ಜಾಗತಿಕ ಬಂಟ ಪ್ರತಿಷ್ಠಾನ ಪ್ರಶಸ್ತಿಗೆ ಕಂದಾವರ ರಘುರಾಮ ಶೆಟ್ಟಿ ಆಯ್ಕೆ…

ಮಂಗಳೂರು: ಜಾಗತಿಕ ಬಂಟ ಪ್ರತಿಷ್ಠಾನವು ಡಾ.ಡಿ.ಕೆ.ಚೌಟ ದತ್ತಿನಿಧಿಯಿಂದ ನೀಡುವ ವಾರ್ಷಿಕ ಪ್ರಶಸ್ತಿಗೆ ಹಿರಿಯ ಯಕ್ಷಗಾನ ವಿದ್ವಾಂಸ, ಪ್ರಸಂಗ ಕರ್ತ ಹಾಗೂ ನಿವೃತ್ತ ಶಿಕ್ಷಕ ಕಂದಾವರ ರಘುರಾಮ ಶೆಟ್ಟಿ ಆಯ್ಕೆಯಾಗಿದ್ದಾರೆ.
ಪ್ರೊ.ಜಿ.ಆರ್.ರೈ, ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಮತ್ತು ಪಳ್ಳಿ ಕಿಶನ್ ಹೆಗ್ಡೆ ಅವರನ್ನೊಳಗೊಂಡ ಆಯ್ಕೆ ಸಮಿತಿ ಶಿಫಾರಸಿನ ಮೇರೆಗೆ ಈ ಪ್ರಶಸ್ತಿ ನೀಡಲಾಗುವುದು ಎಂದು ಪ್ರತಿಷ್ಠಾನದ ಕಾರ್ಯದರ್ಶಿ ವೈ.ಸುಧೀರ್ ಕುಮಾರ್ ಶೆಟ್ಟಿ ಪ್ರಕಟಿಸಿದ್ದಾರೆ.
ಕಂದಾವರ ರಘುರಾಮ ಶೆಟ್ಟಿ:
ಕರ್ಕಿ ಸದಿಯಣ್ಣ ಶೆಟ್ಟಿ ಮತ್ತು ಕಂದಾವರ ಪುಟ್ಟಮ್ಮ ಶೆಟ್ಟಿ ದಂಪತಿಗೆ 1936 ಮಾರ್ಚ್12 ರಂದು ಜನಿಸಿದ ರಘುರಾಮ ಶೆಟ್ಟಿಯವರು ಕಂಡ್ಲೂರು ನೇತಾಜಿ ಹಿ.ಪ್ರಾ.ಶಾಲೆಯಲ್ಲಿ 35 ವರ್ಷ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದವರು. ಯಕ್ಷಗಾನ ಹಾಗೂ ನಾಟಕ ಕಲಾವಿದರಾಗಿ ಪ್ರಸಿದ್ಧರು. ಸುಮಾರು7 ನಾಟಕಗಳು, 37 ಯಕ್ಷಗಾನ ಪ್ರಸಂಗಗಳನ್ನು ಬರೆದಿದ್ದಾರೆ. ಸತೀ ಸೀಮಂತಿನಿ, ವಸು ವರಾಂಗಿ, ಶ್ರೀ ದೇವಿ ಬನಶಂಕರಿ, ಚೆಲುವೆ ಚಿತ್ರಾವತಿ, ಶೂದ್ರ ತಪಸ್ವಿನಿ, ವಧು ಮಾಧವಿ, ನಾಗನಂದನೆ, ಮೊದಲಾದ ಅವರ ಜನಪ್ರಿಯ ಪ್ರಸಂಗಗಳನ್ನು ತೆಂಕು – ಬಡಗು ತಿಟ್ಟಿನ ಮೇಳಗಳು ಆಡಿವೆ. ಕವಿ ಮುದ್ದಣ ಪ್ರಶಸ್ತಿ, ಸೀತಾನದಿ ಪ್ರಶಸ್ತಿ, ಯಕ್ಷ ಸಾಹಿತ್ಯ ಶ್ರೀ, ಪಟ್ಲ ಫೌಂಡೇಶನ್ ಪ್ರಶಸ್ತಿ, ಜಾನಪದ ಶ್ರೀ, ಕರಾವಳಿ ರತ್ನ, ಸಾಮಗ ಪ್ರಶಸ್ತಿ ಸೇರಿದಂತೆ ಇಪ್ಪತ್ತಕ್ಕೂ ಮಿಕ್ಕಿದ ಪ್ರಶಸ್ತಿಗಳನ್ನವರು ಪಡೆದಿದ್ದಾರೆ. ಅವರ ಜೀವನ ಸಾಧನೆ ಬಗ್ಗೆ ‘ಕೆಂದಾವರೆ’ ಎಂಬ ಅಭಿನಂದನ ಗ್ರಂಥ ಸಮರ್ಪಣೆಯಾಗಿದೆ. ಬಂಟ ಪ್ರತಿಷ್ಠಾನ ಪ್ರಶಸ್ತಿಯು ರೂ.25,000/- ನಗದು ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ಇದೇ ಅಕ್ಟೋಬರ್ 8 ರಂದುಮಂಗಳೂರಿನಲ್ಲಿ ಜಾಗತಿಕ ಬಂಟ ಪ್ರತಿಷ್ಠಾನದ ಅಧ್ಯಕ್ಷ ಡಾ.ಎ.ಜೆ.ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಜರಗುವ 26 ನೇ ಮಹಾಸಭೆಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು’ ಎಂದು ಸುಧೀರ್ ಕುಮಾರ್ ಶೆಟ್ಟಿ ತಿಳಿಸಿದ್ದಾರೆ.