ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಬಿ.ಜೆ.ಪಿ.ಯು ತಲೆಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲ — ಶೌವಾದ್ ಗೂನಡ್ಕ…
ಮಂಗಳೂರು:ಕಾಂಗ್ರೆಸ್ ಪಕ್ಷವು ಘೋಷಿಸಿರುವ ಗ್ಯಾರಂಟಿ ಯೋಜನೆಗಳು ಖಂಡಿತವಾಗಿಯೂ ಜಾರಿಗೆ ಬರುತ್ತದೆ ಅದರ ಬಗ್ಗೆ ಬಿ.ಜೆ.ಪಿ.ಪಕ್ಷವು ತಲೆಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲ, ರಾಜ್ಯದ ಜನರು ನಿಮ್ಮ ಆಡಳಿತವನ್ನು ನೋಡಿ ಹೀನಾಯವಾಗಿ ಸೋಲಿಸಿ ನಿಮ್ಮನ್ನು ಯಾಕೆ ಮನೆಗೆ ಕಳುಹಿಸಿದ್ದಾರೆ ಎಂಬುವುದರ ಕುರಿತಾಗಿ ಆತ್ಮಾವಲೋಕನ ಮಾಡಿಕೊಳ್ಳಿ ಎಂದು ಕೆ.ಪಿ.ಸಿ.ಸಿ.ವಕ್ತಾರ ಶೌವಾದ್ ಗೂನಡ್ಕ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಯೋಜನೆಗಳನ್ನು ಜಾರಿಗೊಳಿಸುವ ವೇಳೆ ಆರ್ಥಿಕ ಸ್ಥಿತಿಗತಿಗಳನ್ನು ಅವಲೋಕಿಸುವುದು ಅತ್ಯಗತ್ಯ, ಇದಕ್ಕೆ ಕೆಲವು ದಿನಗಳು ಬೇಕಾಗುತ್ತದೆ. ಆದರೆ ಇದನ್ನೇ ನೆಪವಾಗಿಟ್ಟುಕೊಂಡು ಕಾಂಗ್ರೆಸ್ ಪಕ್ಷವು ಗ್ಯಾರಂಟಿ ಘೋಷಣೆಗಳ ಮೂಲಕ ರಾಜ್ಯದ ಜನತೆಗೆ ಮೋಸ ಮಾಡಿದೆ ಎಂದು ಬಿ.ಜೆ.ಪಿ.ಯು ಹೇಳುತ್ತಿರುವುದು ಸರಿಯಲ್ಲ, ಸೋಲಿನ ಹತಾಶೆಯಿಂದ ಬಿ.ಜೆ.ಪಿ.ನಾಯಕರು ಈ ರೀತಿಯ ಮಾತುಗಳನ್ನಾಡುತ್ತಿದ್ದಾರೆ. ಸುಳ್ಳು ಹೇಳುವವರು ಯಾರೆಂದು ಜನರಿಗೆ ತಿಳಿದಿದೆ ಅದಕ್ಕಾಗಿಯೇ ಬಿ.ಜೆ.ಪಿ.ಗೆ ಜನರು ಈ ಚುನಾವಣೆಯಲ್ಲಿ ತಕ್ಕ ಪಾಠವನ್ನು ಕಲಿಸಿದ್ದಾರೆ ಎಂದವರು ಹೇಳಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷವು ಈ ಹಿಂದೆ ನೀಡಿದ ಎಲ್ಲಾ ಭರವಸೆಗಳನ್ನು ಈಡೇರಿಸಲು ಬದ್ಧವಾಗಿದೆ. ಬಿ.ಜೆ.ಪಿ.ಯಲ್ಲಿ ನಾಯಕತ್ವದ ಕೊರತೆಯಿದ್ದು, ವಿಪಕ್ಷ ನಾಯಕನನ್ನು ಈವರೆಗೆ ಆಯ್ಕೆ ಮಾಡಲು ಅವರಿಂದ ಸಾಧ್ಯವಾಗಿಲ್ಲ, ಬಿ.ಜೆ.ಪಿ.ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ರಾಜೀನಾಮೆಗೆ ಅವರದ್ದೇ ಪಕ್ಷದ ಕಾರ್ಯಕರ್ತರು ಆಗ್ರಹಿಸುತ್ತಿದ್ದಾರೆ. ಬಿ.ಜೆ.ಪಿ.ಗೆ ಅವರ ಸಮಸ್ಯೆಗಳನ್ನೇ ಬಗೆಹರಿಸಲು ಸಾಧ್ಯವಾಗುತ್ತಿಲ್ಲ ಇನ್ನು ರಾಜ್ಯದ ಜನರ ಸಮಸ್ಯೆಯನ್ನು ಇವರೆಲ್ಲಿ ಬಗೆಹರಿಸುತ್ತಾರೆಂದು ಶೌವಾದ್ ಗೂನಡ್ಕರವರು ಪ್ರಶ್ನಿಸಿದ್ದಾರೆ.