ಅಮಾಯಕ ಮಸೂದ್ ಹತ್ಯೆಗೆ ಸುಳ್ಯ ತಾಲೂಕು ಮುಸ್ಲಿಂ ಒಕ್ಕೂಟ ಖಂಡನೆ…
ಆರೋಪಿಗಳಿಗೆ ಕಠಿಣ ಶಿಕ್ಷೆ , ಮೃತರ ಕುಟುಂಬಕ್ಕೆ 25 ಲಕ್ಷ ರೂಪಾಯಿಗಳ ಪರಿಹಾರ ನೀಡುವಂತೆ ಆಗ್ರಹ...
ಸುಳ್ಯ : ಕಳಂಜ ಗ್ರಾಮದಲ್ಲಿ ಕ್ಷುಲ್ಲಕ ವಿಷಯಕ್ಕೆ ಸಂಬಂಧಿಸಿ ಮಸೂದ್ ಎಂಬ ಯುವಕನನ್ನು ಸುಮಾರು ಎಂಟು ಮಂದಿಯ ತಂಡ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಯುವಕ ಮೃತಪಟ್ಟಿದ್ದು, ಘಟನೆಗೆ ಸುಳ್ಯ ತಾಲೂಕು ಮುಸ್ಲಿಂ ಒಕ್ಕೂಟದ ವತಿಯಿಂದ ತೀವ್ರ ಖಂಡನೆಯನ್ನು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಎಂಟು ಮಂದಿ ಆರೋಪಿಗಳನ್ನು ಬೆಳ್ಳಾರೆ ಪೊಲೀಸರು ತಕ್ಷಣವೇ ಬಂಧಿಸಿದ್ದು ಪೊಲೀಸ್ ಇಲಾಖೆಯ ಈ ಕಾರ್ಯಕ್ಕೆ ಸಂಘಟನೆ ಮೆಚ್ಚುಗೆ ವ್ಯಕ್ತಪಡಿಸಿದೆ. ಅದೇ ರೀತಿ ಮುಂದಿನ ದಿನಗಳಲ್ಲಿ ಇಂತಹ ಘಟನೆ ನಡೆದಂತೆ ಅಪರಾಧಿಗಳಿಗೆ ಕಠಿಣ ಶಿಕ್ಷೆ ಕೊಡಿಸುವಲ್ಲಿ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಒಕ್ಕೂಟದ ವತಿಯಿಂದ ಸಂಚಾಲಕ ಇಕ್ಬಾಲ್ ಎಲಿಮಲೆ, ತಾಲೂಕು ಮಸೀದಿ ಸಮನ್ವಯ ಸಮಿತಿ ಸಂಚಾಲಕರಾದ ಹಾಜಿ ಕೆ.ಎಂ. ಮುಸ್ತಫ , ಮುಸ್ಲಿಮ್ ಒಕ್ಕೂಟದ ಸಹ ಸಂಚಾಲಕರಾದ ಕೆ.ಎಸ್. ಉಮಾರ್, ಒಕ್ಕೂಟದ ಮುಖಂಡರಾದ ಹಾಜಿ ಇಬ್ರಾಹಿಂ ಕತ್ತರ್ ಮಂಡೆಕೋಲು, ಕೆ.ಬಿ. ಅಬ್ದುಲ್ ಮಜೀದ್ , ಮಸೀದಿ ಸಮನ್ವಯ ಸಮಿತಿ ಸದಸ್ಯರಾದ ಅಬ್ದುಲ್ ಗಫೂರ್ ಕಲ್ಮಡ್ಕ, ಇಸ್ಮಾಯಿಲ್ ಪಡ್ಪಿನಂಗಡಿ ಆಗ್ರಹಿಸಿದ್ದಾರೆ.
ಅದೇ ರೀತಿ ಮೃತ ವ್ಯಕ್ತಿಯ ಕುಟುಂಬಕ್ಕೆ ಸರಕಾರ 25 ಲಕ್ಷ ರೂಪಾಯಿಗಳ ಪರಿಹಾರ ಘೋಷಿಸುವಂತೆಯೂ ಅವರು ಅಗ್ರಹಿಸಿದ್ದಾರೆ. ಮುಂದಿನ ದಿನಗಳಲ್ಲಿ ಮೃತಪಟ್ಟ ಯುವಕನ ಕುಟುಂಬದ ಕಾನೂನು ಹೋರಾಟಕ್ಕೆ ತಾಲೂಕು ಮುಸ್ಲಿಂ ಒಕ್ಕೂಟ ಪೂರ್ಣಪ್ರಮಾಣದ ಬೆಂಬಲವನ್ನು ಕೊಡಲಿದೆ. ಯುವಕನ ಅಗಲಿದ ಕುಟುಂಬಕ್ಕೆ ಮುಸ್ಲಿಮ್ ಒಕ್ಕೂಟ ಸಾಂತ್ವನ ತಿಳಿಸಿರುತ್ತದೆ. ಮುಸ್ಲಿಂ ಸಮುದಾಯ ಭಾವೋದ್ರೇಕಕ್ಕೆ ಒಳಗಾಗದೆ ಶಾಂತಿಯನ್ನು ಕಾಪಾಡಬೇಕೆಂದೂ ಒಕ್ಕೂಟ ಮನವಿ ಮಾಡಿದೆ.