ದೇಶದ ಕುರಿತು ಪ್ರೀತಿ ಹುಟ್ಟಿಸುವ ಅದ್ಭುತ ನಾಟಕ – ಅಮರಕ್ರಾಂತಿ ಸ್ವಾತಂತ್ರ್ಯ ಹೋರಾಟ- 1837…
ಬರಹ: ರವಿರಾಜ್ ಹೆಚ್.ಪಿ, ಅಧ್ಯಕ್ಷರು, ಕ ಸಾ ಪ ಉಡುಪಿ ತಾಲೂಕು.
ಕಾರ್ಕಳ ಯಕ್ಷ ರಂಗಾಯಣದ ನಿರ್ದೇಶಕ ಜೀವನ್ ರಾಂ ಸುಳ್ಯ ಅವರ ನಿರ್ದೇಶನದ ‘ಅಮರಕ್ರಾಂತಿ ಸ್ವಾತಂತ್ರ್ಯ ಹೋರಾಟ 1837 ‘ ಜೂ. 19 ರಂದು ಕಾರ್ಕಳದಲ್ಲಿ ಅದ್ಭುತ ಪ್ರದರ್ಶನ ಕಂಡಿತು.
ಕನ್ನಡ ಸಾರಸ್ವತ ಲೋಕದ ಅಗ್ರಮಾನ್ಯ ಲೇಖಕರಲ್ಲಿ ಒಬ್ಬರಾದ ಡಾ.ಪ್ರಭಾಕರ ಶಿಶಿಲ ಅವರ ರಚನೆಯ ಸುಮಾರು 50 ನಿಮಿಷದ ಈ ನಾಟಕ ಪ್ರೇಕ್ಷಕರ ಮನಗೆದ್ದಿತು. ಭಾರತದ ಇತಿಹಾಸವನ್ನು ಗಮನಿಸಿದರೆ 1857 ರ ಸಿಪಾಯಿ ದಂಗೆಯನ್ನು ಮೊದಲನೆಯ ಸ್ವಾತಂತ್ರ್ಯ ಸಂಗ್ರಾಮ ಎಂದು ಚಿತ್ರಿಸಲಾಗಿದೆ. ಆದರೆ ಇದಕ್ಕಿಂತ ಮೊದಲೇ 1837 ರಲ್ಲಿ ಕೆದಂಬಾಡಿ ರಾಮ ಗೌಡರ ನಾಯಕತ್ವದಲ್ಲಿ ,ಕಲ್ಯಾಣ ಸ್ವಾಮಿ ನಾಮಾಂಕಿತ ಪುಟ್ಟಬಸವ ನನ್ನು ಮುಂದಿಟ್ಟುಕೊಂಡು, ಹುಲಿಕಡಿದ ನಂಜಯ್ಯ ಮುಂತಾದ ಯುದ್ಧ ಪ್ರವೀಣರನ್ನು ಸೇರಿಸಿಕೊಂಡು,1837 ಮಾರ್ಚ್ 30 ರಿಂದ ಎಪ್ರಿಲ್ 5 ರವರೆಗೆ ನಡೆದ ಕ್ರಾಂತಿಯೇ *ಅಮರ ಸುಳ್ಯ ಸ್ವಾತಂತ್ರ್ಯ ಹೋರಾಟ*.
ಈ ನಾಟಕವು ಕಲಾವಿದರ ಅದ್ಭುತ ಅಭಿನಯ,ಜೀವನ್ ರಾಂ ಸುಳ್ಯರವರ ಸಮರ್ಥ ನಿರ್ದೇಶನದಲ್ಲಿ ಪ್ರತಿ ಕ್ಷಣವೂ ನೋಡುಗರನ್ನು ರೋಮಾಂಚನಗೊಳಿಸಿತು.1837 ರಲ್ಲಿ ಅಮರಸುಳ್ಯ ವನ್ನು ಕೇಂದ್ರವಾಗಿಟ್ಟುಕೊಂಡು ಕೊಡಗು – ಕೆನರಾ ರೈತ ಬಂಡಾಯ ನಡೆಯಿತು. 1834 ರಲ್ಲಿ ಅಮರ ಸುಳ್ಯ ಮತ್ತು ಪುತ್ತೂರು ಗಳನ್ನು ಕೊಡಗಿನಿಂದ ಬೇರ್ಪಡಿಸಿ, ಕೃಷಿಕರ ಮೇಲೆ ಬ್ರಿಟಿಷರು ಹೇರಿದ ಕ್ರೂರ ಕಂದಾಯ ನೀತಿ, ಬಂಡಾಯಕ್ಕೆ ಮೂಲ ಕಾರಣವಾಗಿತ್ತು. 13 ದಿನಗಳ ಕಾಲ ಕೆನರಾ ಜಿಲ್ಲೆ ಆಡಳಿತ ನಡೆಸಿದ ಸತ್ಯ ವಿಷಯ ಈ ನಾಟಕದ ಕಥಾಹಂದರ.
ಈ ನಾಟಕ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಮಡಿದ ವೀರ ಯೋಧರನ್ನು ಸ್ಮರಿಸುವ ಅಪೂರ್ವ ಪ್ರಯೋಗವಾಗಿದೆ. ರಾಜ್ಯದ ಮೂಲೆ ಮೂಲೆಗಳಲ್ಲಿ ಈ ನಾಟಕ ಪ್ರದರ್ಶನಗೊಳ್ಳಲಿ.ಈ ನಿಟ್ಟಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಮಾನ್ಯ ಸುನಿಲ್ ಕುಮಾರ್ ಅವರು ಸಹಕಾರ ನೀಡಬೇಕೆಂದು ವಿನಂತಿ.
ಬರಹ: ರವಿರಾಜ್ ಹೆಚ್.ಪಿ
ಅಧ್ಯಕ್ಷರು,
ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು