಯಮ ವರದಿಯನ್ನೂ ಅವರು ಈ ಸಂದರ್ಭದಲ್ಲಿ ನೀಡಿದರು.