ಕನ್ನಡ ಸಾಹಿತ್ಯ ಪರಿಷತ್ತು ಬಂಟ್ವಾಳ ಘಟಕದಿಂದ ಸಂಸ್ಥಾಪನಾ ದಿನಾಚರಣೆ…
ಬಂಟ್ವಾಳ: ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪನೆಯಿಂದ ಸಾಹಿತ್ಯ ಸೃಷ್ಟಿ, ಪಸರಿಸುವ ಕೆಲಸವಾಗುತ್ತಿದ್ದು, ಬೇರುಗಳನ್ನು ಗಟ್ಟಿಗೊಳಿಸುವ ಕಾರ್ಯವನ್ನು ಕಸಾಪ ಮಾಡಬೇಕು ಎಂದು ಸಂಶೋಧಕ ಚೇತನ್ ಮುಂಡಾಜೆ ಹೇಳಿದರು.
ಗುರುವಾರ ಸಂಜೆ ಕನ್ನಡ ಸಾಹಿತ್ಯ ಪರಿಷತ್ತು ಬಂಟ್ವಾಳ ಘಟಕದಿಂದ ಬಿ.ಸಿ.ರೋಡ್ ಕನ್ನಡ ಭವನದಲ್ಲಿ ಸಂಸ್ಥಾಪನಾ ದಿನಾಚರಣೆಯಲ್ಲಿ ಅವರು ಉಪನ್ಯಾಸ ನೀಡಿದರು. ಸಾಹಿತ್ಯ ಹಳ್ಳಿಗಳಿಗೆ ತಲುಪಬೇಕು ಎಂಬ ಆಶಯ ಇಂದು ಈಡೇರುವ ಕಾರ್ಯ ನಡೆಯುತ್ತಿದೆ ಎಂದು ಅವರು ಹೇಳಿದರು.
ಹಿರಿಯ ಕವಿ ಗಣೇಶ ಪ್ರಸಾದ ಪಾಂಡೇಲು ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿ, ಇಂಥ ಕಾರ್ಯಕ್ರಮ ಮೂಲಕ ಕಸಾಪ ಬಂಟ್ವಾಳ ಘಟಕವೂ ಜನರ ಬಳಿ ತಲುಪುವ ಕೆಲಸ ಮಾಡುತ್ತಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಸಾಪ ತಾಲೂಕು ಅಧ್ಯಕ್ಷ ವಿಶ್ವನಾಥ ಬಂಟ್ವಾಳ ವಹಿಸಿ ಮಾತನಾಡಿ, ಕಸಾಪ ವಿದ್ಯಾರ್ಥಿಗಳ ಮತ್ತು ಜನಸಾಮಾನ್ಯರನ್ನು ತಲುಪುವ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ ಎಂದರು.
ಅಬುಬಕರ್ ಅಮ್ಮುಂಜೆ ಪ್ರಾಸ್ತಾವಿಕವಾಗಿ ಮಾತನಾಡಿ, ಕಾರ್ಯಕ್ರಮ ನಿರ್ವಹಿಸಿದರು. ಗೌರವ ಕಾರ್ಯದರ್ಶಿ ವಿ.ಸು.ಭಟ್ ವಂದಿಸಿದರು