ವಿವೇಕಾನಂದ ಎಂಜಿನಿಯರಿಂಗ್ ಕಾಲೇಜು – ಅಂತಾರಾಷ್ಟ್ರೀಯ ಯೋಗ ದಿನಾಚರಣೆ…

ಪುತ್ತೂರು: ನಮ್ಮ ಮನಸ್ಸು ಮತ್ತು ಶರೀರ ಬಲಗೊಂಡಷ್ಟು ಋಣಾತ್ಮಕ ಭಾವನೆಗಳು ಕಡಿಮೆಯಾಗುತ್ತವೆ. ಆಗ ಮನಸ್ಸು ಸಂತುಲಿತವಾಗಿ ಶಕ್ತಿಪೂರ್ಣವಾಗುತ್ತದೆ ಎಂದು ವಿದ್ಯಾಭಾರತಿ ದಕ್ಷಿಣ ಕನ್ನಡದ ಯೋಗ ಸಂಯೋಜಕ ಶ್ರೀ ಚಂದ್ರಶೇಖರ್ ಹೇಳಿದರು.
ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯಲ್ಲಿ ಎನ್‍ಎಸ್‍ಎಸ್ ಮತ್ತು ಯೂತ್ ರೆಡ್‍ಕ್ರಾಸ್ ಇದರ ಸಂಯುಕ್ತ ಆಶ್ರಯದಲ್ಲಿ ನಡೆದ 8ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತಾಡಿದರು.
ಯೋಗ ಇಂದು ವಿಶ್ವವ್ಯಾಪಿಯಾಗಿದೆ, ವಿದೇಶಗಳೂ ಅದರ ಮಹತ್ವವನ್ನು ಅರಿತಿವೆ. ಯಾವುದೇ ವ್ಯತಿರಿಕ್ತ ಪರಿಣಾಮಗಳಿಲ್ಲದ ಯೋಗವನ್ನು ಎಲ್ಲರೂ ಅಭ್ಯಸಿಸಿ ಆರೋಗ್ಯವಂತರಾಗಬೇಕೆಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಮಹೇಶ್ ಪ್ರಸನ್ನ.ಕೆ ಮಾತನಾಡಿ ಯಾಂತ್ರಿಕ ಜಗತ್ತಿನಲ್ಲಿ ನಿರಂತರ ಕೆಲಸ ಮತ್ತು ಒತ್ತಡದಿಂದ ಪ್ರತಿಯೊಬ್ಬರೂ ದಣಿಯುವುದು ಸಹಜ. ಆಗ ದೇಹಕ್ಕೆ ಶಕ್ತಿಯ ಪೂರೈಕೆಯು ಅಗತ್ಯವಾಗುತ್ತದೆ. ಇಂತಹ ಸಂದರ್ಭದಲ್ಲಿ ನಿಯಮಿತವಾಗಿ ಯೋಗಾಭ್ಯಾಸವನ್ನು ಮಾಡುವುದರ ಮೂಲಕ ಶಕ್ತಿಯನ್ನು ವೃದ್ಧಿಸಿಕೊಳ್ಳಬಹುದು ಎಂದರು.
ಸಭಾ ಕಾರ್ಯಕ್ರಮದ ನಂತರ ಮುಖ್ಯ ಅತಿಥಿಗಳ ನೇತೃತ್ವದಲ್ಲಿ ಸರಳ ಆಸನಗಳನ್ನು ಅಭ್ಯಸಿಸಲಾಯಿತು.
ಕಾಲೇಜಿನ ಎನ್‍ಎಸ್‍ಎಸ್ ಸಂಯೋಜಕಿ ಪ್ರೊ.ನಿಶಾ.ಜಿ.ಆರ್ ಸ್ವಾಗತಿಸಿದರು. ಯೂತ್ ರೆಡ್‍ಕ್ರಾಸ್ ಸಂಯೋಜಕ ಪ್ರೊ.ಅಜಯ್ ಶಾಸ್ತ್ರಿ ವಂದಿಸಿದರು.

Sponsors

Related Articles

Back to top button