ಬಂಟ್ವಾಳ ತಾಲೂಕು ಗಮಕ ಸಮ್ಮೇಳನ ಉದ್ಘಾಟನೆ…

ಬಂಟ್ವಾಳ : ಬಿ.ಸಿ. ರೋಡ್ ಲಯನ್ಸ್ ಸೇವಾ ಮಂದಿರದಲ್ಲಿ ಮಾ. 12 ರಂದು ಕರ್ನಾಟಕ ಗಮಕ ಕಲಾ ಪರಿಷತ್ (ರಿ) ಬೆಂಗಳೂರು, ದ.ಕ. ಜಿಲ್ಲೆ, ಬಂಟ್ವಾಳ ತಾಲೂಕು ಘಟಕ ಜಂಟಿ ಆಶ್ರಮದಲ್ಲಿ ನಡೆದ ಬಂಟ್ವಾಳ ತಾಲೂಕು ದ್ವಿತೀಯ ಗಮಕ ಸಮ್ಮೇಳನವನ್ನು ರಾಜ್ಯ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ದೀಪ ಬೆಳಗಿಸಿ ಉದ್ಘಾಟಿಸಿದರು.
ಅವರನ್ನು ವೇದಿಕೆಯಲ್ಲಿ ಶಾಲು ಹೊದಿಸಿ ಗೌರವಿಸಲಾಯಿತು.ಬಳಿಕ ಮಾತನಾಡಿದ ಅವರು ಸರಕಾರದ ಪ್ರೊತ್ಸಾಹ ಗಮಕ ಕಲೆಗೂ ಬೇಕಾಗಿದೆ. ಚಿಕ್ಕ ಮಕ್ಕಳಲ್ಲಿ ಗಮಕ ಅಭ್ಯಾಸ ಮಾಡಿಸಬೇಕು. ಇದು ಮುಂದಕ್ಕೆ ಬೆಳೆಯುವುದು. ಯುವಕರ ಭಾಗವಹಿಸುವಿಕೆ ಅಗತ್ಯ ಎಂದರು.
ಕರ್ನಾಟಕ ರಾಜ್ಯ ಗಮಕ ಕಲಾ ಪರಿಷತ್ ಅಧ್ಯಕ್ಷೆ ಗಂಗಮ್ಮ ಕೇಶವಮೂರ್ತಿ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಇಂದಿನ ಕಾರ್ಯಕ್ರಮ ಮನ ಮುಟ್ಟಿದೆ. ಹೃದಯ ತಟ್ಟಿದೆ. ಗಮಕ ಇತರ ಭಾಷೆಗಳಿಗೂ ಮುಟ್ಟ ಬೇಕು. ಅದಕ್ಕಾಗಿ ಯೋಜನೆ ರೂಪಿಸಬೇಕಾಗಿದೆ ಎಂದರು.
ಬಂಟ್ವಾಳ ತಾಲೂಕು ದ್ವಿತೀಯ ಗಮಕ ಸಮ್ಮೇಳನದ ಸರ್ವಾಧ್ಯಕ್ಷೆ ಡಾ. ವಾರಿಜ ನಿರ್ಬೈಲು ಅವರು ಮಾತನಾಡಿ ಗಮಕ ಕಲೆಯ ಸೇವೆ ಸಲ್ಲಿಸುವ ಮೂಲಕ ಅದರ ರುಣ ತೀರಿಸುವ ಕೆಲಸ ಮಾಡುತ್ತಿದ್ದೇನೆ. ಗಮಕವು ಸಾಹಿತ್ಯ ಸಂಗೀತ ಸಾಂಸ್ಕೃತಿಕ ಕಲಾ ಪ್ರಕಾರ ಎಂದರು. ಅವರನ್ನು ವೇದಿಕೆಯಲ್ಲಿ ಸಮ್ಮಾನಿಸಲಾಯಿತು.
ಗಮಕ ಕಲಾ ಪರಿಷತ್ತು ದ . ಕ. ಜಿಲ್ಲಾಧ್ಯಕ್ಷ ಮಧೂರು ಮೋಹನ ಕಲ್ಲೂರಾಯ ಸಭೆಯನ್ನು ಉದ್ದೇಶಿಸಿ ಮಾತನಾಡಿ ಈ ಸಮ್ಮೇಳನ ಸಣ್ಣ ಮಟ್ಟಿನ ರಾಜ್ಯ ಸಮ್ಮೇಳನ ಎನ್ನಬಹುದು. ಜಿಲ್ಲೆಯಲ್ಲಿ ಎಂಟು ಸ್ಥಳೀಯ ಸಮ್ಮೇ ಳನಗಳು ಆಗಿದೆ.ಕವಿ ರಚಿಸಿದ ಕಾವ್ಯದ ಭಾವವನ್ನು ಗಮಕದ ಮೂಲಕ ಹೇಳುವುದಾಗಿದೆ. ಇದು ಧಾರ್ಮಿಕ ಸಾಹಿತ್ಯ ಪ್ರಕಾರವೂ ಆಗಿದೆ. ಇದು ಹಣ ಮಾಡುವ ಉದ್ದೇಶದಿಂದ ಮಾಡುವ ಕೆಲಸ ಅಲ್ಲ. ಯಕ್ಷಗಾನದ ಭಾಮಿನಿ ಮತ್ತು ವಾರ್ಧಕ ಗಮಕವೇ ಆಗಿದೆ ಎಂದರು.
ಶ್ರೀ ಕ್ಷೇ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಜಯಾನಂದ ಪಿ. ಮಾತನಾಡಿದರು.
ಸಾಮಾಜಿಕ ನೇತಾರ ಎ.ಸಿ. ಭಂಡಾರಿ , ತಾಲೂಕು ಘಟಕ ಪ್ರಧಾನ ಸಂಚಾಲಕ ಕೃಷ್ಣ ಶರ್ಮ ಅನಾರು ಸಭೆಯಲ್ಲಿ ಉಪಸ್ಥಿತರಿದ್ದರು.
ತಾಲೂಕು ಗಮಕ ಪರಿಷತ್ ಪ್ರಧಾನ ಕಾರ್ಯದರ್ಶಿ ರವೀಂದ್ರ ಕುಕ್ಕಾಜೆ ಕಾಯ೯ಕ್ರಮ ನಿರ್ವಹಿಸಿದರು.
ಸಮಾಜದ ಎಲ್ಲಾ ಆಯಾಮಗಳನ್ನು ಪ್ರತಿನಿಧಿಸುವುದೇ ಗಮಕ ಸಮ್ಮೇಳನದ ಉದ್ದೇಶ ಎಂದು ವ್ಯಾಖ್ಯಾನಿಸಿದ ಕರ್ನಾಟಕ ಗಮಕ ಕಲಾ ಪರಿಷತ್ ಬಂಟ್ವಾಳ ತಾಲೂಕು ಅಧ್ಯಕ್ಷ ಕೈಯ್ಯೂರು ನಾರಾಯಣ ಭಟ್ ಪ್ರಸ್ತಾವನೆ ನೀಡಿ ಸ್ವಾಗತಿಸಿದರು. ನಿವೃತ್ತ ಪ್ರಾಂಶುಪಾಲ ಡಾ. ಮಹಾಲಿಂಗ ಭಟ್ ವಂದಿಸಿದರು.

Sponsors

Related Articles

Back to top button