ಅಜೆಕಾರು ಬಳಗ ಆಶ್ರಯದಲ್ಲಿ ಭಾಸ್ಕರ ರೈ ಕುಕ್ಕುವಳ್ಳಿಯವರ ಕೃತಿದ್ವಯ ಲೋಕಾರ್ಪಣೆ – ಸರಣಿ ತಾಳಮದ್ದಳೆ…

ತುಳುನಾಡಿನ ಜನರಲ್ಲಿ ಜಾತಿ ಸಂಕಟವಿಲ್ಲ: ಡಾ.ಸುನೀತಾ ಎಂ. ಶೆಟ್ಟಿ...

ಮುಂಬಯಿ: ‘ತುಳುನಾಡು ಸಂಸ್ಕೃತಿ ಸಂಸ್ಕಾರಗಳಿಗೆ ಹೆಸರಾಗಿದೆ. ಇಲ್ಲಿನ ಜನರಲ್ಲಿ ಜಾತಿ ಸಂಕಟವಿಲ್ಲ; ಮತ- ಧರ್ಮಗಳ ಸಂಘರ್ಷವಿಲ್ಲ. ಆದ್ದರಿಂದ ತುಳುವರ ಸಾಹಿತ್ಯ ಕೃತಿಗಳಲ್ಲಿ ಸಮಕಾಲೀನ ಸಂಗತಿಗಳೊಂದಿಗೆ ಸಹಬಾಳ್ವೆ – ಸಮಭಾವಗಳ ಸಂದೇಶವಿರುತ್ತದೆ. ಭಾಸ್ಕರ ರೈಯವರ ಗದ್ಯ ಮತ್ತು ಕಾವ್ಯ ಕೃತಿಗಳಲ್ಲಿ ಇದು ಹಾಸು ಹೊಕ್ಕಾಗಿರುವುದರಿಂದ ನಾಡು – ಹೊರನಾಡುಗಳಲ್ಲಿ ಅವರದೇ ಆದ ಅಭಿಮಾನಿ ವರ್ಗ ಸೃಷ್ಟಿಯಾಗಿದೆ’ ಎಂದು ಮುಂಬೈಯ ಹಿರಿಯ ಸಾಹಿತಿ ಡಾ. ಸುನೀತಾ ಎಂ. ಶೆಟ್ಟಿ ಹೇಳಿದ್ದಾರೆ.
ವಿದ್ಯಾ ವಿಹಾರ್ ಪೂರ್ವದ ಶ್ರೀ ಅಂಬಿಕಾ ಆದಿನಾಥೇಶ್ವರ ಗಣಪತಿ ಮಂದಿರದಲ್ಲಿ ಆ. 24ರಂದು ಕವಿ-ಲೇಖಕ ಮತ್ತು ಯಕ್ಷಗಾನ ವಿದ್ವಾಂಸ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಅವರ ಎರಡು ಕವನ ಸಂಕಲನಗಳ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಯಕ್ಷಗುರು ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರ ನೇತೃತ್ವದ ಅಜೆಕಾರು ಕಲಾಭಿಮಾನಿ ಬಳಗದ 2024ನೇ ಸಾಲಿನ ಯಕ್ಷಗಾನ ತಾಳಮದ್ದಳೆ ಸರಣಿಯನ್ನು ಅಂಬಿಕಾ ಮಂದಿರದ ಧರ್ಮದರ್ಶಿ ವೇದಮೂರ್ತಿ ಪೆರಣಂಕಿಲ ಹರಿದಾಸ ಭಟ್ ದೇವಿ ಸನ್ನಿಧಿಯಲ್ಲಿ ದೀಪ ಬೆಳಗಿಸಿ ಉದ್ಘಾಟಿಸಿದರು.ಮುಂಬೈಯ ಹಿರಿಯ ಯಕ್ಷಗಾನ ಅರ್ಥಧಾರಿ ಕೆ. ಕೆ. ಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಸಾಹಿತ್ಯ ಸಾಧನೆಗೆ ಯಕ್ಷಗಾನ ಪೂರಕ: ಪೆರ್ಣಂಕಿಲ ಹರಿದಾಸ ಭಟ್
ಇದೇ ಸಂದರ್ಭದಲ್ಲಿ ಮೈಸೂರಿನ ರಾಜ್ ಪ್ರಕಾಶನವು ಪ್ರಕಟಿಸಿದ ಭಾಸ್ಕರ ರೈ ಕುಕ್ಕುವಳ್ಳಿಯವರ ‘ಸೃಷ್ಟಿ ಸಿರಿಯಲ್ಲಿ ಪುಷ್ಪವೃಷ್ಠಿ’ : ಭಾವ – ಅನುಭಾವ ಗೀತೆಗಳ ಗುಚ್ಛ ಕನ್ನಡ ಕವನ ಸಂಕಲನವನ್ನು ಹರಿದಾಸ ಭಟ್ ಅನಾವರಣಗೊಳಿಸಿದರು. ಅವರು ಮಾತನಾಡಿ ‘ ಯಕ್ಷಗಾನ ಮತ್ತು ಸಾಹಿತ್ಯ ಒಂದಕ್ಕೊಂದು ಪೂರಕ. ಭಾಸ್ಕರ ರೈಯವರು ಸ್ವತಃ ಯಕ್ಷಗಾನ ಕಲಾವಿದರಾಗಿ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಸಾಧನೆ ಮಾಡಲು ಸಾಧ್ಯವಾಗಿದೆ. ಅವರು ರಚಿಸಿದ ಭಕ್ತಿ ಹಾಗೂ ಭಾವಗೀತೆಗಳು ವಿವಿಧ ಧ್ವನಿಸುರುಳಿಗಳ ಮೂಲಕ ಜನಪ್ರಿಯವಾಗಿವೆ’ ಎಂದರು.
‘ಸೀಯನ’ ಚೀಪೆ ಕೋಪೆದ ಪಾಕ ಕಬಿತೆಲು – ತುಳು ಕವಿತಾ ಸಂಕಲನವನ್ನು ಡಾ. ಸುನೀತಾ ಎಂ. ಶೆಟ್ಟಿ ಬಿಡುಗಡೆಗೊಳಿಸಿದರು. ‘ಸಬಿ,ಸೀಪೆ,ಸುಗಿಪು ಸೀಯನವೆಂಬ ಮೂರು ವಿಭಾಗಗಳಲ್ಲಿ ತುಳು ಭಾಷೆಯ ಬನಿ ಮತ್ತು ಶಬ್ಧ ಸಮೃದ್ಧಿ ಕುಕ್ಕುವಳ್ಳಿಯವರ ಕವಿತೆಗಳಲ್ಲಿ ಎದ್ದು ತೋರುತ್ತವೆ’ ಎಂದವರು ನುಡಿದರು.
ಯಕ್ಷಗಾನ ಕಲಾವಿದ, ಲೇಖಕ ಸದಾಶಿವ ಆಳ್ವ ತಲಪಾಡಿ ಕೃತಿ ಪರಿಚಯ ನೀಡಿ ಎರಡೂ ಕವನ ಸಂಕಲನಗಳನ್ನು ವಿಶ್ಲೇಷಿಸಿದರು‌. ಮುಂಬಯಿಯ ಗಾಯಕ ಮತ್ತು ಸಂಗೀತ ನಿರ್ದೇಶಕ ಪದ್ಮನಾಭ ಸಸಿಹಿತ್ಲು ಶುಭ ಹಾರೈಸಿದರು.
‘ಪುಣ್ಯನೆಲ ಪೆರ್ಣಂಕಿಲ’ ಧ್ವನಿಸುರುಳಿಗೆ ಬೆಂಗಳೂರಿನ ಡಾ.ವಿದ್ಯಾಭೂಷಣರು ಹಾಡಿದ ಕವಿ ಕುಕ್ಕುವಳ್ಳಿ ವಿರಚಿತ ಗಣೇಶ ಸ್ತುತಿಯೊಂದಿಗೆ ಆರಂಭಗೊಂಡ ಸಮಾರಂಭದಲ್ಲಿ ಅಜೆಕಾರು ಕಲಾಭಿಮಾನಿ ಬಳಗದ ಅಧ್ಯಕ್ಷ ಅಜೆಕಾರು ಬಾಲಕೃಷ್ಣ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿದರು. ಕೃತಿ ಕರ್ತ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಲಾ ಸಂಘಟಕ ಕರ್ನೂರು ಮೋಹನ್ ರೈ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

*’ತುಳುನಾಡ ಬಲೀಂದ್ರೆ- ಜಾಬಾಲಿ ನಂದಿನಿ’ ತಾಳಮದ್ದಳೆ:
ಉದ್ಘಾಟನಾ ಸಮಾರಂಭದ ಬಳಿಕ ತಾಳಮದ್ದಳೆ ಸರಣಿಯ ಮೊದಲ ಕಾರ್ಯಕ್ರಮವಾಗಿ ‘ತುಳುನಾಡ ಬಲೀಂದ್ರೆ’ (ತುಳು), ‘ಜಾಬಾಲಿ-ನಂದಿನಿ’ (ಕನ್ನಡ) ಯಕ್ಷಗಾನ ತಾಳಮದ್ದಳೆ ಜರಗಿತು. ಭಾಗವತರಾಗಿ ದೇವಿಪ್ರಸಾದ್ ಆಳ್ವ ತಲಪಾಡಿ ಹಾಗೂ ದೇಲಂತಮಜಲು ಸುಬ್ರಹ್ಮಣ್ಯ ಭಟ್ ಮತ್ತು ಪ್ರಶಾಂತ್ ಶೆಟ್ಟಿ ವಗೆನಾಡು ಹಿಮ್ಮೇಳದಲ್ಲಿದ್ದರು. ಭಾಸ್ಕರ ರೈ ಕುಕ್ಕುವಳ್ಳಿ, ಜಯಪ್ರಕಾಶ್ ಶೆಟ್ಟಿ ಪೆರ್ಮುದೆ, ದಿನೇಶ್ ಶೆಟ್ಟಿ ಕಾವಳಕಟ್ಟೆ, ಸದಾಶಿವ ಆಳ್ವ ತಲಪಾಡಿ, ಗುರುತೇಜ ಶೆಟ್ಟಿ ಒಡಿಯೂರು ಅರ್ಥಧಾರಿಗಳಾಗಿ ಪಾತ್ರ ವಹಿಸಿದರು.

whatsapp image 2024 08 26 at 2.59.50 pm (1)

whatsapp image 2024 08 26 at 2.59.52 pm

whatsapp image 2024 08 26 at 2.59.54 pm

Sponsors

Related Articles

Back to top button