ನಾಡೋಜ ಪಾಟೀಲ ಪುಟ್ಟಪ್ಪ ಇನ್ನಿಲ್ಲ….
ಹುಬ್ಬಳ್ಳಿ : ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಕನ್ನಡ ಹೋರಾಟಗಾರ, ನಾಡೋಜ ಪಾಟೀಲ ಪುಟ್ಟಪ್ಪ ಅವರು ಸೋಮವಾರ ರಾತ್ರಿ ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ನಿಧನರಾದರು.
1921ರ ಜ.14 ರಂದು ಧಾರವಾಡ ಜಿಲ್ಲೆಯ ಹಾವೇರಿ ತಾಲೂಕು ಕುರಬಗೊಂಡದಲ್ಲಿ ಜನಿಸಿದ ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಹಲಗೇರಿ, ಬ್ಯಾಡಗಿ, ಹಾವೇರಿ, ಧಾರವಾಡದಲ್ಲಿ ಪಡೆದಿದ್ದು ಕರ್ನಾಟಕ ಕಾಲೇಜಿನಲ್ಲಿ ಪದವಿ, ಬೆಳಗಾವಿಯಲ್ಲಿ ಕಾನೂನು ಅಧ್ಯಯನ ಮಾಡಿದ್ದು ಮುಂಬಯಿ, ಹುಬ್ಬಳ್ಳಿಯಲ್ಲಿ ಪತ್ರಕರ್ತರಾಗಿ ಕಾರ್ಯ ನಿರ್ವಹಿಸಿದ್ದರು.
ಅವರು 1945 ರಲ್ಲಿ ತಮ್ಮ ವಕೀಲ ವೃತ್ತಿಗಾಗಿ ಮುಂಬಯಿಗೆ ತೆರಳಿದ್ದು, 1949 ರಲ್ಲಿ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು. ಅಮೆರಿಕದಿಂದ ಮರಳಿದ ಬಳಿಕ 1953ರಲ್ಲಿ ಹುಬ್ಬಳ್ಳಿಯಿಂದ ಪ್ರಕಟವಾಗುತ್ತಿದ್ದ “ನವಯುಗ” ದಿನಪತ್ರಿಕೆಯ ಸಂಪಾದಕತ್ವ ಮಾಡಿದರು. 1954 ಮಾರ್ಚ್ 10ರಂದು ಬಂಡವಾಳ ಯಾವುದೂ ಇಲ್ಲದೆ ಕೇವಲ ಲೆಕ್ಕಣಿಕೆಯಿಂದ ಪ್ರಪಂಚ ವಾರ ಪತ್ರಿಕೆಯ ಆರಂಭ ಮಾಡಿದರು.
ಸಾಹಿತಿಗಳು ಆಗಿದ್ದ ಅವರು ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ‘ನನ್ನದು ಈ ಕನ್ನಡ ನಾಡು’, ‘ನಮ್ಮದು ಈ ಭರತ ಭೂಮಿ’, ‘ಕರ್ನಾಟಕದ ಕಥೆ’, ‘ಸೋವಿಯತ್ ದೇಶ ಕಂಡೆ’, ‘ಸಾವಿನ ಮೇಜವಾನಿ’, ‘ಗವಾಕ್ಷ ತೆರೆಯಿತು’, ‘ಶಿಲಾಬಾಲಿಕೆ ನುಡಿದಳು’, ‘ಕಲಾ ಸಂಗಮ’, ‘ಬೆಳೆದ ಬದುಕು’, ‘ಭಾರತದ ಬೆಳಕು’, ‘ನೆಲದ ನಕ್ಷತ್ರಗಳು’, ‘ಸರ್ ಸಾಹೇಬರು’, ‘ಹೊಸಮನಿ ಸಿದ್ದಪ್ಪ’, ‘ಪ್ರಪಂಚ ಪಟುಗಳು’, ‘ನಮ್ಮ ಜನ ನಮ್ಮ ದೇಶ’, ‘ಈಗ ಹೊಸದನ್ನು ಕಟ್ಟೋಣ’, ‘ಪಾಪು ಪ್ರಪಂಚ’, ‘ಬದುಕುವ ಮಾತು’, ‘ಅಮೃತವಾಹಿನಿ’, ‘ವ್ಯಕ್ತಿ ಪ್ರಪಂಚ’, ‘ಸುವರ್ಣ ಕರ್ನಾಟಕ’ ಮುಂತಾದ 50ಕ್ಕಿಂತಲೂ ಹೆಚ್ಚು ಕೃತಿಗಳನ್ನು ಬರೆದಿದ್ದಾರೆ.
ರಾಜ್ಯೋತ್ಸವ ಪ್ರಶಸ್ತಿ 1976, ಟಿ.ಎಸ್.ಆರ್. ಪತ್ರಿಕೋದ್ಯಮ ಪ್ರಶಸ್ತಿ, ಕರ್ನಾಟಕ ವಿಶ್ವವಿದ್ಯಾಲಯದ ಡಿ.ಲಿಟ್ ಗೌರವ, ಹಂಪಿ ವಿಶ್ವವಿದ್ಯಾಲಯದ ನಾಡೋಜ ಪ್ರಶಸ್ತಿ, ಟಿಳಕ ಮೊಹರೆ ಪ್ರಶಸ್ತಿ, ಮಾಳವಾಡ ಪ್ರಶಸ್ತಿ, ವಜ್ರಕುಮಾರ ಪ್ರಶಸ್ತಿ, ವಿಶ್ವೇಶ್ವರಯ್ಯ ಪ್ರಶಸ್ತಿ, ಆದಿಚುಂಚನಗಿರಿ ಪ್ರಶಸ್ತಿ, ಭಾಲ್ಕಿ ಚೆನ್ನಬಸವೇಶ್ವರ ಪ್ರಶಸ್ತಿ, ಬಸವಶ್ರೀ ಪ್ರಶಸ್ತಿ, ಕರ್ನಾಟಕ ಚೂಡಾಮಣಿ ಪ್ರಶಸ್ತಿ ಹಾಗೂ ನೃಪತುಂಗ ಪ್ರಶಸ್ತಿ ಇವರಿಗೆ ದೊರೆತಿದೆ.