ವಿವೇಕಾನಂದ ಎಂಜಿನಿಯರಿಂಗ್ ಕಾಲೇಜು – ಬೀಳ್ಕೊಡುಗೆ ಸಮಾರಂಭ…
ಪುತ್ತೂರು: ಕಲಿಕೆ ಎನ್ನುವುದು ನಿರಂತರ, ಈ ಕಾಲೇಜಿನಲ್ಲಿ ಪದವಿಯನ್ನು ಮುಗಿಸಿ ನೀವು ತೆರಳುತ್ತಿರಬಹುದು ಆದರೆ ನಿಜವಾದ ಕಲಿಕೆ ಪ್ರಾರಂಭವಾಗುವುದು ಈಗಲೇ ಎಂದು ಉಪ್ಪಿನಂಗಡಿಯ ಇಂದ್ರಪ್ರಸ್ಥ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ.ಎಚ್.ಕೆ.ಪ್ರಕಾಶ್ ಹೇಳಿದರು.
ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಅಂತಿಮ ವರ್ಷದ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತಾಡಿದರು. ಸಮಾಜ ನಿಮ್ಮನ್ನು ಪರೀಕ್ಷಿಸುತ್ತಲೇ ಇರುತ್ತದೆ. ಅಲ್ಲಿ ನೀವು ಇತರರಿಗಿಂತ ಭಿನ್ನವಾಗಿ ಗುರುತಿಸಿಕೊಳ್ಳಬೇಕಾದರೆ ಹೊಸತನ್ನು ಕಲಿಯುತ್ತಲೇ ಇರಬೇಕು ಜತೆಯಲ್ಲಿ ಉತ್ತಮ ನಡವಳಿಕೆಯನ್ನೂ ರೂಡಿಸಿಕೊಳ್ಳಬೇಕು ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ.ಮಹೇಶ್ ಪ್ರಸನ್ನ ಕೆ ಮಾತನಾಡಿ ಕೊರೋನಾ ಸಮಯದಲ್ಲಿ ವಿದ್ಯಾರ್ಥಿಗಳು ಸಾಕಷ್ಟು ತೊಂದರೆಯನ್ನು ಅನುಭವಿಸಿದರು. ಪಾಠಗಳನ್ನು ಪರೀಕ್ಷೆಗಳನ್ನು ಕಳಕೊಂಡರು ಅದರ ಪರಿಣಾಮ ಮುಂದಿನ ದಿನಗಳಲ್ಲಿ ಗಣನೆಗೆ ಬರಬಹುದು. ಆ ಕೊರತೆಯನ್ನು ಮೆಟ್ಟಿನಿಲ್ಲುವ ಸಾಮರ್ಥ್ಯ ನಿಮಗೆ ಲಭಿಸಲಿ ಎಂದು ಶುಭ ಹಾರೈಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ವಿಶ್ವಾಸ್ ಶೆಣೈ ಮಾತನಾಡಿ ಇದುವರೆಗೆ ಕಲಿಕೆಯಲ್ಲಿ ಮತ್ತು ಶಿಸ್ತಿನಲ್ಲಿ ನಿಮ್ಮನ್ನು ತಿದ್ದಿ ತೀಡಿ ಸಚ್ಚಾರಿತ್ರ್ಯವಂತರನ್ನಾಗಿಸುವ ನಿಟ್ಟಿನಲ್ಲಿ ಉಪನ್ಯಾಸಕರು ಮತ್ತು ಪೋಷಕರು ಸಾಕಷ್ಟು ಶ್ರಮ ವಹಿಸಿದ್ದಾರೆ. ನಿಮ್ಮ ಜೀವನ ಪಯಣದಲ್ಲಿ ಇದರ ನೆನಪು ಬಂದರೆ ಅವರ ಶ್ರಮ ಸಾರ್ಥಕ ಎಂದರು. ಹಣದ ಬೆನ್ನು ಹತ್ತಿ ಹೋಗಬೇಡಿ ಸಮಾಜಕ್ಕೆ ಒಳಿತಾಗುವ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಿ ಎಂದರು. ನಮ್ಮನ್ನು ಈ ಮಟ್ಟಕ್ಕೆ ಬೆಳೆಸಿದ ಮಾತಾ ಪಿತರು, ಗುರುಗಳು, ವಿದ್ಯಾಸಂಸ್ಥೆಗಳು ಹಾಗೂ ಇತರರನ್ನು ನೋಯಿಸದೆ ಜೀವನವನ್ನು ಸಾರ್ಥಕಪಡಿಸಿಕೊಳ್ಳಬೇಕು ಎಂದರು.
ಕಾಲೇಜಿನ ವಾರ್ಷಿಕಾಂಕ ಅಂಕುರಂ ನ್ನು ಅತಿಥಿಗಳು ಈ ಸಂದರ್ಭದಲ್ಲಿ ಬಿಡುಗಡೆಗೊಳಿಸಿದರು. ಇದರ ಸಂಪಾದಕ ಪ್ರೊ.ಸುದರ್ಶನ್.ಎಂ.ಎಲ್ ಅಂಕುರಂನ ವಿಶೇಷತೆಗಳನ್ನು ಹಂಚಿಕೊಂಡರು.
ಕಾಲೇಜಿನಿಂದ ಬೀಳ್ಕೊಳ್ಳುವ ಎಲ್ಲಾ ವಿದ್ಯಾರ್ಥಿಗಳಿಗೆ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು.
ಕಾಲೇಜು ಆಡಳಿತ ಮಂಡಳಿಯ ನಿರ್ದೇಶಕ ಸತ್ಯನಾರಾಯಣ ಭಟ್, ಪ್ರಾಂಶುಪಾಲ ಡಾ.ಮಹೇಶ್ ಪ್ರಸನ್ನ.ಕೆ, ವಿಭಾಗ ಮುಖ್ಯಸ್ಥರಾದ ಪ್ರೊ.ಕೃಷ್ಣಮೋಹನ್, ಡಾ.ಆನಂದ್.ವಿ.ಆರ್, ಡಾ.ಮನುಜೇಶ್.ಬಿ.ಜೆ, ಪ್ರೊ.ಶ್ರೀಕಾಂತ್ ರಾವ್.ಕೆ, ಡಾ.ಗೋವಿಂದ.ಪಿ, ಪ್ರೊ.ರಮಾನಂದ್ ಕಾಮತ್, ಎಂಬಿಎ ವಿಭಾಗದ ಡಾ.ರಾಬಿನ್ ಶಿಂಧೆ, ಎಂಸಿಎ ವಿಭಾಗದ ನಿರ್ದೇಶಕಿ ಡಾ.ವಂದನಾ, ನೇಮಕಾತಿ ಮತ್ತು ತರಬೇತಿ ವಿಭಾಗದ ಮುಖ್ಯಸ್ಥೆ ಪ್ರೊ.ವಂದನಾ ಶಂಕರ್ ಮತ್ತು ಮುಖ್ಯ ಗ್ರಂಥಪಾಲಕ ದಿನೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಡಾ.ಮನುಜೇಶ್.ಬಿ.ಜೆ ಸ್ವಾಗತಿಸಿದರು, ಜೀವಿತ್ ವಂದಿಸಿದರು. ಚೈತ್ರ ಮತ್ತು ಸ್ನೇಹ ಕಾರ್ಯಕ್ರಮ ನಿರ್ವಹಿಸಿದರು.