ಫೆ.10 ರಿಂದ 12 – ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ಕೃಷಿ ಯಂತ್ರ ಮೇಳ- ಹಾಗೂ ಕನಸಿನ ಮನೆ ಬೃಹತ್ ಪ್ರದರ್ಶನ…
ಪುತ್ತೂರು: ಈ ವರ್ಷ ತನ್ನ ಸುವರ್ಣ ಮಹೋತ್ಸವವನ್ನು ಆಚರಿಸುತ್ತಿರುವ ಪ್ರತಿಷ್ಠಿತ ಸಹಕಾರಿ ಸಂಸ್ಥೆ ಕ್ಯಾಂಪ್ಕೋ ಲಿಮಿಟೆಡ್ ಮಂಗಳೂರು, ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಟಾನ ಹಾಗೂ ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿ ಇದರ ಸಂಯುಕ್ತ ಆಶ್ರಯದಲ್ಲಿ 5ನೇ ಕೃಷಿ ಯಂತ್ರ ಮೇಳ-2023 ಹಾಗೂ ಕನಸಿನ ಮನೆ ಎನ್ನುವ ಬೃಹತ್ ಪ್ರದರ್ಶನವು ಪುತ್ತೂರಿನ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ಫೆ.10 ರಿಂದ 12 ರವರೆಗೆ 3 ದಿನಗಳ ಕಾಲ ನಡೆಯಲಿದೆ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಕಲ್ಲಡ್ಕ ಪ್ರಭಾಕರ ಭಟ್ ಪತ್ರಿಕಾಗೋಷ್ಟಿಯಲ್ಲಿ ಹೇಳಿದರು.
ಇದುವರೆಗೆ ನಾಲ್ಕು ಯಂತ್ರಮೇಳಗಳು ಈ ವಿದ್ಯಾ ಸಂಸ್ಥೆಯ ಆವರಣದಲ್ಲಿ ನಡೆದಿದ್ದು 2019ರಲ್ಲಿ ನಡೆದ ಮೇಳವು ಅಭೂತಪೂರ್ವ ಯಶಸ್ಸನ್ನು ಕಂಡಿತ್ತು. ಸುಮಾರು 3 ಲಕ್ಷ ಜನ ಭೇಟಿ ನೀಡಿದ್ದರು. ಈ ಯಂತ್ರಮೇಳವು ಕ್ಷಣ ಕ್ಷಣಕ್ಕೂ ಬದಲಾಗುತ್ತಿರುವ ತಂತ್ರಜ್ಞಾನವನ್ನು ಕೃಷಿಕರಿಗೆ ತಲಪಿಸುವ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಇಲ್ಲಿ ಪ್ರಾತ್ಯಕ್ಷಿಕೆ, ಪ್ರದರ್ಶನ ಮತ್ತು ಮಾರಾಟದ ವ್ಯವಸ್ಥೆ ಇರುತ್ತದೆ. ದೇಶ ವಿದೇಶಗಳ ಅತ್ಯಾಧುನಿಕ ಕೃಷಿ ಯಂತ್ರೋಪಕರಣಗಳನ್ನು ಒಂದೇ ಸೂರಿನಡಿ ವೀಕ್ಷಿಸುವ ಅಪೂರ್ವ ಅವಕಾಶವನ್ನು ಕಲ್ಪಿಸಲಾಗಿದೆ. ಪ್ರಗತಿಪರ ಕೃಷಿಕರು ತಮ್ಮ ಅನುಭವದ ಆಧಾರದಲ್ಲಿ ತಾವೇ ತಯಾರಿಸಿದ ಯಂತ್ರಗಳನ್ನು ಇಲ್ಲಿ ಪ್ರದರ್ಶಿಸಲಾಗುತ್ತದೆ. ಕೃಷಿಕರ ಇಂದಿನ ಆವಶ್ಯಕತೆಗಳಿಗೆ ಸ್ಪಂದಿಸುವ ವಿಶೇಷ ಪ್ರಯತ್ನ ಇದಾಗಿದ್ದು ಆಧುನಿಕ ಕೃಷಿ ತಂತ್ರಜ್ಞಾನದ ಮಾಹಿತಿ ನೀಡುವ ವಿಚಾರ ಸಂಕಿರಣಗಳನ್ನು ಏರ್ಪಡಿಸಲಾಗಿದೆ.
ಕಟ್ಟಡ ನಿರ್ಮಾಣದ ತಾಂತ್ರಿಕತೆಯನ್ನು ಜನ ಸಾಮಾನ್ಯರಿಗೆ ತಲಪಿಸುವ ಉದ್ದೇಶದೊಂದಿಗೆ ಕನಸಿನ ಮನೆ ಎನ್ನುವ ಕಾರ್ಯಕ್ರಮವನ್ನು ನಡೆಸಲಾಗುತ್ತದೆ. ಸ್ಥಳೀಯವಾಗಿ ಸಿಗುವ ಸಾಮಗ್ರಿಗಳನ್ನು ಬಳಸಿ ಕಡಿಮೆ ವೆಚ್ಚದಲ್ಲಿ ಮನೆಗಳ ನಿರ್ಮಾಣ, ಕಟ್ಟಡ ನಿರ್ಮಾಣದಲ್ಲಿನ ಹೊಸ ಹೊಸ ವಿನ್ಯಾಸಗಳ ಮತ್ತು ತಂತ್ರಜ್ಞಾನದ ಬಗ್ಗೆ ಅರಿವು ಮೂಡಿಸುವುದು. ಹೊರಾಂಗಣ ಮತ್ತು ಒಳಾಂಗಣ ಶೃಂಗಾರ ಸಾಧನಗಳ ಪ್ರದರ್ಶನ, ಬಳಸಬಹುದಾದ ಮತ್ತು ಬಳಸಬೇಕಾದ ಪರಿಕರಗಳ ಪ್ರದರ್ಶನವನ್ನು ಇಲ್ಲಿ ಏರ್ಪಡಿಸಲಾಗಿದೆ.
ಯುವ ಜನತೆಯಲ್ಲಿ ಕೃಷಿ ಚಟುವಟಿಕೆಗಳ ಬಗ್ಗೆ ಆಸಕ್ತಿ ಮೂಡಿಸುವ ಸಲುವಾಗಿ ಹೈಸ್ಕೂಲು, ಕಾಲೇಜು ವಿದ್ಯಾರ್ಥಿಗಳು ಅನ್ವೇಷಿಸಿದ ಕೃಷಿ ಯಂತ್ರಗಳ ಪ್ರದರ್ಶನವನ್ನೂ ಏರ್ಪಡಿಸಲಾಗಿದೆ.
ಕೃಷಿಯಲ್ಲಿ ತಮ್ಮದೇ ಆದ ರೀತಿಯಲ್ಲಿ ಹೊಸತನವನ್ನು ಹುಡುಕಿ ಅದಕ್ಕೆ ಪೂರಕವಾದ ಯಂತ್ರವನ್ನು ಅನ್ವೇಷಿಸಿ ಅದನ್ನು ಬಳಸಿ ಯಶಸ್ವಿಯಾದ ರೈತರ ಯಂತ್ರಗಳನ್ನು ಪ್ರದರ್ಶಿಸುವುದಕ್ಕೆ ಉಚಿತವಾದ ವೇದಿಕೆಯನ್ನು ಇಲ್ಲಿ ನೀಡಲಾಗುತ್ತದೆ ಅಲ್ಲದೆ ಉತ್ತಮ ಸಂಶೋಧನಾಕಾರರನ್ನು ಗುರುತಿಸಿ ಗೌರವಿಸಲಾಗುತ್ತದೆ.
ಅಡಿಕೆ ಮತ್ತು ಇನ್ನಿತರ ತೋಟಗಾರಿಕಾ ಬೆಳೆಗಳೊಂದಿಗೆ ಅಂತರ ಬೆಳೆಯಾಗಿ ಔಷಧೀಯ ಸಸ್ಯಗಳು, ಅಡಿಕೆ ಬೆಳೆ ನಿರ್ವಹಣೆ ಮತ್ತು ರೋಗಗಳ ಹತೋಟಿ ಎಂಬ ವಿಷಯಗಳ ಬಗ್ಗೆ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ವಿಚಾರಗೋಷ್ಠಿ ನಡೆಯಲಿದೆ.
ಈ ಮೂರು ದಿನಗಳಲ್ಲಿ ಕರ್ನಾಟಕ, ಕೇರಳ ಮತ್ತು ತಮಿಳ್ನಾಡು ರಾಜ್ಯಗಳ ಸುಮಾರು 4 ಲಕ್ಷ ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಹಾಗಾಗಿ ಉತ್ಪಾದಕರು, ಮಾರಾಟಗಾರರು, ಪ್ರದರ್ಶಕರಿಗೆ ತಮ್ಮ ಉತ್ಪನ್ನಗಳನ್ನು ಪರಿಚಯಿಸಲು ಇದೊಂದು ಉತ್ತಮ ವೇದಿಕೆಯಾಗಿದೆ ಎಂದು ತಿಳಿಸಿದ ಡಾ.ಕಲ್ಲಡ್ಕ ಪ್ರಭಾಕರ ಭಟ್ ಅವರು ಮೂರು ದಿನಗಳ ಕಾಲ ನಡೆಯುವ ಈ ಬೃಹತ್ ಮೇಳದಲ್ಲಿ ಭಾಗವಹಿಸಿ ಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದು ವಿನಂತಿಸಿದರು.
ಕೃಷಿಯಂತ್ರ ವಿಭಾಗದಲ್ಲಿ 140 ಸ್ಟಾಲ್‍ಗಳಿವೆ. ಅಟೋಮೊಬೈಲ್ ವಿಭಾಗದಲ್ಲಿ 10, ಕನಸಿನ ಮನೆ ವಿಭಾಗದಲ್ಲಿ 73, ನರ್ಸರಿಯ 4, ವ್ಯಾಪಾರಕ್ಕೆ ಸಂಬಂಧಿಸಿ 26, ಆಹಾರ ಮಳಿಗೆಗಳು 19 ಹಾಗೂ ಸಾವಯವ ಕೃಷಿ ಮಳಿಗೆಗಳು 20 ಹೀಗೆ ಒಟ್ಟು 292 ಮಳಿಗೆಗಳು ಈ ಮೇಳದಲ್ಲಿದೆ.
ಕೃಷಿಯಂತ್ರ ಮೇಳದ ಹೆಚ್ಚಿನ ಮಾಹಿತಿಗೆ ಮತ್ತು ಸ್ಟಾಲ್‍ಗಳ ನೋಂದಾವಣೆಗಾಗಿ 9483203087 ಹಾಗೂ 9743250582 ನ್ನು ಸಂಪರ್ಕಿಸಬಹುದು. ಅದೇ ರೀತಿ ಕನಸಿನ ಮನೆ ಕಾರ್ಯಕ್ರಮದ ಹೆಚ್ಚಿನ ಮಾಹಿತಿಗೆ ಮತ್ತು ಸ್ಟಾಲ್‍ಗಳ ನೋಂದಾವಣೆಗಾಗಿ 9448328280 ಹಾಗೂ 7760300456 ನ್ನು ಸಂಪರ್ಕಿಸಬಹುದು. ಅಲ್ಲದೆ ವೆಬ್‍ಸೈಟ್ www.vcetputtur.ac.in ಹಾಗೂ ಇ-ಮೈಲ್ ವಿಳಾಸ [email protected] ನಲ್ಲಿಯೂ ಮಾಹಿತಿಗಳನ್ನು ಪಡೆದುಕೊಳ್ಳಬಹುದು.
ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ, ಕಾರ್ಯನಿರ್ವಾಹಕ ನಿರ್ದೇಶಕ ಕೃಷ್ಣಕುಮಾರ್.ಎಚ್.ಎಂ, ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಕೆ.ಎಮ್.ಕೃಷ್ಣ ಭಟ್, ಕ್ಯಾಂಪ್ಕೋ ನಿರ್ದೇಶಕರಾದ ಕೃಷ್ಣಪ್ರಸಾದ್ ಮಡ್ತಿಲ, ರಾಘವೇಂದ್ರ ಭಟ್ ಕೆದಿಲ, ಜನರಲ್ ಮ್ಯಾನೇಜರ್ ರೇಶ್ಮಾ ಮಲ್ಯ, ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಟಾನದ ಕಾರ್ಯನಿರ್ವಣಾಧಿಕಾರಿ ಡಾ.ಕೇಶವ ಭಟ್, ಕೃಷಿ ಯಂತ್ರ ಮೇಳದ ಪ್ರಧಾನ ಸಂಯೋಜಕ ರವಿಕೃಷ್ಣ.ಡಿ.ಕಲ್ಲಾಜೆ, ಮಾಧ್ಯಮ ವಿಭಾಗದ ಸಂಯೋಜಕ ಪ್ರೊ.ಆಶ್ಲೆ.ಡಿಸೋಜ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.